ರಾಯಚೂರು: ಸದಾ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಆರೋಗ್ಯಕರ ಜೀವನಕ್ಕೆ ಕ್ರೀಡೆ, ವ್ಯಾಯಾಮ, ಯೋಗದಂಥ ಚಟುವಟಿಕೆಗಳು ಅವಶ್ಯಕ ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ನೌಕರರು ವರ್ಷವಿಡೀ ಕಚೇರಿ ಕೆಲಸಗಳಲ್ಲಿ ತೊಡಗಿರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ನೌಕರನು ತನ್ನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ವ್ಯಾಯಾಮ ಹಾಗೂ ಪ್ರಾಣಾಯಾಮದಂತಹ ಚಟುವಟಿಕೆಯಲ್ಲಿ ತೊಡಗಬೇಕು. ಉತ್ಸಾಹದಿಂದ ಕೆಲಸಗಳನ್ನು ನಿರ್ವಹಿಸಲು ನೌಕರರಿಗೆ ವಿವಿಧ ರೀತಿಯ ಕ್ರೀಡಾಕೂಟದ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಆಯೋಜಿಸುವುದು ಅತ್ಯವಶ್ಯಕ ಎಂದರು.
ದಿನಾಲೂ ಸರ್ಕಾರಿ ಸೇವೆಯಲ್ಲಿ ನಿರತರಾಗಿರುವು ದರಿಂದ ಅವರಿಗೆ ಮಾನಸಿಕ ಒತ್ತಡಗಳಿಂದ ಹೊರಬರಲು ಆಗುವುದಿಲ್ಲ. ಹಾಗಾಗಿ ನೌಕರರ ಸಂಘದಿಂದ ಕ್ರೀಡೆಗಳನ್ನು ಹೆಚ್ಚಿನ ಮಟ್ಟದಲ್ಲಿ ಆಯೋಜಿಸಬೇಕು. ಅವರಿಗೆ ಮಾನಸಿಕವಾಗಿ ಆರೋಗ್ಯವಂತರನ್ನಾಗಿಸಲು ಕ್ರೀಡೆಗಳಿಂದ ಮಾತ್ರ ಸಾಧ್ಯ ಎಂದರು. ಅಪರ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಗರಸಭೆಯ ನೂತನ ಅಧ್ಯಕ್ಷೆ ಲಲಿತಾ ಕಡಗೋಲು ಆಂಜನೆಯ, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯಕ್, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಹಾಗೂ ಸರ್ಕಾರಿ ನೌಕರರ ಸಂಘದ ವಿವಿಧ ಸದಸ್ಯರಾದ ಚಂದ್ರಶೇಖರ ಹಿರೇಮಠ, ಅಯ್ಯನಗೌಡ, ಶ್ರೀಶೈಲ ಗೌಡ, ಹನುಮಂತರಾಯ, ಸಂತೋಷ, ನಂದಿನಿ ಆನಂದ, ಮೋಹನ, ಶ್ರೀನಿವಾಸ್ ಸೇರಿ ಅನೇಕರಿದ್ದರು.