Advertisement
ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕೆಲಸ ಮಾಡುವ ಜಾಗಗಳಲ್ಲಿ ಉಗುಳುವುದು ಶಿಕ್ಷಾರ್ಹ ಅಪರಾಧ ಎಂದು ಹೇಳಿದೆ.
Related Articles
ಭಾರತದ ಸಾರ್ವಜನಿಕ ಶೌಚಾಲಯಗಳಂತೂ ತಂಬಾಕು, ಗುಟ್ಕಾ, ಸಿಗರೇಟ್ ವ್ಯಸನಿಗಳ ನೆಚ್ಚಿನ ತಾಣಗಳು! ರೈಲು ಮತ್ತು ಬಸ್‌ಸ್ಟಾಂಡ್‌ಗಳಲ್ಲಿನ ಶೌಚಾಲಯಗಳ ಗೋಡೆಗಳು ಹಾಗೂ ನೆಲ ಕೂಡ ಎಲೆ ಅಡಿಕೆಯಿಂದಾಗಿ ಕೆಂಪಾಗಿಬಿಟ್ಟಿರುತ್ತವೆ.
Advertisement
ಸದ್ಯಕ್ಕಂತೂ ಸಾರ್ವಜನಿಕ ಶೌಚಾಲಯಗಳು ಮುಚ್ಚಿವೆಯಾದರೂ, ಕೋವಿಡ್ ಜತೆಗೇ ಮನುಷ್ಯ ಬದುಕಬೇಕು ಎನ್ನುವುದು ನಿಶ್ಚಯವಾದರೆ, ಮುಂದಿನ ದಿನಗಳಲ್ಲಿ ಭಾರತಕ್ಕಂತೂ ಅತಿದೊಡ್ಡ ಸವಾಲು ಎದುರಾಗಲಿದೆ. ಏಕೆಂದರೆ, ಬಸ್ ಸಂಚಾರಗಳು ಎಲ್ಲೆಡೆ ಆರಂಭವಾದದ್ದೇ, ಬಸ್‌ಸ್ಟಾಂಡ್‌ಗಳಲ್ಲಿನ ಶೌಚಾಲಯಗಳನ್ನು ತೆರೆಯಬೇಕಾಗಬಹುದು.
ಕೋವಿಡ್ ವೈರಾಣುವಿರುವ ಒಬ್ಬ ವ್ಯಕ್ತಿಯೇನಾದರೂ ಅಲ್ಲಿ ಉಗುಳಿದನೆಂದರೆ, ಸೋಂಕು ಹರಡುವಿಕೆಯ ಅಪಾಯ ಅಧಿಕವಾಗಿಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರಿಗೆ ನಮ್ಮಲ್ಲಿ ಅಗತ್ಯ ಸುರಕ್ಷತಾ ಪರಿಕರಗಳು ಇರುವುದಿಲ್ಲ. ಹೀಗಾಗಿ, ಅವರ ಮೇಲಂತೂ ಅಪಾಯದ ತೂಗುಗತ್ತಿ ಸದಾ ಇದ್ದೇ ಇರುತ್ತದೆ.
ಧಾರಾವಿಯ ಶೌಚಾಲಯಗಳು ಉಗುಳುವುದಕ್ಕಷ್ಟೇ…ಏಷ್ಯಾದ ಅತಿದೊಡ್ಡ ಸ್ಲಂ, ಮುಂಬೈನ ಧಾರಾವಿಯಲ್ಲೂ ಕೋವಿಡ್ ಹಾವಳಿ ವಿಪರೀತವಾಗಿದೆ. ಮೇ 18ರ ವೇಳೆಗೆ 1200ಕ್ಕೂ ಅಧಿಕ ಕೋವಿಡ್ ಸೋಂಕಿತರು ಧಾರಾವಿಯಲ್ಲಿ ಪತ್ತೆಯಾಗಿದ್ದು, 56 ಜನ ಮೃತಪಟ್ಟಿದ್ದಾರೆ. 5-10 ಲಕ್ಷ ಜನರು ವಾಸಿಸುವ, ಈ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಶೌಚಾಲಯವೆನ್ನುವುದು ಮರೀಚಿಕೆಯೇ ಸರಿ. ಕಡಿಮೆ ಶೌಚಾಲಯಗಳು, ನೀರಿನ ಅಭಾವವಿರುವುದರಿಂದಾಗಿ ಜನ ಈಗಲೂ ಬಯಲು ಶೌಚಕ್ಕೇ ಹೋಗುತ್ತಾರೆ (ದೊಡ್ಡ ನಾಲೆಗಳ ಬಳಿ), ಹೀಗಾಗಿ, ಶೌಚಾಲಯಗಳು ತಂಬಾಕು, ಗುಟ್ಕಾ ಉಗುಳುವುದಕ್ಕೇ ಹೆಚ್ಚಾಗಿ ಬಳೆಕೆಯಾಗುತ್ತವೆ ಎನ್ನುತ್ತವೆ ವರದಿಗಳು. ಧಾರಾವಿಯ ಆಳಅಗಲಗಳನ್ನು ಬಲ್ಲ ಪತ್ರಕರ್ತೆ ಸುಜಾತಾ ಆನಂದನ್ ಈ ಸಮಸ್ಯೆಯ ಬಗ್ಗೆ ಹೀಗೆ ಬರೆಯುತ್ತಾರೆ: ‘ಧಾರಾವಿಯಲ್ಲಿ ತಂಬಾಕು, ಗುಟ್ಕಾ ವ್ಯಸನಿಗಳ ಸಂಖ್ಯೆಯೂ ಅಧಿಕವಿದೆ. ಆದರೆ, ಬಹುತೇಕರ ಮನೆಯಲ್ಲಿ ಬಾತ್‌ರೂಂ ಕೂಡ ಇರುವುದಿಲ್ಲ. ಹೀಗಾಗಿ, ಅನೇಕರಿಗೆ ಸಾಮೂಹಿಕ ಶೌಚಾಲಯಗಳೇ ಗುಟ್ಕಾ, ತಂಬಾಕು ಉಗುಳುವುದಕ್ಕೆ ಪ್ರಶಸ್ತ ಜಾಗಗಳಾಗಿ ಬದಲಾಗಿವೆ. ಧಾರಾವಿಯ ಬಗ್ಗೆ ವರದಿ ಮಾಡುವ ನನ್ನ ಸಹೋದ್ಯೋಗಿಯೊಬ್ಬಳಿಗೂ ಇದರ ಅರಿವಾಗಿದೆ. ಆಕೆ ನನ್ನನ್ನೊಮ್ಮೆ ಕೇಳಿದ್ದಳು – ಸುಜಾತಾ, ನೀನು ಒಂದು ವಿಷಯ ಗಮನಿಸಿದ್ದೀಯಾ? ಧಾರಾವಿಯ ಶೌಚಾಲಯಗಳಿಂದ ಮೂತ್ರಕ್ಕಿಂತ ಹೆಚ್ಚಾಗಿ ತಂಬಾಕು-ಗುಟ್ಕಾದ ವಾಸನೆಯೇ ಅಧಿಕವಾಗಿ ಬರುತ್ತದೆ ಎಂದು.’ ವಿದೇಶಕ್ಕೂ ವ್ಯಸನ ಕೊಂಡೊಯ್ದ ಏಷ್ಯನ್ನರು
ತಂಬಾಕು ಸೇವನೆಯಲ್ಲಿ ಭಾರತದಂತೆಯೇ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್, ಮಲೇಷ್ಯಾ, ಕಾಂಬೋಡಿಯಾ, ಇಂಡೋನೇಷ್ಯಾದಲ್ಲಿಯೂ ವ್ಯಸನಿಗಳ ಸಂಖ್ಯೆ ಅಧಿಕವೇ ಇದೆ. ಇಂದು ಏಷ್ಯನ್ನರು, ಅದರಲ್ಲೂ ಮುಖ್ಯವಾಗಿ ಭಾರತೀಯರು ಜಗದಗಲ ಹರಡಿದ್ದು, ಅವರು ತಮ್ಮೊಂದಿಗೆ ಈ ಚಟವನ್ನೂ ವಿದೇಶಗಳಿಗೆ ಕೊಂಡೊಯ್ದಿದ್ದಾರೆ. ಬ್ರಿಟನ್, ಆಸ್ಟ್ರೇಲಿಯಾ, ಅಮೆರಿಕದಲ್ಲಿ ಈಗ ತಂಬಾಕು ಸೇವನೆಯ ಪ್ರಮಾಣ ಅಧಿಕವಾಗುತ್ತಿದ್ದು, ಅಲ್ಲಿನ ಆಡಳಿತಗಳು ಈ ಬಗ್ಗೆ ತಲೆಕೆಡಿಸಿಕೊಂಡಿವೆ. ಲಂಡನ್ ಸೇರಿದಂತೆ ಬ್ರಿಟನ್‌ನಲ್ಲಿನ ಏಷ್ಯನ್ ಮಾರುಕಟ್ಟೆಗಳಲ್ಲಿ ಭಾರತದಿಂದ ಅಧಿಕೃತವಾಗಿ ಹಾಗೂ ಅಕ್ರಮವಾಗಿ ಸರಬರಾಜಾದ ಅಡಿಕೆ, ತಂಬಾಕು, ಗುಟ್ಕಾ, ಬೀಡಿ ಲಭ್ಯವಿದ್ದು, ಜನರು ಇಲ್ಲಿಗಿಂತ ನಾಲ್ಕು ಪಟ್ಟು ಹೆಚ್ಚು ಹಣ ತೆತ್ತು ಖರೀದಿಸುತ್ತಾರೆ. ಗಮನಾರ್ಹ ಸಂಗತಿಯೆಂದರೆ, ಬ್ರಿಟನ್‌ನಲ್ಲಿ ಬಾಂಗ್ಲಾದೇಶಿಯರು, ಪಾಕಿಸ್ತಾನಿಯರ ನಂತರ, ಗುಜರಾತಿ ಸಮುದಾಯದಲ್ಲಿ ತಂಬಾಕು ಚಟ ಅಧಿಕವಿದೆ ಎನ್ನುತ್ತಾರೆ ಬ್ರಿಟನ್‌ನಲ್ಲಿ ವ್ಯಾಪಾರಿಯಾಗಿರುವ ಮುಕುಲ್ ಸಂಜಾತಿ. ಇನ್ನು ಅಮೆರಿಕದಲ್ಲೂ ಏಷ್ಯನ್ ವಲಸಿಗರಲ್ಲಿ ಪಾನ್‌ಮಸಾಲಾ, ತಂಬಾಕು ಅಗಿಯುವ ವ್ಯಸನ ಅಧಿಕವಿದೆ. ಆದರೆ, 30-40 ವರ್ಷದಿಂದ ಆ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಹಿರಿಯ ತಲೆಮಾರಿನಲ್ಲಿ ಅಧಿಕವಿದ್ದು, ಹೊಸ ತಲೆಮಾರು ಈ ವ್ಯಸನಕ್ಕೆ ಅಷ್ಟು ಈಡಾಗಿಲ್ಲ. ಹೆಚ್ಚಾಗಿ ಟ್ಯಾಕ್ಸಿ ಡ್ರೈವರ್‌ಗಳು, ಕೂಲಿ ಕೆಲಸ ಮಾಡುವವರು, ಚಿಕ್ಕ ಪುಟ್ಟ ವ್ಯಾಪಾರ ಮಾಡುವವರು ಸೇರಿದಂತೆ ಕಡಿಮೆ ಆದಾಯದ ಏಷ್ಯನ್ನರಲ್ಲಿ ಈ ವ್ಯಸನ ಅಧಿಕವಾಗಿದೆ. ಲಾಲಾರಸ ಕೋವಿಡ್-19ನ ನಿವಾಸ!
‘ಲಾಲಾರಸದಲ್ಲಿ 24 ಗಂಟೆಗಳಿಗೂ ಅಧಿಕ ಹೊತ್ತು ಜೀವಂತವಿರಬಲ್ಲ ರೋಗಾಣುಗಳಿರುತ್ತವೆ. ಅವುಗಳಲ್ಲಿ ಕೋವಿಡ್-19 ಸೇರಿದಂತೆ ಶ್ವಾಸಕೋಶಕ್ಕೆ ತೊಂದರೆಯುಂಟುಮಾಡುವ ವೈರಸ್‌ಗಳೂ ಇರಬಲ್ಲವು. ಇದಷ್ಟೇ ಅಲ್ಲದೇ, ಹಲವು ಬಾರಿ ಉಗುಳಲ್ಲಿ ಕಫವೂ ಸೇರಿರುವುದರಿಂದ, ಅಪಾಯ ಅಧಿಕವೇ ಇರುತ್ತದೆ” ಎನ್ನುತ್ತಾರೆ ಗ್ಲೋಬಲ್ ನ್ಯೂಟ್ರಿಷನ್ ಲೀಡರ್‌ಶಿಪ್ ಪ್ರಶಸ್ತಿ ಪುರಸ್ಕೃತ ಡಾ. ಬಸಂತ್ ಕುಮಾರ್‌ಕರ್ ಅವರು. ಕೋವಿಡ್ ವೈರಸ್‌ನ ಬೆಳೆಯುತ್ತಿರುವ ಅಪಾಯವನ್ನು ನೋಡಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯೂ ಜನರು ಅಗಿಯುವ ತಂಬಾಕು ಪದಾರ್ಥಗಳ ಸೇವನೆಯನ್ನು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಬೇಕು ಎಂದೇನೋ ಎಚ್ಚರಿಸುತ್ತಿದೆ. ‘ಆದರೆ, ಭಾರತದಂಥ ಜರ್ದಾ ವ್ಯಸನಿಗಳ ನಾಡಲ್ಲಿ, ಇದು ಸಾಧ್ಯವೇ?’ ಎನ್ನುವ ಪ್ರಶ್ನೆ ಎದುರಾಗುತ್ತದೆ. ತಂಬಾಕು ವ್ಯಸನಿಗಳೆಂದಷ್ಟೇ ಅಲ್ಲ, ಸಾಮಾನ್ಯವಾಗಿ ರಸ್ತೆಯಲ್ಲಿ ಚೀವಿಂಗ್‌ಗಮ್‌ನಿಂದ ಹಿಡಿದು, ಬಾಯಿಮುಕ್ಕಳಿಸಿ ಉಗುಳುವ ಅಭ್ಯಾಸವೂ ಜನಕ್ಕಿದೆ. ನಡೆಯುವಾಗ, ಡ್ರೈವಿಂಗ್ ಮಾಡುವಾಗ, ಬಸ್‌ಗಳಲ್ಲಿ ಕುಳಿತಾಗ ಹೊರಗೆ ತಲೆಹಾಕಿ ಉಗುಳುವುದಂತೂ ಸಾಮಾನ್ಯ ಚಿತ್ರಣ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಈ ರೀತಿಯ ವರ್ತನೆ ಹೆಚ್ಚಾಗಿ ಕಾಣಿಸುತ್ತದೆ. ಉಗುಳು ತಾಗಿದರೆ ಹೀಗೆ ಮಾಡಿ
ನಿಮಗೆ ಅನ್ಯರ ಉಗುಳು ತಾಗಿದರೆ, ಆ ಜಾಗವನ್ನು ಸ್ಪರ್ಷಿಸಬೇಡಿ. ಸೋಪು ನೀರು ಹಾಗೂ ಸ್ಯಾನಿಟೈಜರ್‌ಗಳಿಂದ ಸ್ವಚ್ಛಗೊಳಿಸಿ. ಒಂದು ವೇಳೆ ಯಾರದ್ದಾದರೂ ಉಗುಳು ನಿಮ್ಮ ಬಟ್ಟೆಗೆ ಬಿತ್ತೆಂದರೆ, ಆದಷ್ಟೂ ಬೇಗನೇ ಬಟ್ಟೆ ಬದಲಿಸಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಬಟ್ಟೆಗಳನ್ನು ಸೋಪಿನ ಪುಡಿ ಹಾಗೂ ಬಿಸಿನೀರಿನಲ್ಲಿ ಒಂದು ಗಂಟೆ ನೆನೆಸಿಟ್ಟು, ನಂತರ ಸ್ವಚ್ಛಗೊಳಿಸಿ. ಉಗುಳಬೇಡಿ ಭಾರತೀಯರೇ ಎಂದಿದ್ದ ಯುನೈಟೆಡ್ ಕಿಂಗ್‌ಡಮ್
ಯುನೈಟೆಡ್ ಕಿಂಗ್‌ಡಮ್‌ನ ಲಿಸೆಸ್ಟರ್‌ಶೈರ್ ಪೊಲೀಸರು ಕಳೆದವರ್ಷವಷ್ಟೇ ತಮ್ಮಲ್ಲಿನ ಭಾರತೀಯರಿಗೆ, ಮುಖ್ಯವಾಗಿ ಗುಜರಾತಿ ಜನರಿಗೆ ರಸ್ತೆಗಳಲ್ಲಿ ಪಾನ್ ಉಗುಳದಂತೆ ಎಚ್ಚರಿಸಿದ್ದರು. ತಪ್ಪಿತಸ್ಥರಿಗೆ 150 ಪೌಂಡ್ (13,800 ರೂಪಾಯಿ) ದಂಡ ವಿಧಿಸುವ ಎಚ್ಚರಿಕೆಯನ್ನೂ ಪೊಲೀಸ್ ಇಲಾಖೆ ನೀಡಿತ್ತು. ಬೋರ್ಡಲ್ಲಿ ಗುಜರಾತಿ ಭಾಷೆಯನ್ನೂ ಕಾಣಬಹುದು! – ಆಚಾರ್ಯ