ಒಂದು ಪುಟ್ಟ ಮರದ ಕಡ್ಡಿಯನ್ನು ಮುರಿಯುವುದು ಸುಲಭ. ಅದಕಕೆ ಹೆಚ್ಚಿನ ಶಕ್ತಿ ಬೇಕಾಗಿಲ್ಲ. ಆದರೆ ಸ್ಟೀಲ್ ಚಮಚವನ್ನು ಬೆಂಡ್ ಮಾಡಲು ಅದಕ್ಕಿಂತ ಹೆಚ್ಚಿನ ಶಕ್ತಿ ಅಗತ್ಯ. ಅದರೆ ಶಕ್ತಿಯನ್ನು ಉಪಯೋಗಿಸದೆ ಬರಿಯ ಯುಕ್ತಿ ಮಾತ್ರದಿಂದಲೇ ಚಮಚವನ್ನು ಬೆಂಡ್ ಮಾಡುವಂತಾದರೆ? ಹಾಗೆ ಮಾಡಲು ಯಕ್ಷಿಣಿ ವಿದ್ಯೆ ಕಲಿಯಬೇಕಿಲ್ಲ, ಈ ಮ್ಯಾಜಿಕ್ ಟ್ರಿಕ್ ಕಲಿತರೆ ಸಾಕು.
ಬೇಕಾಗುವ ವಸ್ತು: ಒಂದು ಸ್ಟೀಲ್ ಚಮಚ
ಪ್ರದರ್ಶನ: ಜಾದೂಗಾರ ಒಂದು ಸ್ಟೀಲ್ ಚಮಚವನ್ನು ಸಭಿಕರ ಎದುರು ಪ್ರದರ್ಶಿಸುತ್ತಾನೆ. ಸಾಧಾರಣ ಸ್ಟೀಲ್ ಸ್ಪೂನ್ ಎಂದು ಸಭಿಕರಿಗೆ ಮನದಟ್ಟು ಮಾಡುತ್ತಾನೆ. ಆಮೇಲೆ ಸ್ಪೂನ್ ಅನ್ನು ಮುಷ್ಠಿಯೊಳಗೆ ಬಿಗಿಹಿಡಿಯುತ್ತಾನೆ. ನೋಡ ನೋಡುತ್ತಿದ್ದಂತೆ ಸ್ಪೂನ್ ಬೆಂಡ್ ಆಗಿರುವುದು ಗೋಚರಿಸುತ್ತದೆ. ಅಲ್ಲಿ ನೆರೆದವರೆಲ್ಲರೂ ಮೂಗಿನ ಮೇಲೆ ಬೆರಳಿಡುತ್ತಾರೆ. ಆಮೇಲೆ ಜಾದೂಗಾರ ಮಂತ್ರವೊಂದನ್ನು ಉಚ್ಚರಿಸುತ್ತಾನೆ. ಮುಷ್ಠಿಯೊಳಗಿಂದ ಸ್ಪೂನನ್ನು ಹೊರತೆಗೆದು ತೋರಿಸುತ್ತಾನೆ. ಅದು ಬೆಂಡ್ ಆಗಿರದೆ ಸರಿಯಾಗಿಯೇ ಇರುತ್ತದೆ.
ತಯಾರಿ: ಇದೊಂದು ಕಣಟ್ಟಿನ ಜಾದೂ. ಸ್ಪೂನನ್ನು ಚಿತ್ರದಲ್ಲಿ ತೋರಿಸಿರುವಂತೆ ಬಿಗಿಯಾಗಿ ಮುಷ್ಟಿಯೊಳಗೆ ಹಿಡಿಯಿರಿ. ಎರಡೂ ಕೈಗಳನ್ನು ಬಳಸಿ ಸ್ಪೂನನ್ನು ಹಿಡಿದಿರಬೇಕು. ಚಿತ್ರ 2ರಲ್ಲಿ ನಿಮಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ಒಂದು ಕೈಯನ್ನು ಸಡಿಲಿಸಲಾಗಿದೆಯಷ್ಟೆ. ಮುಷ್ಠಿಯನ್ನು ಬಾಗಿಸದೆ ನೇರವಾಗಿ ಇಟ್ಟುಕೊಂಡು ಒಳಗೆ ಹಿಡಿದ ಸ್ಪೂನನ್ನು ಮಾತ್ರವೇ ಇಡಿಯಾಗಿ ಬಾಗಿಸಿ ಹಿಡಿಯಬೇಕು. ಆಗ ಸ್ಪೂನ್ ಮಧ್ಯದಲ್ಲೇ ಬೆಂಡ್ ಆಗಿರುವಂತೆ ಗೋಚರಿಸುತ್ತದೆ. ಆದರೆ ನೀವು ಇಡೀ ಸ್ಪೂನನ್ನೇ ಬಾಗಿಸಿರುವುದು ಯಾವ ಕಾರಣಕ್ಕೂ ಗೊತ್ತಾಗದಂತೆ ಎಚ್ಚರಿಕೆ ವಹಿಸಿ. ಆಮೇಲೆ ಮಂತ್ರ ಹೇಳಿದಂತೆ ಮಾಡಿ ಇಡೀ ಸ್ಪೂನನ್ನು ಪ್ರೇಕ್ಷಕರ ಮುಂದೆ ಹಿಡಿಯಿರಿ.
ವಿನ್ಸೆಂಟ್ ಲೋಬೋ