Advertisement

ಐಐಟಿ-ಜೆಇಇ ತರಬೇತಿಗೆ ಆಧ್ಯಾತ್ಮದ ಸ್ಪರ್ಶ

05:01 PM Jul 20, 2021 | Team Udayavani |

ಹುಬ್ಬಳ್ಳಿ: ಐಐಟಿ, ಜೆಇಇ, ಎನ್‌ಇಇಟಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ತರಬೇತಿಗೆ ಆಧ್ಯಾತ್ಮಿಕ ಸ್ಪರ್ಶ ನೀಡಲಾಗುತ್ತಿದೆ. ಭವಿಷ್ಯದಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಹೋಗಿ, ಸರ್ಕಾರಿ ಉದ್ಯೋಗ ಇಲ್ಲವೇ ಬೇರೆ ಬೇರೆ ವೃತ್ತಿಯಲ್ಲಿ ತೊಡಗುವವರು ದೇಶಕ್ಕೆ ಮಾದರಿಯಾಗಬೇಕು. ಪಾರದರ್ಶಕ, ಸಂಸ್ಕಾರ ಹಾಗೂ ಮೌಲ್ಯಯುತ ಮಾನವ ಸಂಪನ್ಮೂಲವಾಗಬೇಕು ಎಂಬ ಮಹದಾಸೆಯೊಂದಿಗೆ ತರಬೇತಿಗೆ ಶ್ರೀಕಾರ ಹಾಕಲಾಗಿದೆ.

Advertisement

ಮಹಾರಾಷ್ಟ್ರ ಕೊಲ್ಲಾಪುರ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಸಿದ್ಧಗಿರಿ ಪ್ರತಿಷ್ಠಾನದಿಂದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ತರಬೇತಿ ಆರಂಭಿಸಲಾಗಿದೆ. ಈ ವರ್ಷ ಮಹಾರಾಷ್ಟ್ರದ ವಿದ್ಯಾರ್ಥಿಗಳಲ್ಲದೆ ಕರ್ನಾಟಕದ ಗಡಿ ಭಾಗದ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಲಾಗುತ್ತಿದೆ. ಮುಂದಿನ ವರ್ಷದಿಂದ ಕರ್ನಾಟಕದ ಹೆಚ್ಚಿನ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗುತ್ತದೆ.

ದೇಶದ ಮೊದಲ ಸಾವಯವ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ ) ಆರಂಭದ ಮೂಲಕ ದೇಸಿ ಬೀಜಗಳ ಸಂರಕ್ಷಣೆ, ರೈತರಿಗೆ ತರಬೇತಿ, ಹೊಸ ತಳಿಗಳ ಪ್ರಯೋಗದ ಮೂಲಕ ಗಮನ ಸೆಳೆದಿರುವ ಕಾಡಸಿದ್ದೇಶ್ವರ ಮಠ ಇದೀಗ ರೈತರ ಮಕ್ಕಳಿಗೆ ಆದ್ಯತೆಯೊಂದಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪೂರಕವಾಗುವ ತರಬೇತಿ ನೀಡಲು ಮುಂದಾಗಿದೆ. ಕೃಷಿ ವಿಜ್ಞಾನ ಕೇಂದ್ರದ ರೈತರ ಹಾಸ್ಟೆಲ್‌ನಲ್ಲಿ ಜು.19ರಿಂದ ವಸತಿ ಸಹಿತ ತರಬೇತಿ
ಆರಂಭಗೊಂಡಿದೆ.

ಶೇ.10 ಉಚಿತ ಪ್ರವೇಶ: ಐಐಟಿ, ಜೆಇಇ, ಎನ್‌ಇಇಟಿ ಇನ್ನಿತರ ತರಬೇತಿಗೆ ಮೊದಲ ವರ್ಷದಲ್ಲಿ 100 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದ್ದು, ಹೆಚ್ಚಿನ ಪ್ರಚಾರ ಇಲ್ಲದೆಯೇ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಪ್ರವೇಶ ಪಡೆಯುವ ಕುರಿತು ಮಾಹಿತಿ ಪಡೆದವರು, ವಿಚಾರಣೆ ಮಾಡಿದವರ ಸಂಖ್ಯೆ ನೋಡಿದರೆ ಇನ್ನು ಕೆಲವೇ ದಿನಗಳಲ್ಲಿ 100 ಸ್ಥಾನಗಳು ಭರ್ತಿಯಾಗಲಿವೆ.

ರೈತರ ಮಕ್ಕಳು, ಗ್ರಾಮೀಣ ಭಾಗದವರಿಗೆ ಆದ್ಯತೆ ನೀಡಲಾಗುತ್ತಿರುವ ತರಬೇತಿ ಕೇಂದ್ರದಲ್ಲಿ ಬಡ ಕುಟುಂಬಗಳಿಂದ ಬಂದಿರುವ, ಕಲಿಯುವ ಉತ್ಕೃಷ್ಟ ಹಂಬಲ ಇದ್ದರೂ ತರಬೇತಿ ಶುಲ್ಕ ಭರಿಸಲು ಸಾಧ್ಯವಾಗದೆ ಅವಕಾಶಗಳಿಂದ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಶೇ.10 ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರವೇಶ ನೀಡಲಾಗುತ್ತದೆ. ಜತೆಗೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಭಾಗದ ವಿದ್ಯಾರ್ಥಿಗಳಿಗೆ ತರಬೇತಿಯ ಪ್ರವೇಶಕ್ಕೆ ಶೇ.5 ಸ್ಥಾನಗಳನ್ನು ಮೀಸಲಿಡಲಾಗಿದೆ. ಮುಂದಿನ ವರ್ಷದಿಂದ ಕರ್ನಾಟಕದ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರವೇಶವಕಾಶಕ್ಕೆ ನಿರ್ಧರಿಸಲಾಗಿದೆ.

Advertisement

ಈ ವರ್ಷ ಮರಾಠಿ ಹಾಗೂ ಇಂಗ್ಲಿಷ್‌ನಲ್ಲಿ ತರಬೇತಿ ನೀಡಲಾಗುತ್ತಿದ್ದರೆ, ಮುಂದಿನ ವರ್ಷದಿಂದ ಕನ್ನಡದಲ್ಲೂ ತರಬೇತಿ ನೀಡಲು ಯೋಜಿಸಲಾಗಿದೆ. ತರಬೇತಿಗಾಗಿ ಕೋಟಾದಿಂದ ಮೂವರು ತರಬೇತಿದಾರರು ಆಗಮಿಸಿದ್ದು, ಕೆಲವು ವೈದ್ಯರನ್ನು ಸಹ ತರಬೇತಿಗೆ ನಿಯೋಜಿಸಲಾಗಿದೆ. ಹೊರಗಡೆ ಇದೇ ಮಾದರಿಯ ತರಬೇತಿಗೆ ಖಾಸಗಿ ಸಂಸ್ಥೆಗಳು ಪಡೆಯುವ ಶುಲ್ಕಕ್ಕಿಂತಲೂ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡಲಾಗುತ್ತಿದೆ.

ಯೋಗ-ಸಾವಯವ ಭೋಜನ: ತರಬೇತಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಕೇವಲ ಕೋರ್ಸ್‌ ಗಳ ಕುರಿತು ತರಬೇತಿ ಅಲ್ಲದೆ, ಜೀವನ ದರ್ಶನದ ತರಬೇತಿಯೂ ನೀಡಲಾಗುತ್ತದೆ. ಆಧ್ಯಾತ್ಮಾಧಾರಿತ ಚಿಂತನೆಗಳು, ರಾಷ್ಟ್ರಭಕ್ತಿ, ಸಮಾಜ-ದೇಶಕ್ಕೆ ನೀಡಬೇಕಾದ ಕೊಡುಗೆ, ಬದುಕಿನಲ್ಲಿ ಶಿಸ್ತು, ಉದ್ಯೋಗ-ವೃತ್ತಿಯಲ್ಲಿ ಪಾರದರ್ಶಕತೆ ಹಾಗೂ ಉತ್ತಮ ಆಡಳಿತದ ಜತೆಗೆ ತನ್ಮಯತೆ, ಸಮಾಜಮುಖೀ ಚಿಂತನೆಗಳನ್ನು ವಿದ್ಯಾರ್ಥಿಗಳು ಮನದೊಳಗೆ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ ಯೋಗ, ಧ್ಯಾನ, ಪ್ರಾರ್ಥನೆ, ಕ್ರೀಡೆಗಳನ್ನು ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಆಧ್ಯಾತ್ಮ ಚಿಂತನೆಗಳೊಂದಿಗೆ ಅವರ ಮನದೊಳಗೆ ಸದ್ವಿಚಾರ ಬಿತ್ತನೆಯ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ.

ಆಧ್ಯಾತ್ಮ ಚಿಂತನೆಗಿಳಿದರೆ ಮನಸ್ಸು ಶುದ್ಧವಾಗುತ್ತದೆ. ಸದ್ವಿಚಾರಗಳು ಮೂಡುವ, ಇರುವ ಸದ್ವಿಚಾರಗಳಿಗೆ ಪ್ರೇರಣೆ ನೀಡುವ ಕಾರ್ಯ ಆಗಲಿದೆ ಎಂಬ ಉದ್ದೇಶದಿಂದಲೇ ತರಬೇತಿಗೆ ಆಧ್ಯಾತ್ಮದ ಸ್ಪರ್ಶ ನೀಡಲಾಗುತ್ತಿದೆ. ಸಾತ್ವಿಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾವಯವ ಆಧಾರಿತ ಆಹಾರಧಾನ್ಯಗಳು, ಪದಾರ್ಥಗಳಿಂದ ತಯಾರಿಸಿದ ಉಪಾಹಾರ, ಊಟ ನೀಡಲಾಗುತ್ತದೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಇಂತಹ ತರಬೇತಿ ಕೇಂದ್ರಗಳು ಸಾವಿರಾರಿವೆ. ಆದರೆ, ತರಬೇತಿಗೆ ಆಧ್ಯಾತ್ಮ ಸ್ಪರ್ಶ ನೀಡುವ, ನಡೆ-ನುಡಿ, ಆಚರಣೆ, ವೈಯಕ್ತಿಕ ಬದುಕಿನ ದೃಷ್ಟಿಯಿಂದಲೂ ಶುದ್ಧತೆ, ಪರಿಪಕ್ವತೆಗೆ ಇಂಬು ನೀಡುವ, ಪ್ರೇರಣೆಯಾಗುವ, ಸಾವಯವ ಪದಾರ್ಥಗಳ ಭೋಜನ ಉಣಬಡಿಸುವ ವಿಶೇಷ ಹಾಗೂ ಮಾದರಿ ಕಾರ್ಯಕ್ಕೆ ಮುನ್ನುಡಿ ಬರೆಯಲಾಗುತ್ತಿದೆ.

ಪಾಲಕರ ಮೊಬೈಲ್‌ಗೆ ಸಿಸಿ ಕ್ಯಾಮೆರಾ ಸಂಪರ್ಕ
ತರಬೇತಿ ಕೇಂದ್ರದಲ್ಲಿಯೇ ವಿದ್ಯಾರ್ಥಿಗಳಿಗೆ ತರಬೇತಿ, ಭೋಜನ ವ್ಯವಸ್ಥೆ ಮಾಡಲಾಗುತ್ತಿದ್ದು, ಕ್ಯಾಂಪಸ್‌ನಿಂದ ಹೊರಗೆ ಹೋಗಲು ಅವಕಾಶ ನೀಡಲಾಗುತ್ತಿಲ್ಲ. ಕಟ್ಟಡದೊಳಗಿನ ಗ್ರಂಥಾಲಯ ಹಾಗೂ ತರಬೇತಿ ಕೊಠಡಿಗಳಲ್ಲಿನ ಸಿಸಿ ಕ್ಯಾಮೆರಾಗಳ ಸಂಪರ್ಕವನ್ನು ಪ್ರತಿ ವಿದ್ಯಾರ್ಥಿಯ ಪಾಲಕರ ಮೊಬೈಲ್‌ಗೆ ನೀಡಲಾಗುತ್ತದೆ. ತಮ್ಮ ಮಗ ತರಗತಿಗೆ ಹಾಜರಾಗಿದ್ದಾನೋ ಇಲ್ಲವೋ, ತರಬೇತಿಯಲ್ಲಿ ಯಾವ ರೀತಿ ಪಾಲ್ಗೊಳ್ಳುತ್ತಾನೆ, ಗ್ರಂಥಾಲಯದಲ್ಲಿ ಓದುವುದು, ಅಂತರ್ಜಾಲ ಹಾಗೂ ಪುಸ್ತಕಗಳ ಮೂಲಕ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೇಗೆ ಪಾಲ್ಗೊಳ್ಳುತ್ತಾನೆ. ಎಷ್ಟು ಗಂಟೆಗಳವರೆಗೆ ಓದಿನಲ್ಲಿ ತೊಡಗುತ್ತಾನೆ ಎಂಬಿತ್ಯಾದಿ ಮಾಹಿತಿಯನ್ನು ಪಾಲಕರು ನಿತ್ಯವೂ ವೀಕ್ಷಿಸಬಹುದಾಗಿದೆ.

ಸಾವಯವ ಕೃಷಿ, ಗೋಪಾಲನೆ, ಆರೋಗ್ಯ, ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ ಶ್ರೀಮಠ ಇದೇ ಮೊದಲ ಬಾರಿಗೆ ತರಬೇತಿಯಂತಹ ವಾಣಿಜ್ಯ ಕಾರ್ಯಕ್ಕೆ ಮುಂದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ, ವೈದ್ಯರು, ಎಂಜಿನಿಯರ್‌ ಇನ್ನಿತರ ಉದ್ಯೋಗ-ವೃತ್ತಿಗಳಿಗೆ ಹೋಗುವವರಲ್ಲಿ ಆಧ್ಯಾತ್ಮ ಹಾಗೂ ಸಮಾಜಮುಖೀ ಚಿಂತನೆ, ರಾಷ್ಟ್ರಪ್ರೇಮದಂತಹ ಭಾವನೆಗಳನ್ನು ಮನದಟ್ಟು ಮೂಲಕ ಉತ್ತಮ ನಾಗರಿಕರನ್ನಾಗಿಸುವ ಕಳಕಳಿ ಮುಖ್ಯವಾಗಿದೆ. ಶ್ರೀಮಠ ಯಾವುದೇ ಕಾರ್ಯಕ್ಕಿಳಿದರೂ ಅದು ಅತ್ಯುತ್ತಮವಾಗಿರುತ್ತದೆ ಎಂಬ ವಿಶ್ವಾಸ ಇದ್ದು, ಅದರಡಿಯಲ್ಲಿಯೇ ತರಬೇತಿ ಸಾಗಲಿದೆ.
ಶ್ರೀ ಅದೃಶ್ಯ ಕಾಡಸಿದ್ದೇಶ್ವರ
ಸ್ವಾಮೀಜಿ, ಕನೇರಿಮಠ

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next