Advertisement

ಒಲಿಂಪಿಕ್ಸ್ ಮುಂದೂಡಿಕೆ: ಕ್ರೀಡಾಪಟುಗಳಿಗೆ ಕಾಡುತ್ತಿದೆ ಮಾನಸಿಕ ಕುಸಿತ ಭೀತಿ

05:16 PM Apr 09, 2020 | keerthan |

ನವದೆಹಲಿ: ಕೋವಿಡ್-19ದಿಂದ ಜಗತ್ತು ದಿಗ್ಬಂಧನದಲ್ಲಿದೆ. ಇಲ್ಲಿ ಅತಿಯಾಗಿ ಸಮಸ್ಯೆಗೆ ಸಿಕ್ಕಿರುವವರು ದಿನವಹಿ ಕೆಲಸ ಮಾಡಿದರೆ ಮಾತ್ರ ಜೀವನ ನಿರ್ವಹಿಸಲು ಸಾಧ್ಯ ಎನ್ನುವವರು. ಮಹತ್ವಾಕಾಂಕ್ಷೆ ಇಟ್ಟುಕೊಂಡು ಮುಂದಿನ ಕ್ರೀಡಾಕೂಟಗಳಿಗೆ ಸಿದ್ಧವಾಗುತ್ತಿದ್ದ ಕ್ರೀಡಾಪಟುಗಳು. ಈಗ ಸುದೀರ್ಘ‌ ದಿಗ್ಬಂಧನದಿಂದ ಹೊರಗೆ ಹೋಗುವಂತಿಲ್ಲ, ಆಡುವಂತಿಲ್ಲ, ಕನಿಷ್ಠ ಅಭ್ಯಾಸವನ್ನೂ ಮಾಡುವಂತಿಲ್ಲ ಎಂಬ ಪರಿಸ್ಥಿತಿಯಿಂದ ಮಾತ್ರ ಕ್ರೀಡಾಪಟುಗಳು ದಿಗಿಲಾಗಿದ್ದಾರೆ. ಅಂತಹವರ ಮಾನಸಿಕ ಆರೋಗ್ಯ ಕಾಪಾಡುವುದು ಸವಾಲಿನ ಕೆಲಸ, ಅವರು ಅಸ್ವಸ್ಥರಾಗಬಹುದು ಎಂದು ಮನೋವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಸ್ಪರ್ಧೆ ಮಾಡಿಕೊಂಡೇ ಬದುಕುವವರು, ಅದರಿಂದಲೇ ಜೀವನ, ಗೌರವ ಕಂಡು ಕೊಳ್ಳುವವರು ಅದರ ಅನುಪಸ್ಥಿತಿಯಲ್ಲಿ ಪರದಾಡುತ್ತಾರೆ. ಅವರಿಗೆ ಭವಿಷ್ಯದ ಬಗ್ಗೆ ಆತಂಕ ಕಾಡುತ್ತದೆ. ಅಭ್ಯಾಸದ ಕೊರತೆಯಿಂದ ತಮ್ಮ ಸಾಮರ್ಥಯವೇ ಕುಂದುತ್ತದೆ, ಭವಿಷ್ಯದಲ್ಲಿತಾವು ಸೋಲಬಹುದು ಎಂಬ ಹೆದರಿಕೆ ಕಾಡುತ್ತದೆ. ಅದು ವ್ಯಾಧಿಯಾಗಿ ಯೂ ಪರಿವರ್ತನೆಯಾಗುವ ಸಾಧ್ಯತೆ ಯಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಆಸ್ಟ್ರೇಲಿಯದ ಈಜುಪಟು, ರಿಯೋ ಒಲಿಂಪಿಕ್ಸ್‌ 100 ಮೀ. ಫ್ರಿಸ್ಟೈಲ್‌ನಲ್ಲಿ ಚಿನ್ನ ಗೆದ್ದಿರುವ ಕೈಲ್‌ ಚಾಮರ್ಸ್‌ ಇಂತಹದ್ದೇ ಪರಿಸ್ಥಿತಿಯಲ್ಲಿದ್ದಾರೆ. ಅವರು ಈ ಬಾರಿಯ ಟೋಕೊಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿ ಮತ್ತೆ ಚಿನ್ನ ಗೆಲ್ಲುವ ಹಂಬಲದಲ್ಲಿದ್ದರು. ಅಷ್ಟರಲ್ಲಿ ಕೋವಿಡ್-19ದಿಂದ ಒಲಿಂಪಿಕ್ಸ್‌ ಮುಂದೂಡಿಕೆಯಾಗಿದೆ. ಅಲ್ಲಿಯವರೆಗೆ ಕಾಯಬೇಕಾದ ಅನಿವಾರ್ಯತೆ ಒಂದು ಕಡೆ. ಇನ್ನೊಂದು ಕಡೆ ಅಭ್ಯಾಸವನ್ನೂ ಮಾಡಲಾಗದ ಸ್ಥಿತಿ. ಒಬ್ಬ ಅಥ್ಲೀಟ್‌ಗೆ ಸ್ಪರ್ಧೆಗಿಂತ ಅಭ್ಯಾಸವೇ ಹೆಚ್ಚು ಆನಂದದ ಕೆಲಸ.  ಆದರೆ ಮನೆಯಲ್ಲಿ ಈಜುಕೊಳವೇ ಇಲ್ಲ. ಮಾಡುವುದೇನು? ಈಗ ಅವರು ಬಾಡಿಗೆಗೆ ಒಂದು ಈಜುಕೊಳವನ್ನು ತರಿಸಿಕೊಂಡಿದ್ದಾರೆ!

ವಿಶ್ವದ ಸಾವಿರಾರು ಕ್ರೀಡಾಪಟುಗಳಿಗೆ ಈಗ ಸರಿಯಾಗಿ ಅಭ್ಯಾಸ ಮಾಡಲಾಗದ ಸ್ಥಿತಿ. ಹಾಗೆಯೇ ಇನ್ನೊಂದು ವರ್ಷ ಒಲಿಂಪಿಕ್ಸ್‌ ಮುಂದೂಡಲ್ಪಟ್ಟಿದ್ದರಿಂದ ಹಲವಾರು ಸಮಸ್ಯೆಗಳು ಉದ್ಭವಿಸಿವೆ. ಆಗ ಎಷ್ಟೋ ಜನರಿಗೆ ವಯಸ್ಸಾಗಿರುತ್ತದೆ, ದೈಹಿಕ ದಾಢ್ಯತೆ ಕುಸಿದಿರುತ್ತದೆ, ಇತರೆ ಸ್ಪರ್ಧಿಗಳು ಹುಟ್ಟಿ ಕೊಂಡಿರುತ್ತಾರೆ. ಇವೆಲ್ಲವೂ ಮುಂದೇನು ಎಂಬ ಆತಂಕವನ್ನು ಉಂಟು ಮಾಡಿವೆ. ಆದ್ದರಿಂದ ಹಲವರಿಗೆ ಮಾನಸಿಕ ಸಮಸ್ಯೆ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next