Advertisement

ಉರ್ವ ಬಳಿ ಕ್ರೀಡಾ ಸಂಕೀರ್ಣ: ಶಾಸಕ ಕಾಮತ್‌

10:47 PM Sep 14, 2019 | Team Udayavani |

ಮಹಾನಗರ: ಜಿಲ್ಲೆಯ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಸಾಧನೆಯನ್ನು ತೋರಲು ಅನುಕೂಲವಾಗುವಂತೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡುವ ನಿಟ್ಟಿನಲ್ಲಿ 22.5 ಕೋಟಿ ರೂ. ವೆಚ್ಚದಲ್ಲಿ ನಗರದ ಉರ್ವಾ ಶ್ರೀ ಮಾರಿಯಮ್ಮ ದೇವ ಸ್ಥಾನದ ಬಳಿ ಕ್ರೀಡಾ ಸಂಕೀರ್ಣ (ನ್ಪೋರ್ಟ್ಸ್ ಕಾಂಪ್ಲೆಕ್ಸ್‌) ತಲೆ ಎತ್ತಲಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು.

Advertisement

ಶನಿವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿ.ಪಂ., ಮಂಗಳೂರು ತಾ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ ಹಾಗೂ ಬರ್ಕೆ ಫ್ರೆಂಡ್ಸ್‌ ಕೊಡೆತ್ತೂರು ಇವುಗಳ ಆಶ್ರಯದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ತಾ| ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡಾ ಸಂಕೀರ್ಣವು ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್‌ ಅಂಗಣ ಹಾಗೂ ಸ್ವಿಮ್ಮಿಂಗ್‌ ಪೂಲ್ನ್ನು ಕೂಡ ಒಳಗೊಂಡಿರುತ್ತದೆ. ಇದರ ಪ್ರಕ್ರಿಯೆ ಆರಂಭವಾಗಿದ್ದು, ತನ್ನ ಶಾಸಕ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಅನುದಾನ ಶೀಘ್ರ ಬಿಡುಗಡೆ
ಜಿಲ್ಲಾ ಕ್ರೀಡಾ ಅಧಿಕಾರಿಯವರು ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ ಸಿದ್ಧಪಡಿಸಿದ 3.35 ಕೋಟಿ ರೂ. ವೆಚ್ಚದ ಯೋಜನೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದು, ಅವರು ಮಂಜೂರಾತಿ ನೀಡಿದ್ದಾರೆ. ಶೀಘ್ರ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇದರೊಂದಿಗೆ 16 ಲಕ್ಷ ರೂ. ವೆಚ್ಚದಲ್ಲಿ ಶಟಲ್ ಬ್ಯಾಡ್ಮಿಂಟನ್‌ ಕೋರ್ಟ್‌ ರೂಫ್ ಸಹಿತ ಮಂಗಳಾ ಕ್ರೀಡಾಂಗಣ ಸಂಪೂರ್ಣ ದುರಸ್ತಿ ಕಾರ್ಯ ನಡೆಯಲಿದೆ. ನವೆಂಬರ್‌ನಲ್ಲಿ ಪಣಂಬೂರು ಬೀಚ್‌ನಲ್ಲಿ ನಡೆಯಲಿರುವ ಮೊಯ್‌ಥಾಯ್‌ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಜಿ. ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಧ್ವಜಾರೋಹಣ ನೆರವೇರಿಸಿದರು.

Advertisement

ನಗರದ ವಿದ್ಯಾರ್ಥಿಗಳೂ ಕ್ರೀಡೆಯಲ್ಲಿ ಪಾಲ್ಗೊಳ್ಳಿ
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಮಾತನಾಡಿ, ಕ್ರೀಡಾ ಸಾಧಕರಿಗೆ ನಗದು ಬಹುಮಾನ ನೀಡಬೇಕೆಂದು ಈ ಹಿಂದೆ ವಿಧಾನ ಮಂಡಲದಲ್ಲಿ ಪ್ರಸ್ತಾವಿಸಿದ್ದು, ಕೆಲವು ಜಿಲ್ಲೆಗಳಲ್ಲಿ ಜಾರಿಯಿದೆ.ಎಲ್ಲ ಜಿಲ್ಲೆಗಳಲ್ಲಿ ಇದು ಅನುಷ್ಠಾನಕ್ಕೆ ಬರ ಬೇಕಾಗಿದೆ. ದ.ಕ. ಜಿಲ್ಲೆಯಲ್ಲಿ ಗ್ರಾಮಾಂತರದ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಮುಂದೆ ಬರುತ್ತಾರೆ; ಆದರೆ ನಗರ ಪ್ರದೇಶಗಳ ವಿದ್ಯಾರ್ಥಿಗಳು ಪಠ್ಯ ವಿಷಯಕ್ಕೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಕ್ರೀಡೆಯನ್ನು ನಿರ್ಲಕ್ಷಿಸುತ್ತಾರೆ. ಇದು ಸರಿಯಲ್ಲ. ನಗರದ ವಿದ್ಯಾರ್ಥಿಗಳೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ, ವಿಟ್ಲದ ಬಾಲಿಕಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಮಲ್ಲಿಕಾ ಹೆಗ್ಡೆ ಮತ್ತು ಮಂಗಳಾ ಕ್ರೀಡಾಂಗಣದ ನಿವೃತ್ತ ಕಚೇರಿ ಅಟೆಂಡರ್‌ ಬಾಲಕೃಷ್ಣ ಅವರನ್ನು ಸಮ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷ ಮುಹಮ್ಮದ್‌ ಮೋನು, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಸದಸ್ಯ ಸುನಿಲ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್‌ ಡಿ’ಸೋಜಾ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಗಿರೀಶ್‌ ಶೆಟ್ಟಿ, ಕೊಡೆತ್ತೂರು ಬರ್ಕೆ ಫ್ರೆಂಡ್ಸ್‌ನ ಅಧ್ಯಕ್ಷ ಪ್ರೇಮ್‌ರಾಜ್‌ ಶೆಟ್ಟಿ, ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ನ ರತನ್‌ ಶೆಟ್ಟಿ, ಸುನಿಲ್‌ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರಾದ ವಿಷ್ಣು ನಾರಾಯಣ್‌ ಹೆಬ್ಟಾರ್‌ ಮತ್ತು ಹರೀಶ್‌ ರೈ ಉಪಸ್ಥಿತರಿದ್ದರು. ಸಹಾಯಕ ಕ್ರೀಡಾಧಿಕಾರಿ ಲಿಲ್ಲಿ ಪಾಯ್ಸ ಸ್ವಾಗತಿಸಿದರು. ದೈಶಿಕ ಶಿಕ್ಷಣ ಶಿಕ್ಷಕ ವಿನ್ಸೆಂಟ್‌ ಲೋಬೋ ನಿರ್ವಹಿಸಿದರು.

ಸಾಧಕರಿಗೆ ಸಮ್ಮಾನ
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತ್ಯಾಗಂ ಹರೇಕಳ, ವಿಟ್ಲದ ಬಾಲಿಕಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಮಲ್ಲಿಕಾ ಹೆಗ್ಡೆ ಮತ್ತು ಮಂಗಳಾ ಕ್ರೀಡಾಂಗಣದ ನಿವೃತ್ತ ಕಚೇರಿ ಅಟೆಂಡರ್‌ ಬಾಲಕೃಷ್ಣ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next