Advertisement

Sports; ಎಲ್ಲ ಇಲಾಖೆಯಲ್ಲೂ ಕ್ರೀಡಾ ಮೀಸಲಾತಿ ಸ್ವಾಗತಾರ್ಹ

12:23 AM Oct 20, 2023 | Team Udayavani |

ಇತ್ತೀಚೆಗಷ್ಟೇ ಚೀನದಲ್ಲಿ ಮುಗಿದ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿದ್ದು, ಮುಂದಿನ ದಿನಗಳಲ್ಲಿ ದೇಶದ ಕ್ರೀಡೆ ಇನ್ನಷ್ಟು ಸಾಧನೆ ಮಾಡುವುದು ಖಚಿತ. ಮುಂದೆ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟ ಬರಲಿದ್ದು, ಇದರಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಸಾಧನೆ ತೋರುವ ನಿರೀಕ್ಷೆಗಳು ಹೆಚ್ಚಾಗಿವೆ. ಕಳೆದ ಒಲಿಂಪಿಕ್ಸ್‌ ನಲ್ಲಿ ಕೇವಲ 7 ಪದಕಗಳಿಗೆ ಭಾರತ ಸಮಾಧಾನಪಟ್ಟುಕೊಂಡಿತ್ತು.

Advertisement

ಭಾರತವು ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ದೇಶಾದ್ಯಂತ ಉತ್ತಮ ಕ್ರೀಡಾಪಟುಗಳನ್ನು ಶೋಧ ಮಾಡಿ ಅವರಿಗೆ ತರಬೇತಿ ಕೊಡಿಸುವ ಕೆಲಸವನ್ನೂ ಮಾಡುತ್ತಿದೆ. ಹೀಗಾಗಿಯೇ ಏಷ್ಯನ್‌ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಭಾರತ ಸಫ‌ಲವಾಯಿತು ಎಂದೇ ಹೇಳಬಹುದು. ಕರ್ನಾಟಕದಲ್ಲಿಯೂ ಕ್ರೀಡಾಪಟುಗಳಿಗೆ ಉತ್ತಮವಾಗಿಯೇ ಬೆಂಬಲ ನೀಡಲಾಗುತ್ತಿದೆ. ಬುಧವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳನ್ನು ಸಮ್ಮಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಸಿಎಂ, ಕ್ರೀಡಾ ಪಟುಗಳ ಮೀಸಲಾತಿಯನ್ನು ಇನ್ನಷ್ಟು ಇಲಾಖೆಗಳಿಗೆ ವಿಸ್ತರಿಸುವ ಬಗ್ಗೆ ಹೇಳಿದ್ದಾರೆ. ಸದ್ಯ ಪೊಲೀಸ್‌ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಮಾತ್ರ ಕ್ರೀಡಾಪಟುಗಳಿಗೆ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಶೇ.2ರಷ್ಟು ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಈ ವಿಚಾರವು ಕ್ರೀಡಾಪಟುಗಳ ದೃಷ್ಟಿಯಿಂದ ಹೇಳುವುದಾದರೆ, ಅತ್ಯಂತ ಉತ್ತಮ ನಿರ್ಧಾರ. ಒಲಿಂಪಿಕ್ಸ್‌, ಏಷ್ಯಾಡ್‌, ಕಾಮನ್‌ವೆಲ್ತ್‌ ಅಥವಾ ಇನ್ನಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲು ವು  ದೊಂದೇ ಅಂತಿಮ ಗುರಿಯಲ್ಲ. ರಾಷ್ಟ್ರೀಯ, ರಾಜ್ಯ ಮಟ್ಟ ದಲ್ಲಿ ಯೂ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು. ಅಂದರೆ ಸ್ಥಳೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದವರೇ ಅಂತಾರಾಷ್ಟ್ರೀಯ ಮಟ್ಟಕ್ಕೂ ಹೋಗುತ್ತಾರೆ. ಹೀಗಾಗಿ ಕ್ರೀಡಾಪಟುಗಳಿಗೆ ಮೀಸಲಾತಿ ಯಂಥ ಸೌಲಭ್ಯ ಗಳನ್ನು ಒದಗಿಸಿದರೆ ಮತ್ತಷ್ಟು ಜನ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬಹುದು.

ಕೆಲವೊಮ್ಮೆ ಕ್ರೀಡಾಪಟುಗಳಿಗೆ ತಮ್ಮ ಶಿಕ್ಷಣಕ್ಕಿಂತ ಕ್ರೀಡೆಯಲ್ಲಿ ತರಬೇತಿಯೇ ಮುಖ್ಯವಾಗಿರುತ್ತದೆ. ಇದಕ್ಕಾಗಿ ಉನ್ನತ ಶಿಕ್ಷಣವನ್ನೂ ತ್ಯಾಗ ಮಾಡಬೇಕಾಗುತ್ತದೆ. ಅಲ್ಲದೆ ಇನ್ನೂ ಕೆಲವರಿಗೆ ಕ್ರೀಡೆಯಲ್ಲಿನ ಸಾಧನೆಗಾಗಿ ಶಿಕ್ಷಣವನ್ನು ಮುಂದುವರಿಸಲೂ ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಕ್ರೀಡೆಯಲ್ಲಿ ಭಾಗಿಯಾಗುವ ಅಥವಾ ಆಸಕ್ತಿಯುಳ್ಳ ಮಕ್ಕಳಿಗೆ ಪೋಷಕರೇ ಅಡ್ಡಿಯಾಗುವುದುಂಟು. ಅಂದರೆ ಕ್ರೀಡೆಯನ್ನೇ ಜೀವನವೆಂದು ತಿಳಿದು, ಶಿಕ್ಷಣವನ್ನು ಅವಗಣಿಸಿದರೆ ಭವಿಷ್ಯಕ್ಕೆ ಅಡ್ಡಿಯಾಗಬಹುದು, ಉತ್ತಮ ಉದ್ಯೋಗ ಸಿಗದೇ ಹೋಗಬ ಹುದು ಎಂಬ ಆತಂಕವೂ ಪೋಷಕರಲ್ಲಿ ಇರುತ್ತದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪೋಷಕರು, ಮಕ್ಕಳನ್ನು ಕ್ರೀಡೆಯಲ್ಲಿ ತೊಡ ಗಿಸಿ ಕೊಳ್ಳಲು ಬಿಡದಿರುವ ಸಂಗತಿಗಳೂ ಇವೆ. ಇಂಥ ಸಂದರ್ಭದಲ್ಲಿ ಸರಕಾರ ಗ ‌ಳು ಕ್ರೀಡಾಪಟುಗಳಿಗೆ ಮೀಸಲಾತಿ ನೀಡಿದರೆ, ಆಗ ಸುಲಭ ವಾಗಿ ಸರಕಾರಿ ಉದ್ಯೋಗ ಸಿಗುವ ಅವಕಾಶವಿರುತ್ತದೆ. ಭವಿಷ್ಯಕ್ಕೂ ಸಮಸ್ಯೆಯಾಗದಿರುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಹೀಗಾಗಿ, ಸರಕಾರಗಳು ಮೀಸಲಾತಿ ಜತೆಗೆ, ಕ್ರೀಡಾಪಟುಗಳ ತರ ಬೇತಿ ಗೂ ಹೆಚ್ಚಿನ ಆಸ್ಥೆ ವಹಿಸಬೇಕು. ಅವರ ಭವಿಷ್ಯ ಉಜ್ವಲವಾ ಗು ವಂತೆ ಮಾಡಬೇಕು. ಈ ಮೂಲಕ ದೇಶದ, ರಾಜ್ಯದ ಕೀರ್ತಿ ಹೆಚ್ಚಾಗುವಂತೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next