Advertisement

ಕ್ರೀಡೆ ಪಠ್ಯೇತರವಲ್ಲ, ಶಿಕ್ಷಣದ ಅವಿಭಾಜ್ಯ ಅಂಗ: ಸಚಿವ ರಿಜಿಜು

10:03 AM Jan 04, 2020 | Team Udayavani |

ಮೂಡುಬಿದಿರೆ: ಕ್ರೀಡೆಯನ್ನು ಪಠ್ಯೇತರ ವಿಷಯವಾಗಿಸುವ ಬದಲಾಗಿ ಅದನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ರೂಪಿಸಲು ಪ್ರಧಾನಿ ಮೋದಿ ಅವರ ಆಶಯ, ಮಾರ್ಗದರ್ಶನದಲ್ಲಿ ಕೇಂದ್ರ ಸರಕಾರ ಎಲ್ಲ ಕ್ರಮ ಕೈಗೊಳ್ಳುತ್ತಿದೆ ಎಂದು ಕೇಂದ್ರ ಯುವ ಸಬಲೀಕರಣ, ಕ್ರೀಡಾ ಸಚಿವ ಕಿರಣ್‌ ರಿಜಿಜು ತಿಳಿಸಿದರು.

Advertisement

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ., ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಖೀಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟದ ಸಹಭಾಗಿತ್ವದಲ್ಲಿ ಮೂಡುಬಿದಿರೆ ಸ್ವರಾಜ್ಯ ಮೈದಾನ ಕ್ರೀಡಾಂಗಣದಲ್ಲಿ ಗುರುವಾರ ಪ್ರಾರಂಭವಾದ 80ನೇ ಅ.ಭಾ. ಅಂತರ್‌ ವಿ.ವಿ. ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಳುಗಳಿಗೆ ಜೀವನಪರ್ಯಂತ ಸಹಾಯ ನೀಡುವ, ಪದಕಗಳನ್ನು ಜಯಿಸಿ ದವರಿಗೆ ವೈದ್ಯಕೀಯ ಸವಲತ್ತುಗಳನ್ನು ಒದಗಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ರಿಜಿಜು ಪ್ರಕಟಿಸಿದರು.

ಒಲಿಂಪಿಕ್ಸ್‌ನ ಪದಕಕ್ಕೆ ಸುದೀರ್ಘ‌ ಸಿದ್ಧತೆ ಬೇಕು
ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸುವುದು ಸುಲಭದ ಸಂಗತಿಯಲ್ಲ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ನಾವು ಪದಕ ಗೆಲ್ಲಬೇಕಾಗಿದೆ. ಅನಂತರದ ಪ್ಯಾರಿಸ್‌, ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗಳಲ್ಲೂ ಪದಕ ಜಯಿಸಲು ನಾವು ಸಾಕಷ್ಟು ಸಿದ್ಧತೆ ನಡೆಸಬೇಕಾಗಿದೆ. ಭಾರತದಲ್ಲಿರುವಷ್ಟು ಯುವಶಕ್ತಿ ಎಲ್ಲೂ ಇಲ್ಲ. ಇದು ಕ್ರೀಡಾರಂಗದ ಮೂಲಕ ಸಾಧಕ ಶಕ್ತಿಯಾಗಿ ಹೊರಹೊಮ್ಮಬೇಕಾಗಿದೆ’ ಎಂದು ಅವರು ಹೇಳಿದರು.

ರಾ.ಗಾಂ. ಆರೋಗ್ಯ ವಿ.ವಿ. ಕುಲಪತಿ ಡಾ| ಎಸ್‌. ಸಚ್ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್‌ ಮೂಲಕ ನಡೆಯುತ್ತಿರುವ ಕ್ರೀಡಾಕ್ರಾಂತಿಯಿಂದ ಈ ನೆಲದಿಂದಲೇ ಭಾವೀ ಒಲಿಂಪಿಯನ್‌ಗಳು ಮೂಡಿಬರಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.

ರಾಜ್ಯ ಯುವ ಸಬಲೀಕರಣ, ಕ್ರೀಡಾ ಸಚಿವ ಸಿ.ಟಿ. ರವಿ, ಶಾಸಕರಾದ ಉಮಾನಾಥ ಕೋಟ್ಯಾನ್‌, ರಘುಪತಿ ಭಟ್‌, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ, ಉದ್ಯಮಿ ಬಂಜಾರ ಪ್ರಕಾಶ್‌ ಶೆಟ್ಟಿ, ಗುರ್ಮೆ ಸುರೇಶ್‌ ಶೆಟ್ಟಿ, ರಾ.ಗಾಂ. ಆರೋಗ್ಯ ವಿ.ವಿ. ಕುಲಸಚಿವ (ಮೌಲ್ಯಮಾಪನ) ಡಾ| ಕೆ.ಬಿ. ಲಿಂಗೇಗೌಡ, ಉಪಕುಲ ಸಚಿವ, ಕೂಟದ ಸಂಘಟನ ಕಾರ್ಯದರ್ಶಿ ಡಾ| ಬಿ. ವಸಂತ ಶೆಟ್ಟಿ ವೇದಿಕೆಯಲ್ಲಿದ್ದರು.

Advertisement

ವಿಶೇಷ ಸನ್ಮಾನ
ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸತೀಶ್‌ ರೈ, ಅಶ್ವಿ‌ನಿ ಅಕ್ಕುಂಜೆ ಅವರನ್ನು ಸಮ್ಮಾನಿಸಲಾಯಿತು. ಪಟ್ಟಿಯಲ್ಲಿದ್ದ ಎಂ.ಆರ್‌. ಪೂವಮ್ಮ , ಮೋಹನ್‌ ಹಾಗೂ ಧಾರುಣ್‌ ಅಯ್ಯಸಾಮಿ ಅವರ ಪರವಾಗಿ ಪೋಷಕರು ಸಮ್ಮಾನ ಸ್ವೀಕರಿಸಿದರು. ಸಮ್ಮಾನವು ರೂ. 10,000 ನಗದು ಹಾಗೂ ಸಾಂಪ್ರದಾಯಿಕ ಗೌರವವನ್ನು ಹೊಂದಿದೆ. ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅತಿಥಿ ಗಳಿಗೆ ಸ್ಮರಣಿಕೆ ನೀಡಿದರು. ರಾಜೇಶ್‌ ಡಿ’ಸೋಜಾ, ರೂಬಿ ಕುಮಾರ್‌, ಮುತ್ತು ಎ.ಎಲ್‌. ನಿರೂಪಿಸಿದರು. ರಾ.ಗಾ. ಆ.ವಿ.ವಿ. ಕುಲಸಚಿವ ಡಾ| ಶಿವಾನಂದ ಕಾಪಶಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ 5,000 ವಿದ್ಯಾರ್ಥಿಗಳು, ಕಲಾವಿದರನ್ನು ಒಳ ಗೊಂಡ ವರ್ಣರಂಜಿತ ಮೆರವಣಿಗೆ ನಡೆಯಿತು.

ನ್ಯೂ ಇಂಡಿಯಾ ಫಿಟ್‌ ಇಂಡಿಯಾ ಆಗಬೇಕಿದೆ
ಕ್ರೀಡಾ ಚಟುವಟಿಕೆಗಳ ಕುರಿತಾಗಿ ನಮ್ಮ ಸಾಂಪ್ರದಾಯಿಕ, ಸಾಮಾನ್ಯ ಕಲ್ಪನೆಯನ್ನು ಬದಲಾಯಿಸಿಕೊಳ್ಳಬೇಕಿದೆ. ಪ್ರಧಾನಿ ಮೋದಿ ಅವರ ಕನಸಿನ “ನ್ಯೂ ಇಂಡಿಯಾ’ ಆಗಬೇಕಾದರೆ “ಫಿಟ್‌ ಇಂಡಿಯಾ’ ಎಂಬುದನ್ನು ಸಾಕಾರಗೊಳಿಸಬೇಕಾಗಿದೆ. ಮೊದಲು ನಮ್ಮ ಎಲ್ಲ ಸಂಸದರಿಂದ ತೊಡಗಿ ಎಲ್ಲ ಸ್ತರಗಳ ಜನಪ್ರತಿನಿಧಿಗಳು ಜನಸಾಮಾನ್ಯರಿಗೆ ಮಾದರಿಯಾಗುವಂತೆ ಒಂದಿಲ್ಲೊಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಾವು “ಫಿಟ್‌ ಇಂಡಿಯಾ’ದ ಪ್ರಜೆಗಳಾಗಬೇಕು; ಒಟ್ಟಿನಲ್ಲಿ ಸಾಮೂಹಿಕ ಪಾಲ್ಗೊಳ್ಳುವಿಕೆ ನಡೆಯಬೇಕಾಗಿದೆ’ ಎಂದು ಕರೆ ನೀಡಿದರು. ಕ್ರೀಡಾ ಸಂಸ್ಕೃತಿ ಬೆಳೆಸಲು ಸರಕಾರ ಕಾರ್ಪೊರೇಟ್‌ ವಲಯದ ಸಹಕಾರವನ್ನೂ ನಿರೀಕ್ಷಿಸುತ್ತಿದೆ’ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next