Advertisement

Sarnath: ಆಧ್ಯಾತ್ಮ, ಸೌಂದರ್ಯ, ಐತಿಹಾಸಿಕ ಅನಾವರಣ ಸಾರನಾಥ

10:32 AM Dec 03, 2023 | Team Udayavani |

ಉತ್ತರಪ್ರದೇಶದ ವಾರಣಾಸಿ ಪುರಾತನ ಸಾಂಸ್ಕೃತಿಕ ನಗರವೆಂದೇ ಪ್ರಸಿದ್ಧ. ಸಾಮಾನ್ಯವಾಗಿ ವಾರಣಾಸಿ ಕಾಣಲು ಹೋದವರು ಸಾರನಾಥವನ್ನೂ ಹೊಕ್ಕು ಬರುತ್ತಾರೆ. ಸಾರನಾಥ ವಾರಣಾಸಿಯಿಂದ ಹತ್ತು ಕಿಲೋಮೀಟರ್‌ಗಳ ದೂರದಲ್ಲಿದೆ. ಪ್ರಪಂಚದ ಪವಿತ್ರ ಬೌದ್ಧ ಸ್ಥಳಗಳಲ್ಲಿ ಸಾರನಾಥ ಕೂಡ ಒಂದು. ಗೌತಮ ಬುದ್ಧನು ತನ್ನ ಮೊದಲ ಧರ್ಮೋಪದೇಶ ನೀಡಿದ ಸ್ಥಳವೆಂದು ಖ್ಯಾತಿಯಾಗಿದೆ. ಅಂದಿನಿಂದ ಸುಮಾರು 1700 ವರ್ಷಗಳವರೆಗೆ ಇದು ಉತ್ತಮ ಕಲಿಕೆಯ ಕೇಂದ್ರ, ತೀರ್ಥಯಾತ್ರೆಯ ಸ್ಥಳವಾಗಿ, ಸನ್ಯಾಸಿಗಳು ಮತ್ತು ವಿದ್ವಾಂಸರಿಗೆ ವಿಹಾರವೂ ಆಗಿ ಉಳಿದಿತ್ತೆಂದು ಪ್ರತೀತಿ. ವಾರಣಾಸಿಯ ಗಿರಿಜಾಘರ್‌ ಚೌಕದಿಂದ 15 ಕಿ.ಮೀ. ದೂರದಲ್ಲಿ ಉತ್ತರಪ್ರದೇಶದ ಗಂಗಾ, ವರುಣ ನದಿಗಳ ಸಂಗಮದ ಬಳಿ ಸಾರನಾಥ ಸ್ಥಿತಗೊಂಡಿದೆ. ಕಾಶಿ ನೋಡಲು ಹೋದವರು ಒಮ್ಮೆ ಸಾರನಾಥವನ್ನು ನೋಡಲು ಹೋಗದಿದ್ದರೆ, ವಾರಣಾಸಿ ಪ್ರವಾಸವು ಪೂರ್ಣವಾಗದು.

Advertisement

ಪ್ರಾಚೀನ ಇತಿಹಾಸ:

ಬೌದ್ಧರ ಕಥೆಯಂತೆ ರಾಜನೊಬ್ಬನು ಕೊಲ್ಲಲು ಯೋಜಿಸುತ್ತಿದ್ದ ನಾಯಿಯ ಬದಲಿಗೆ ಬೋಧಿಸತ್ವನೊಬ್ಬನು ತನ್ನನ್ನು ತಾನು ಜಿಂಕೆಯನ್ನಾಗಿ ಪರಿವರ್ತಿಸಿಕೊಂಡು ತನ್ನ ಪ್ರಾಣವನ್ನು ಅರ್ಪಿಸಿದನು. ಇದರಿಂದ ಭಾವಪರವಶನಾದ ರಾಜನು ಉದ್ಯಾನವನವನ್ನು ಜಿಂಕೆಗಳ ಅಭಯಾರಣ್ಯವನ್ನಾಗಿ ರಚಿಸಿದನು. ಸಾರಂಗನಾಥ ಪದದ ಸಂಕ್ಷಿಪ್ತ ರೂಪ ಸಾರನಾಥ ಎಂದು ಹೇಳಲಾಗುತ್ತದೆ. ಸಾರನಾಥದಲ್ಲಿರುವ ಪುರಾತತ್ವ ಶಾಸ್ತ್ರದ ಸಂಕೀರ್ಣದ ಪಕ್ಕದಲ್ಲಿ ಇರುವ ಜಿಂಕೆ ಉದ್ಯಾನದಲ್ಲಿ ಗೌತಮ ಬುದ್ಧನು ತನ್ನ ಮೊದಲ ಧರ್ಮೊಪದೇಶವನ್ನು ನೀಡಿದನೆಂದು ನಂಬಲಾಗಿದೆ. ಬುದ್ಧನ ಮೊದಲ ಬೋಧನೆಯನ್ನು ಧರ್ಮಚಕ್ರ ಪ್ರವರ್ತನ ಸೂತ್ರ ಎಂದು ಕರೆಯಲಾಗುತ್ತದೆ. ವಾರಣಾಸಿ ಅಥವಾ ಬನಾರಸ್‌ ಸಮೀಪವಿರುವ ಕಾರಣದಿಂದ ಬುದ್ಧನು ಸಾರನಾಥವನ್ನು ಆರಿಸಿಕೊಂಡನೆಂದು ಇತಿಹಾಸಕಾರರು ಹೇಳುತ್ತಾರೆ. ಬನಾರಸ್‌ ಈಗಾಗಲೆ ಕಲಿಕೆಯ ಕೇಂದ್ರವಾಗಿತ್ತು, ಬೌದ್ಧಧರ್ಮವನ್ನು ಪೋಷಿಸಿದ ಬನಾರಸ್‌ನ ರಾಜರು ಮತ್ತು ಶ್ರೀಮಂತ ವ್ಯಾಪಾರಿಗಳಿಂದ ಸಾರನಾಥವೂ ನಂತರ ಪ್ರವರ್ಧಮಾನಕ್ಕೆ ಬಂದಿತು.

ನಿಸರ್ಗದ ನಡುವೆ ಆಧ್ಯಾತ್ಮ:

ಸಾರನಾಥವು ಆಧ್ಯಾತ್ಮಿಕ ಮತ್ತು ನೈಸರ್ಗಿಕ ಸೌಂದರ್ಯವನ್ನು ಹೊಂದಿದ ಸ್ಥಳ. ಇಲ್ಲಿ ಸುಂದರವಾದ ಹಸಿರು ಗದ್ದೆಗಳು ಮತ್ತು ಶಾಂತ ಕೊಳಗಳಿವೆ. ನಾಲ್ಕು ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳಲ್ಲಿ ಇದೂ ಮಹತ್ವವಾದದ್ದು.  ಇಲ್ಲಿ ಕಂಡುಬರುವುದು ಹೆಚ್ಚಿನದಾಗಿ ಚಕ್ರವರ್ತಿ ಅಶೋಕನ ಕಾಲದ ಸ್ಮಾರಕಗಳು. ಕಳಿಂಗ ಯುದ್ಧದ ನಂತರ ಸಾಮ್ರಾಟ ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿ, ಆ ಪ್ರಭಾವದಿಂದ ಸಾರನಾಥದಲ್ಲಿ ಅನೇಕ ಸ್ಮಾರಕಗಳನ್ನು ನಿರ್ಮಿಸಲು ಪ್ರಾರಂಭಿಸಿದನು. ಅದರಲ್ಲಿ ಏಕಶಿಲೆಯ ರೇಲಿಂಗ್‌ನ ಕಿರೀಟವನ್ನು ಹೊಂದಿದ ಧರ್ಮ ರಾಜಿಕ ಸ್ತೂಪವೂ ಒಂದು. ಬುದ್ಧನ ಧರ್ಮೊಪದೇಶದ ಬಗ್ಗೆ ಅರಿಯುವು­ದರಿಂದ ಹಿಡಿದು ಹಿಂದಿನ ಕಾಲದ ಶಿಲ್ಪಗಳನ್ನು ಕಣ್ತುಂಬಿ­ ಕೊಳ್ಳುವುದು ಇಲ್ಲಿನ ಸ್ಮರಣೀಯ ಅನುಭವ. ಇಲ್ಲಿ ಅನೇಕ ದೇವಸ್ಥಾನಗಳು, ಹಳೆಯ ಮಠಗಳು ಮತ್ತು ಭವ್ಯವಾದ ಕಟ್ಟಡಗಳು ನೋಡುಗರ ಗಮನ ಸೆಳೆಯುವಂತಿವೆ.

Advertisement

ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳು:

ಜಿಂಕೆ ಪಾರ್ಕ್‌- ಸಾರನಾಥ ರೈಲು ನಿಲ್ದಾಣದಿಂದ 2 ಕಿ.ಮೀ. ದೂರದಲ್ಲಿರುವ ಪಾರ್ಕ್‌ ಇದು. ಜಿಂಕೆ ಮತ್ತು ಸರಿಸೃಪಗಳಿಗೆ ದೊಡ್ಡ ಆವರಣ. ಪಕ್ಷಿಮನೆ ಮತ್ತು ಕೊಳವಿದೆ.

ಚೌಖಂಡಿ ಸ್ತೂಪ- ಸಾರನಾಥ ರೈಲು ನಿಲ್ದಾಣ­ದಿಂದ 1.5 ಕಿ.ಮೀ. ದೂರದಲ್ಲಿದೆ ಈ ಸ್ತೂಪ. ಬುದ್ಧನು ತನ್ನ ಅನುಯಾಯಿಗಳೊಂದಿಗೆ ಮೊದಲ ಬಾರಿಗೆ ಒಟ್ಟುಗೂಡಿದ ನೆನಪಿಗಾಗಿ ಈ ಸ್ತೂಪವನ್ನು ನಿರ್ಮಿಸಲಾಯಿತು. ರಚನೆ, ಇತಿಹಾಸ, ವಾಸ್ತುಶಿಲ್ಪದ ಕಾರಣಕ್ಕೆ ಬಹಳ ಮುಖ್ಯವಾಗಿದೆ.

ಅಶೋಕ ಸ್ತಂಭ- ಮೌರ್ಯ ಸಾಮ್ರಾಟ ಅಶೋಕನು ಈ ಸ್ಥಂಭವನ್ನು ನಿರ್ಮಿಸಿದನು ಎಂಬ ಖ್ಯಾತಿ. ನಾಲ್ಕು ದಿಕ್ಕಿಗೆ ಮುಖ ಮಾಡಿರುವ ನಾಲ್ಕು ಸಿಂಹಗಳ ಮೂಲಕ ಅಶೋಕನು ನಾಲ್ಕು ಉದಾತ್ತ ಸತ್ಯಗಳನ್ನು ಹಂಚಿಕೊಂಡಿದ್ದಾನೆ. ಇದು ನಮ್ಮ ರಾಷ್ಟ್ರೀಯ ಸಂಕೇತವಾಗಿ ಕಾರ್ಯನಿರ್ವಹಿ­ಸುತ್ತಿದೆ. 50 ಮೀ. ಎತ್ತರವಿರುವ ಇದರ ಬಳಿ ಅನೇಕ ಬುದ್ಧಿಷ್ಟ್ಗಳು ಧ್ಯಾನ ಮಾಡುವುದನ್ನು ಕಾಣಬಹುದು.

ಟಿಬೇಟಿಯನ್‌ ದೇವಾಲಯ- ಸಾರನಾಥ ರೈಲು ನಿಲ್ದಾಣದಿಂದ 1 ಕಿ.ಮೀ. ದೂರವಿರುವ ದೇವಾಲಯದಲ್ಲಿ ಗೋಡೆಗಳನ್ನು ಅಲಂಕರಿಸಿ­ರುವ ಟಿಬೇಟಿಯನ್‌ ಬೌದ್ಧ ವರ್ಣಚಿತ್ರಗಳನ್ನು ಕಾಣಬಹುದು. ಅಂಗಳದಲ್ಲಿ ಪ್ರಾರ್ಥನಾ ಚಕ್ರಗಳಿವೆ.

ಧಮೇಖ್‌ ಸ್ತೂಪ- ಸಾರನಾಥದಲ್ಲಿ ಅತ್ಯಂತ ಢಾಳಾಗಿ ಗೋಚರಿಸುವ ರಚನೆಯಿದು. ಮೂಲ ಸ್ತೂಪವನ್ನು ಅಶೋಕನು ನಿರ್ಮಿಸಿದನು. ಸ್ತೂಪವು 31.3 ಮೀ ಎತ್ತರ, ಮತ್ತು ವ್ಯಾಸವು 28.3 ಮೀ ಇದೆ. ಸ್ತೂಪದ ಕೆಳಗಿನ ಭಾಗವು ನುಣ್ಣಗೆ ಕೆತ್ತಿದ ಕಲ್ಲುಗಳಿಂದ ಮುಚ್ಚಲ್ಪಟ್ಟಿದೆ.  ಧಮೇಖ ಸ್ತೂಪವನ್ನು ಬೌದ್ಧಧರ್ಮದ ಧ್ವನಿಯನ್ನು ಮೊದಲು ಕೇಳಿದ ಪ್ರವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.

ಸಾರನಾಥ ವಸ್ತು ಸಂಗ್ರಹಾಲಯ- ಇತಿಹಾಸ ಪ್ರಿಯರು ನೋಡಲೇಬೇಕಾದ ಮತ್ತೂಂದು ಸ್ಥಳ ಸಾರನಾಥ ವಸ್ತು ಸಂಗ್ರಹಾಲಯ. ಬೌದ್ಧ ಪ್ರಾಚೀನ ವಸ್ತುಗಳನ್ನು ಅವುಗಳ ಮೂಲ ಸ್ಥಳದಿಂದ ಸ್ಥಳಾಂತರಿಸಿ ಸಂಗ್ರಹಾಲಯದಲ್ಲಿಡ­ಲಾಗಿದೆ. ಈ ಸಂಗ್ರಹಾಲಯವನ್ನು 1910 ರಲ್ಲಿ ಸಾರ್ವಜನಿಕರಿಗೆ ತೆರೆಯಲಾಯಿತು. ಉಳಿದಂತೆ ಮುಲಗಂಧಕುಟಿ ವಿಹಾರ್‌, ವಾಟ್‌ ಥಾಯ್‌ ಎಂದು ಕರೆಯಲ್ಪಡುವ ಥಾಯ್‌ ದೇವಾಲಯ, 80 ಅಡಿ ಎತ್ತರವಿರುವ ಬುದ್ಧ ವಿಹಾರ,ದಿಗಂಬರ್‌ ಜೈನ ದೇವಾಲಯ, ಬೋಧಿ ವೃಕ್ಷ, ಸಿಂಗ್ಪುರ್‌, ಬರ್ಮಿಸ್‌ ಬೌದ್ಧ ದೇಗುಲ, ಮೊದಲಾದವು ಮತ್ತಿತರ ನೋಡುವಂತಹ ಸ್ಥಳಗಳು ಸುತ್ತಮುತ್ತಲಿದೆ.

ಸಾರನಾಥಕ್ಕೆ ಸಂಪರ್ಕ ಹೇಗೆ?

ಸಾರನಾಥ , ವಾರಣಾಸಿಯಿಂದ 10 ಕಿ.ಮೀ. ದೂರದಲ್ಲಿದೆ ಯಾವುದೇ ರೀತಿಯ ಸಾರಿಗೆಯನ್ನು ಬಳಸಿಕೊಂಡು ಅಲ್ಲಿಗೆ ತಲುಪಬಹುದು. ವಾರಣಾಸಿ­ ಯಿಂದ ಆಟೊ, ಕ್ಯಾಬ್‌ಗಳು ದೊರಕುತ್ತವೆ. ವಾರಣಾಸಿಯ ಲಾಲ್‌ ಬಹದ್ದೂರ್‌ ಶಾಸ್ತ್ರಿ ವಿಮಾನ ನಿಲ್ದಾಣವು ಸಾರನಾಥಕ್ಕೆ 20-25 ಕಿ.ಮೀ. ದೂರವಿದೆ. ರೈಲ್ವೇ ಸ್ಟೇಷನ್‌ ಕೂಡ ಇದೆ. ಸಾರನಾಥಕ್ಕೂ ರೈಲ್ವೆ ನಿಲ್ದಾಣವಿದೆ. ವಾರಣಾಸಿ ಕ್ಯಾಂಟ್‌ ರೈಲು ನಿಲ್ದಾಣವು 6 ಕಿ.ಮೀ., ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌ ನಿಂದ 17 ಕಿ.ಮೀ. , ಬನಾರಸ್‌ ನಿಲ್ದಾಣದಿಂದ 14 ಕಿ.ಮೀ. ದೂರದಲ್ಲಿದೆ. ರಸ್ತೆಯ ಮೂಲಕವಾದರೆ ಸುತ್ತಮುತ್ತಲಿನ ಎಲ್ಲಾ ರಸ್ತೆಯ ಜಾಲಗಳು ಸಾರನಾಥವನ್ನು ಸಂಪರ್ಕಿಸುತ್ತವೆ. ರಸ್ತೆ ಮಾರ್ಗ ಸಮರ್ಪಕವಾಗಿದೆ. ಚೌದರಿ ಚರಣ್‌ಸಿಂಗ್‌ ಬಸ್‌ ನಿಲ್ದಾಣ 7 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಅಕ್ಟೋಬರ್‌ ನಿಂದ ಮಾರ್ಚ್‌ವರೆಗೆ ಸೂಕ್ತ ಕಾಲವಾಗಿದೆ. ನಂತರ ಅತಿಯಾದ ಹವಾಮಾನದ ಬಿಸಿಯಿಂದಾಗಿ ಭೇಟಿ ಕಷ್ಟವಾಗುತ್ತದೆ. ಇಲ್ಲಿ ಆಚರಿಸಲಾಗುವ ಯಾವುದಾದರೂ ಹಬ್ಬವನ್ನು ಗಣನೆಯಲ್ಲಿಟ್ಟು­ಕೊಂಡು ಯೋಜಿಸಬಹುದು.

-ಮಮತಾ ಅರಸೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next