ಧಾರವಾಡ : ಇಲ್ಲಿನ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ಕಲಾ ಕಾಲೇಜು ವತಿಯಿಂದ ನಡೆದಿರುವ 2023-24 ನೇ ಕವಿವಿ ಮಟ್ಟದ 70ನೇ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದ 2ನೇ ದಿನವಾದ ರವಿವಾರವು 26 ಹಾಗೂ 10 ವರ್ಷದ ಎರಡು ಹಳೆಯ ಕೂಟ ದಾಖಲೆಗಳು ಧೂಳಿಪಟವಾಗಿವೆ.
ಪುರುಷರ ವಿಭಾಗದ 1500 ಮೀಟರ್ ಓಟದಲ್ಲಿ 26 ವರ್ಷದ ಹಿಂದೆ ಧಾರವಾಡದಲ್ಲಿಯೇ 1997 ರಲ್ಲಿ ಬೆಳಗಾವಿಯ ಲಿಂಗರಾಜ್ ಕಾಲೇಜಿನ ಆರ್.ಎಂ.ಕುರುಬಗಟ್ಟಿ 4:00.97 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದ್ದರು. ಇದೀಗ 26 ವರ್ಷದ ಬಳಿಕ ಧಾರವಾಡದಲ್ಲಿಯೇ ಕರ್ನಾಟಕ ಕಲಾ ಮಹಾವಿದ್ಯಾಲಯದ ನಾಗರಾಜ್ ದಿವಟೆ ಕ್ರೀಡಾಪಟು 1500 ಮೀಟರ್ ಓಟವನ್ನು 3:56.66 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ಹಳೆಯ ದಾಖಲೆ ಮುರಿದು, ನೂತನ ಕೂಟ ದಾಖಲೆ ಬರೆದಿದ್ದಾರೆ.
ಇನ್ನು ಶನಿವಾರವಷ್ಟೇ 100 ಮೀಟರ್ ಓಟದಲ್ಲಿ ಪ್ರಿಯಾಂಕಾ ಕೆ ಕ್ರೀಡಾಪಟುವಿನ 10 ವರ್ಷದ ಹಿಂದಿನ ದಾಖಲೆ ಮುರಿದಿದ್ದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕ್ರೀಡಾಪಟುವಾದ ಕಾರವಾರದ ನಯನಾ ಕೊಕರೆ, ರವಿವಾರ ನಡೆದ 200 ಮೀಟರ್ ಓಟದಲ್ಲಿಯೂ ಪ್ರಿಯಾಂಕಳ ಈ ಹಿಂದಿನ 10 ವರ್ಷದ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ. 2013 ರಲ್ಲಿ ಧಾರವಾಡದಲ್ಲಿಯೇ ಕೆಸಿಡಿ ಕಾಲೇಜಿನ ಪ್ರಿಯಾಂಕಾ ಕೆ ದಾಖಲಿಸಿದ್ದ 25.46 ಸೆಕೆಂಡ್ ದಾಖಲೆಯನ್ನು ನಯನಾ, 200 ಮೀಟರ್ ಓಟವನ್ನು 24.88 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿರುವುದು ವಿಶೇಷತೆ.
ಇನ್ನು ಎರಡು ದಿನಗಳಲ್ಲಿ ಏಳು ಚಿನ್ನ, ಐದಯ ಬೆಳ್ಳಿ ಪದಕ ಸೇರಿದಂತೆ ಒಟ್ಟು 12 ಪದಕಗಳೊಂದಿಗೆ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ಅಗ್ರಸ್ಥಾನದಲ್ಲಿ ಮುನ್ನಡೆ ಸಾಽಸಿದೆ. ಏಳು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಮೂರು ಪದಕಗಳೊಂದಿಗೆ ಕರ್ನಾಟಕ ಕಲಾ ಮಹಾವಿದ್ಯಾಲಯವು ಒಟ್ಟು 14 ಪದಕಗಳನ್ನು ಪಡೆದುಕೊಂಡು ದ್ವಿತೀಯ ಸ್ಥಾನದಲ್ಲಿ ಮುನ್ನಡೆದಿದೆ. ಇದಲ್ಲದೇ ಧಾರವಾಡದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಕಲಾ ಮತ್ತು ವಾಣಿಜ್ಯ ಕಾಲೇಜು ಎರಡು ಚಿನ್ನ, ತಲಾ 1 ಬೆಳ್ಳಿ, ಕಂಚು ಪದಕ ಪಡೆದು ತೃತೀಯ ಸ್ಥಾನದಲ್ಲಿದೆ.