Advertisement

ಸೋರುತ್ತಿದೆ ಭೂದಾಖಲೆಗಳ ಕಚೇರಿ ಕಟ್ಟಡ

11:22 PM Jun 12, 2020 | Sriram |

ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಕಚೇರಿಯ ಆವರಣದಲ್ಲಿರುವ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸೂರಿನಿಂದ ಮಳೆ ನೀರು ಸೋರುತ್ತಿದೆ. ದಾಖಲೆಗಳಿಗೆ ರಕ್ಷಣೆ ಇಲ್ಲದ ಸ್ಥಿತಿ ಇದೆ. ಇದು ಪ್ರತಿವರ್ಷ ಮಳೆಗಾಲದ ಸಮಸ್ಯೆ.

Advertisement

ಶಿಥಿಲಾವಸ್ಥೆಯಲ್ಲಿರುವ ಈ ಹಳೆ ಕಟ್ಟಡದ ಹಂಚಿನ ಮೇಲ್ಛಾವಣಿ ಸೋರುತ್ತಿರುವುದರಿಂದ ಗೋಡೆಯಲ್ಲೂ ವಿದ್ಯುತ್‌ ಶಾಕ್‌ ಹೊಡೆಯುತ್ತಿದೆ. ಒಂದು ಫ್ಯಾನ್‌ ತಿರುಗುತ್ತಿದ್ದರೆ ಮತ್ತೆರಡು ನಿಸ್ತೇಜಗೊಂಡಿವೆ. ಸೂರಿನಿಂದ ಗೋಡೆಯ ಮೂಲಕ ಹರಿದು ಬರುವ ಮಳೆ ನೀರು ನೆಲದಲ್ಲಿ ತುಂಬಿಕೊಳ್ಳುವುದು ಮಳೆಗಾಲದಲ್ಲಿ ಸಾಮಾನ್ಯವಾಗಿದೆ. ರಾತ್ರಿ ಮಳೆ ಬಂದರೆ ಮರುದಿನ ಕಚೇರಿಗೆ ಬಂದ ಸಿಬಂದಿಗೆ ವಿದ್ಯುತ್‌ ಶಾಕ್‌ ಭೀತಿ ಜತೆಗೆ ನೆಲದಲ್ಲಿದ್ದ ನೀರನ್ನು ಹೊರ ಚೆಲ್ಲುವುದೇ ಕೆಲಸವಾಗಿದೆ.

ಸುಮಾರು 600 ಚದರಡಿ ವಿಸ್ತೀರ್ಣದ ಈ ಕಟ್ಟಡದಲ್ಲಿ 13 ಮಂದಿ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದಲೂ ಸಿಬಂದಿಯೇ ಕಟ್ಟಡದ ಅಲ್ಪ ಸ್ವಲ್ಪ ರಿಪೇರಿ ಮಾಡಿಕೊಂಡು ಬಂದಿದ್ದಾರೆ. ಈ ಕಟ್ಟಡದ ದುಃಸ್ಥಿತಿ ಬಹಳ ವರ್ಷಗಳ ಹಿಂದೆಯೇ ಎಲ್ಲ ಹಿರಿಯ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ಬಂದಿದ್ದರೂ ಸ್ಪಂದನೆ ಮಾತ್ರ ಇಲ್ಲ. ಈ ಕಟ್ಟಡದಲ್ಲೇ ತಹಶೀಲ್ದಾರರ ಕಚೇರಿಯ ದಾಖಲೆಗಳ
ಕೊಠಡಿಯೂ ಇದೆ.

ಮೇಲೇಳದ ಮಿನಿ ವಿಧಾನಸೌಧ
ಎರಡು ವರ್ಷಗಳ ಹಿಂದೆ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ಆಗಿದೆ. ಅದರಲ್ಲಾದರೂ ಭೂ ದಾಖಲೆಗಳ ಕಚೇರಿಗೆ ಅವಕಾಶ ಸಿಕ್ಕೀತು ಎಂದರೆ ಮಿನಿ ವಿಧಾನಸೌಧ ಮೇಲೇಳುವ ಲಕ್ಷಣ ಕಾಣುತ್ತಿಲ್ಲ.

ತಾಲೂಕು ಕಚೇರಿಯ ಹಿಂಭಾಗದಲ್ಲೇ ಒಂದು ಸರಕಾರಿ ಆರ್‌ಸಿಸಿ ವಸತಿಗೃಹವಿದೆ. ಸದ್ಯ ಯಾರೂ ಬಳಸುತ್ತಿಲ್ಲ. ಸುಣ್ಣ ಬಣ್ಣ ಹೊಡೆಸಿದರೆ ಬೇರೆ ವ್ಯವಸ್ಥೆ ಆಗುವ ವರೆಗೆ ಇಲ್ಲವೇ ಮಿನಿ ವಿಧಾನಸೌಧ ನಿರ್ಮಾಣವಾಗುವ ತನಕ ಭೂ ದಾಖಲೆ ಕಚೇರಿಗೆ ನೆಲೆ ಒದಗಿಸಿದಂತಾದೀತು.

Advertisement

 ವರದಿ ಸಲ್ಲಿಸಲಾಗಿದೆ
ಭೂದಾಖಲೆಗಳ ಕಚೇರಿಯ ಕಟ್ಟಡ ಶಿಥಿಲಗೊಂಡಿದ್ದು, ದಾಖಲೆಗಳ ಸುರಕ್ಷತೆಗೆ ಅಪಾಯವಿದೆ ಎಂಬುದು ಗಮನಕ್ಕೆ ಬಂದಿದೆ. ಇದರ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ತಾತ್ಕಾಲಿಕವಾಗಿ ಸೂಕ್ತ ಕಟ್ಟಡಕ್ಕೆ
ಶಿಫ್ಟ್‌ ಮಾಡುವ ಬಗ್ಗೆಯೂ ಗಂಭೀರವಾಗಿ ಚಿಂತಿಸುತ್ತಿದ್ದೇವೆ.
– ಅನಿತಾಲಕ್ಷ್ಮೀ
ಮೂಡುಬಿದಿರೆ ತಾಲೂಕು ತಹಶೀಲ್ದಾರರು

Advertisement

Udayavani is now on Telegram. Click here to join our channel and stay updated with the latest news.

Next