Advertisement

Sports Corner: ಹಾಕಿ ಮಾಂತ್ರಿಕನ ಜನ್ಮದಿನವೇ ರಾಷ್ಟ್ರೀಯ ಕ್ರೀಡಾ ದಿನ

03:18 PM Aug 25, 2024 | Team Udayavani |

ಕಳೆದ ಒಂದು ವಾರದ ಹಿಂದೆ ಒಲಂಪಿಕ್ಸ್‌ ಕ್ರೀಡಾಕೂಟವು ಕೊನೆಗೊಂಡು, ಭಾರತದ ಕ್ರೀಡಾಪಟುಗಳ ಸಾಧನೆಗೆ ಇಡೀ ದೇಶವೆ ಬೆಂಬಲವಾಗಿ ನಿಂತು ಶಹಬ್ಟಾಶ್‌ ಹೇಳಿ ಸಂಭ್ರಮಿಸಿತ್ತು. ಪದಕಗಳು ಕೇವಲ ಆರು ಬಂದಿರಬಹುದು. ಆದರೆ ಅದರ ಹಿಂದಿನ ಶ್ರಮ, ಶ್ರದ್ಧೆ, ಆಸಕ್ತಿ ಮತ್ತು ನಿರಂತರ ಪ್ರಯತ್ನ ಎಷ್ಟಿತ್ತು ಎಂಬುದು ಪ್ರತಿ ಭಾರತೀಯನಿಗೂ ಅರ್ಥವಾಗಿರುವ ವಿಚಾರ. ಕೆಲವು ಕ್ರೀಡಾಪಟುಗಳ ಸ್ವಲ್ಪದರಲ್ಲೇ ಪದಕಗಳನ್ನು ಗೆಲ್ಲಲು ವಿಫ‌ಲರಾದರೆ, ಇನ್ನು ಕೆಲವರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸನ್ನಿವೇಶಗಳು ಈ ಬಾರಿಯ ಒಲಂಪಿಕ್ಸ್‌ ನಡೆದವು.

Advertisement

ಇದನ್ನೆಲ್ಲಾ ಗಮನಿಸಿದ ಭಾರತೀಯರು ಸೋಲಿಗೆ ಬೆಂಬಲವಾಗಿ ನಿಂತು ಹರಸಿದರು. ಜತೆಗೆ  ಈ ಬಾರಿ ಭಾರತದ ಹಾಕಿ ತಂಡ ಸ್ಪೇನ್‌ ವಿರುದ್ಧ ಅದ್ಬುತ ಪ್ರದರ್ಶನ ನೀಡಿ ಗೆಲುವಿನ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದು ಬರುವ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ ಅವರ ಜನ್ಮದಿನಕ್ಕೆ ಪ್ರತೀ ಭಾರತೀಯರಿಗೆ ಉಡುಗೊರೆಯಾಗಿ ನೀಡಿದೆ.

ಹಿನ್ನೆಲೆ ಏನು?

ದೇಶವು ಹಾಕಿ ಮಾಂತ್ರಿಕನೆಂದೇ ಕರೆಯಲ್ಪಡುವ ಮೇಜರ್‌ ಧ್ಯಾನ್‌ಚಂದ್‌ ಅವರ ಜನ್ಮ ದಿನವನ್ನು (ಆ. 29ಕ್ಕೆ) ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಇವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ವಿಶೇಷ ದಿನವನ್ನ ಆಚರಿಸುವುದರ ಹಿನ್ನೆಲೆಯನ್ನ ಮೆಲುಕು ಹಾಕುತ್ತಾ ಹೋದರೆ, ಭಾರತದ ಕ್ರೀಡಾ ಗತವೈಭವವೇ ಕಾಣಿಸುತ್ತದೆ. 1905ರಲ್ಲಿ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಜನಿಸಿದ ಅವರು, ತಂದೆಯ ದಾರಿಯನ್ನೇ ಅನುಸರಿಸಿ ಭಾರತೀಯ ಸೇನೆಯನ್ನು ಸೇರಿಕೊಂಡರು. ಬಾಲ್ಯದಿಂದಲೆ ಹಾಕಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಅವರು ತಮ್ಮ ಕೆಲಸದ ಬಿಡುವಿನ ವೇಳೆಯಲ್ಲಿ ಅಭ್ಯಾಸ ಮಾಡುತ್ತಿದ್ದರು.

ವಿಶೇಷವೆಂದರೆ ಧ್ಯಾನ್‌ಚಂದ್‌ ಅವರನ್ನು ಚಾಂದ್‌ ಎಂದು ಅಲ್ಲಿನ ಸಹೊದ್ಯೋಗಿಗಳು ಕರೆಯುತ್ತಿದ್ದರು. ಇದರ ಅರ್ಥ ಕೆಲಸದ ವೇಳೆ ಮುಗಿದ ಅನಂತರ ಚಂದ್ರನ ಬೆಳಕಿನಲ್ಲಿ ಹಾಕಿ ಅಭ್ಯಾಸ ಮಾಡುತ್ತಿದ್ದರು. ಅಂದರೆ ಕತ್ತಲೆಯಲ್ಲಿ ಅಭ್ಯಾಸ ಮಾಡುವುದರಿಂದ ಚೆಂಡಿನ ಮೇಲೆ ಗಮನ ಮತ್ತು ನಿಯಂತ್ರಣವನ್ನು ಕೆಂದ್ರೀಕರಿಸಲು ಸಾಧ್ಯವಾಗುತ್ತದೆ ಎಂಬು ಧ್ಯಾನ್‌ಚಂದ ಅವರ ನಂಬಿಕೆ.

Advertisement

ಹೀಗೆ ಯಶಸ್ಸಿನ ಮೆಟ್ಟಿಲುಗಳನ್ನ ಏರುತ್ತಾ ಬಂದವರು ಹಂತ ಹಂತವಾಗಿ ಭಾರತೀಯ ಹಾಕಿ ತಂಡದಲ್ಲಿ ಉತ್ತಮ ಸ್ಥಾನಕೇರಿದ ಹೆಗ್ಗಳಿಕೆ ಧ್ಯಾನ್‌ಚಂದ್‌ ಅವರದ್ದು. ಇವರ ನೇತೃತ್ವದ ಹಾಕಿ ತಂಡದಲ್ಲಿ ಒಲಂಪಿಕ್ಸ್‌ನಲ್ಲಿ ಭಾರತವು ಪದಕಗಳ ಗೆಲ್ಲುವ ಯುಗವೇ ಪ್ರಾರಂಭವಾಯಿತು. 1928, 1932 ಮತ್ತು 1936ರಲ್ಲಿ ಕ್ರಮವಾಗಿ ಹಾಕಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲಿಸಿಕೊಂಡು ಬಂದಿತ್ತು. ಅಂದಿನ ಆ ಅವಧಿಯನ್ನು ಸುವರ್ಣ ಅವಧಿಯೆಂದೇ ಎಂದೇ ಕರೆಯಲಾಗಿತ್ತು.

1936ರಲ್ಲಿ ನಡೆದ ಜರ್ಮನಿ ವಿರುದ್ಧ ಪಂದ್ಯದಲ್ಲಿ 8-1 ಗೋಲು ಅಂತರದ ಮೂಲಕ ಗೆಲುವು ಸಾಧಿಸಿತ್ತು. ಇನ್ನೊಂದು ವಿಶೇಷವೆಂದರೆ ಈ ಪಂದ್ಯವನ್ನು ನೋಡಲು ಜರ್ಮನಿ ಸರ್ವಾಧಿಕಾರಿ ಹಿಟ್ಲರ್‌ ಕೂಡ ಬಂದಿದ್ದರು. ಧ್ಯಾನ್‌ಚಂದ್‌ ಅವರ ಆಟದ ಶೈಲಿಯನ್ನು ನೋಡಿ ಬೆರಗಾಗಿದ್ದರು. ಪಂದ್ಯದ ಅನಂತರ ಧ್ಯಾನ್‌ಚಂದ್‌ ಅವರನ್ನು ಮಾಜಿ ಸೈನಿಕ ಎಂಬುದರ ಕಾರಣಕ್ಕೆ  ಭೇಟಿಯಾಗಿ ನನ್ನ ದೇಶದ ಪೌರತ್ವ ನೀಡಿ, ಸೈನ್ಯದಲ್ಲಿ ಕರ್ನಲ್‌ ಹುದ್ದೆ ನೀಡುವ ಬೇಡಿಕೆಯಿಟ್ಟಿದ್ದರು. ಅದನ್ನು ವಿನಯವಾಗಿಯೇ ಧ್ಯಾನ್‌ಚಂದ್‌ ತಿರಸ್ಕರಿಸಿದ್ದರು.

ಒಂದು ಬಾರಿ ನೆದರ್‌ಲ್ಯಾಂಡ್‌ ಪಂದ್ಯದಲ್ಲಿ ಧ್ಯಾನ್‌ಚಂದ್‌ ಅವರು ಮೇಲಿಂದ ಮೇಲೆ ಗೋಲುಗಳನ್ನು ಬಾರಿಸುತ್ತಿರುವುದನ್ನು ಕಂಡ ಅಧಿಕಾರಿಗಳು, ಹಾಕಿ ಸ್ಟಿಕ್‌ನಲ್ಲಿ ಮ್ಯಾಗ್ನೆಟ್‌ ಅಂಶ ಇದೇ ಎಂದು ಶಂಕಿಸಿ ಸ್ಟಿಕ್‌ನ್ನೇ ಮುರಿದಿದ್ದರು. ದೈತ್ಯ ಕ್ರಿಕೆಟ್‌ ಆಟಗಾರ ಬ್ರಾಡಮಾನ್‌ ಕೂಡ ಏನಪ್ಪಾ ನೀನು ನಾವು ಕ್ರಿಕೆಟ್‌ನಲ್ಲಿ ರನ್‌ ಬಾರಿಸಿದಂತೆ ನೀನು ಗೋಲುಗಳನ್ನು ಬಾರಿಸುತ್ತಿಯಲ್ಲ ಎಂದು ಹೊಗಳಿದ್ದರಂತೆ.  1926ರಿಂದ 1949ಅವರೆಗೆ ಇಡೀ ತಮ್ಮ ವೃತ್ತಿ ಜೀವನದಲ್ಲಿ ಅಂತಾರಾಷ್ಟ್ರೀಯ ಒಳಗೊಂಡಂತೆ ಸುಮಾರು 400 ಪಂದ್ಯಗಳನ್ನು ಆಡಿರುವ ಇವರು, ಅಂತಾರಾಷ್ಟ್ರೀಯ ಮತ್ತು ದೇಶಿಯ ಪಂದ್ಯಗಳಲ್ಲಿ ಸೇರಿ 1,000ಕ್ಕೂ ಅಧಿಕ ಗೋಲುಗಳನ್ನು ಬಾರಿಸಿರುವ ಕೀರ್ತಿ ಸಲ್ಲುತ್ತದೆ.

1979 ಡಿ. 3ರಂದು ಯಕೃತ್ತಿನ ಕ್ಯಾನ್ಸರ್‌ ಸಮಸ್ಯೆಯಿಂದ ನಿಧನ ಹೊಂದಿದರು.  ಧ್ಯಾನ್‌ಚಂದ್‌ರಂತಹ ಮಹಾನ್‌ ಆಟಗಾರನನ್ನು ಸರಿದೂಗಿಸುವಂತಹ ಆಟಗಾರ ಕಂಡುಬರುವುದಿಲ್ಲ ಎಂಬ ಕ್ರೀಡಾ ಸಾಧನೆಯನ್ನು ಮನಗಂಡ ಭಾರತ ಸರಕಾರವು ಗೌರವಾರ್ಥವಾಗಿ 2012ರಲ್ಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಘೋಷಿಸಿತು.

ಬರೀ ದಿನಾಚರಣೆಯನ್ನಾಗಿ ಆಚರಿಸದೆ ಅಂದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಮೇ| ಧ್ಯಾನ್‌ಚಂದ್‌ ಖೇಲ್‌ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ರಾಷ್ಟ್ರೀಯ ಖೇಲ್‌ ಪ್ರೋತ್ಸಾಹನ್‌ ಪುರಸ್ಕಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಹೀಗೆ ಸರಕಾರವು ಅಂತಹ ಮಹಾನ್‌ ವ್ಯಕ್ತಿಯ ಜನ್ಮದಿನವನ್ನು ಆಚರಿಸಿಕೊಂಡು ಬರುತ್ತಿದೆ. ಭಾರತದ ಕ್ರೀಡಾಪಟುಗಳು ಮುಂದಿನ ಒಲಂಪಿಕ್ಸ್‌ನಲ್ಲಿ ಇನ್ನಷ್ಟು ಪದಕಗಳು ಗೆಲ್ಲಲಿ ಎಂಬುದು  ಪ್ರತಿಯೊಬ್ಬ ಭಾರತೀಯನ ಬಯಕೆ.

-ವಿಜಯಕುಮಾರ ಹಿರೇಮಠ

ಗದಗ

Advertisement

Udayavani is now on Telegram. Click here to join our channel and stay updated with the latest news.

Next