ಮೈಸೂರು: ವರುಣಾ ಸೇರಿದಂತೆ ಪ್ರಮುಖ ಕ್ಷೇತ್ರಗಳ ಬಗ್ಗೆ ಅಮಿತ್ ಶಾ ಇಂದು ಯಡಿಯೂರಪ್ಪ ಮತ್ತು ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ಹಾಗಂತ ಅದು ನನ್ನ ಸ್ಪರ್ಧೆಯ ವಿಚಾರವಲ್ಲ. ಆದರೆ ವರುಣ ಸೇರಿದಂತೆ ಪ್ರಮುಖ ಕ್ಷೇತ್ರಗಳ ಸ್ಥಿತಿಗಳ ಬಗ್ಗೆ ಗಂಭೀರ ಚರ್ಚೆಯಾಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರದ ಜನ ನನ್ನ ಬಗ್ಗೆ ಒಲವು ತೋರಿಸಿದ ಕಾರಣ ಆ ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುತ್ತಿದ್ದೇನೆ. ಸ್ಪರ್ಧೆ ಎಲ್ಲಿಂದ ಎಂಬುದನ್ನು ನಾನು ನಿರ್ಧರಿಸಲು ಆಗುವುದಿಲ್ಲ. ನಮ್ಮ ಪಕ್ಷದ ಹೈಕಮಾಂಡ್ ಅದನ್ನು ನಿರ್ಧರಿಸುತ್ತದೆ ಎಂದರು.
ಇದನ್ನೂ ಓದಿ:ದೆಹಲಿಯಲ್ಲಿ ಪ್ರತಿಪಕ್ಷ ಸಂಸದರ ಪ್ರತಿಭಟನಾ ಮೆರವಣಿಗೆಗೆ ಪೊಲೀಸರ ತಡೆ ; ವಿಡಿಯೋ
ಚಾಮರಾಜನಗರಕ್ಕೆ ನನ್ನನ್ನು ಉಸ್ತುವಾರಿ ಮಾಡಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ಅವರಿಗೆ ಅಲ್ಲಿ ಸಂಘಟನೆ ಮಾಡುವ ದೊಡ್ಡ ಶಕ್ತಿ ಇದೆ ಅವರೇ ಆ ಕೆಲಸ ಮಾಡುತ್ತಾರೆ ಎಂದರು.
ಅಮಿತ್ ಶಾ ವಿಜಯೇಂದ್ರೆಗೆ ಬೆನ್ನು ತಟ್ಟಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆನ್ನು ತಟ್ಟಿದ ಸದ್ದು ಯಾರು ಯಾರಿಗೆ ಹೇಗೆ ಕೇಳಿಸಿದೆ ಗೊತ್ತಿಲ್ಲ. ಅವರು ಸಂಘಟನೆ ಹೇಗೆ ನಡೆಯುತ್ತಿದೆ, ಮೋರ್ಚಾ ಸಮಾವೇಶಗಳನ್ನು ಎಷ್ಟು ಮಾಡಿದ್ದೀಯಾ ನೀನು? ಖುದ್ದಾಗಿ ಎಷ್ಟು ಜಿಲ್ಲೆಗಳಿಗೆ ಪ್ರವಾಸ ಹೋಗಿದ್ದೀಯಾ ಎಂದು ಕೇಳುತ್ತಾ ಬೆನ್ನು ತಟ್ಟಿದರು. ನಾನು ಮೋರ್ಚಾ ಸಮಾವೇಶಗಳ ವರದಿಗಳನ್ನು ಅಮಿತ್ ಶಾ ಅವರಿಗೆ ಕೊಟ್ಟಿದ್ದೇನೆ. ಈ ಬಾರಿ ಸ್ಪಷ್ಟ ಬಹುಮತ ಬರಬೇಕು. ಅದಕ್ಕಾಗಿ ಇನ್ನೂ ಹೆಚ್ಚಿನ ಸಂಘಟನೆ ಮಾಡಿ ಎಂದು ಅಮಿತ್ ಶಾ ಸೂಚಿಸಿದ್ದಾರೆ. ಪಕ್ಷ ಈಗಾಗಲೇ ದೊಡ್ಡ ಜವಾಬ್ದಾರಿಯನ್ನೇ ಕೊಟ್ಟಿದೆ. ಅದನ್ನು ನಾನು ನಿಭಾಯಿಸುತ್ತಿದ್ದೇನೆ ಎಂದರು.