ತೆಕ್ಕಟ್ಟೆ: ಕುಂದಾಪುರ ತಾಲೂಕು ಬೇಳೂರು ಗ್ರಾಮ ವ್ಯಾಪ್ತಿಯ ಸ್ಫೂರ್ತಿಧಾಮದ ಅನಘಾ ವೃದ್ಧಾಶ್ರಮದಲ್ಲಿದ್ದ 28 ಹಿರಿಯ ನಾಗರಿಕರು ಮತ್ತು ಮಾನಸಿಕ ಅಸ್ವಸ್ಥರನ್ನು ಶಂಕರಪುರದಲ್ಲಿರುವ ಕರುಣಾಲಯ ವೃದ್ಧಾಶ್ರಮದ ವಿಶ್ವಾಸದ ಮನೆಗೆ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಮಂಗಳವಾರ ವರ್ಗಾಯಿಸಿದೆ.
ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಸುಮಾರು 17 ಮಂದಿ ಹಿರಿಯ ನಾಗರಿಕರು ಮತ್ತು 11 ಮಂದಿ ಮಾನಸಿಕ ಅಸ್ವಸ್ಥರನ್ನು ವಿಶ್ವಾಸ ಮನೆಗೆ ವರ್ಗಾಯಿಸಲಾಗಿದೆ. ಇನ್ನುಳಿದ ಇಬ್ಬರನ್ನು ಸಂಬಂಧಿಗಳು ಕರೆದೊಯ್ಯುವ ಭರವಸೆ ನೀಡಿರು ವುದರಿಂದ ಸಂಸ್ಥೆಯಲ್ಲಿಯೇ ಬಿಡಲಾಗಿದೆ.
ಗಂಭೀರ ಪ್ರಕರಣವೊಂದಕ್ಕೆ ಸಂಬಂಧಿಸಿ ಸ್ಫೂರ್ತಿಧಾಮದಲ್ಲಿರುವ ಸುಮಾರು 22 ಮಕ್ಕಳನ್ನು ಜಿಲ್ಲಾಡಳಿತದ ನಿರ್ದೇಶನದಂತೆ ನಿಟ್ಟೂರಿನ ಪುನರ್ವಸತಿ ಕೇಂದ್ರಕ್ಕೆ ಮಾ. 15ರಂದು ಸ್ಥಳಾಂತರಿಸಲಾಗಿತ್ತು.
23 ವರ್ಷಗಳಿಂದ ಕಾರ್ಯಾ ಚರಿಸುತ್ತಿದ್ದ ಬೇಳೂರು ಸ್ಫೂರ್ತಿ ಧಾಮದಲ್ಲಿದ್ದ ಹಿರಿಯ ನಾಗರಿಕರು, ಅಶಕ್ತರು ಮತ್ತು ಮಕ್ಕಳನ್ನು ಬೇರೆಡೆಗೆ ವರ್ಗಾಯಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಸ್ಫೂರ್ತಿಧಾಮ ಬಿಕೋ ಎನ್ನುತ್ತಿದೆ.
ಸ್ಥಳಾಂತರ ಸಂದರ್ಭ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ್ ಭಟ್, ಕೋಟ ಪೊಲೀಸ್ ಠಾಣಾಧಿಕಾರಿ ಮಹಮದ್ ರಫೀಕ್, ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅರ್ಪಿತಾ, ಸಂಸ್ಥೆಯ ಮುಖ್ಯಸ್ಥೆ ಪ್ರಮೀಳಾ ವಾಜ್ ಹಾಗೂ ಕೋಟ ಪೊಲೀಸ್ ಸಿಬಂದಿ ಹಾಜರಿದ್ದರು.