ಕಲಬುರಗಿ: ಮನೆಯಿಂದ ವಿಶ್ವದವರೆಗೂ ದು:ಖ ಆವರಿಸಿದ್ದು, ಆಧ್ಯಾತ್ಮಿಕತೆಯಲ್ಲಿ ದು:ಖ ಕಡಿಮೆ ಮಾಡುವ ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿ ಹೊಂದಿದೆ ಎಂದು ಎಡಿಜಿಪಿ ಭಾಸ್ಕರ್ ರಾವ್ ಹೇಳಿದರು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠದಲ್ಲಿ ನಡೆಯುತ್ತಿರುವ ಶ್ರೀ ಸುಧಾ ಮಂಗಳ ಮಹೋತ್ಸವ ದಲ್ಲಿ ಭಾಗವಹಿಸಿ, ಪೂಜ್ಯರಿಂದ ಮುದ್ರಾ ಹಾಕಿಸಿಕೊಂಡು ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಮನುಷ್ಯ ದು:ಖಕ್ಕೆ ಒಳಗಾದಾಗ ಪರಿಹಾರ ಕೋರಿ ನೆಮ್ಮದಿ ಕಂಡುಕೊಳ್ಳಲು ಆಧ್ಯಾತ್ಮಿಕ ಕಡೆ ಹೋಗುವುದನ್ನು ನಾವು ನೋಡಿದರೆ ಆಧ್ಯಾತ್ಮಿಕತೆಯಲ್ಲಿ ಎಷ್ಟು ಶಕ್ತಿ ಇದೆ ಎಂಬುದನ್ನು ನಿರೂಪಿಸುತ್ತದೆ ಎಂದರು.
ಧರ್ಮ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯಬೇಕಿದೆ. ಕಾರ್ಯಕ್ರಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸಮಾಜದವರನ್ನು ನೋಡಿ ಖುಷಿ ಆಯ್ತು. ಉತ್ತರಾದಿ ಮಠದ ಭಕ್ತರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಖುಷಿ ತಂದಿದೆ. ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಿ ಮುಂದೆ ಸಾಗಬೇಕು. ನಾಯಕತ್ವ ಬೇಕಿದೆ. ಧರ್ಮ ಸಂಸ್ಕೃತಿ, ಆಚರಣೆಗಳನ್ನು ಎಂದಿಗೂ ಮರೆಯಬೇಡಿ ಎಂದು ಕರೆ ನೀಡಿದರು.
ಇದನ್ನೂ ಓದಿ:ಗೋವಾ ವಿಧಾನಸಭೆಗೆ ರಾಣೆ ದಂಪತಿಗಳು : ಬಿಜೆಪಿಯ ಜೋಡಿಗೆ ಭರ್ಜರಿ ಜಯ
ಬ್ರಾಹ್ಮಣ ಜನ್ಮದಿಂದಲೇ ಆಗಲ್ಲ. ನಡೆ ನುಡಿಯಿಂದ ಆಗುತ್ತಾರೆ. ಸತ್ಯದ ಹಾದಿಯಲ್ಲಿ ಗಟ್ಟಿಯಾಗಿ ಮುನ್ನಡೆಯಬೇಕು. ಅಂತರ್ಜಾತಿ ದ್ವೇಷ ಇರಲೇಬಾರದು ಎಂದು ಕಿವಿ ಮಾತು ಹೇಳಿದರು.
ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಹೇಳುವುದಾರೆ ಸಣ್ಣಪುಟ್ಟ ತಪ್ಪುಗಳು ಹುಡುಕಬಾರದು. ಸಾಧನೆ ಗುರುತಿಸಬೇಕೆಂದ ಅವರು, ಈಗ ನಡೆಯುತ್ತಿರುವ ಯುಕ್ರೇನ್- ರಷ್ಯಾ ನಡುವಿನ ಯುದ್ದ ಸರಿಯಲ್ಲ. ಜನರನ್ನು ಕೊಂದು ಮಾಡುವ ಸಾಧನೆ ಯಾದರೂ ಏನು? ಅಮಾಯಕರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ ಎಂದು ಹೇಳಿದರು.