ಬೆಂಗಳೂರು: ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಸರ್ವನಾಶವಾಗುತ್ತಿರುವುದನ್ನು ಜನತೆಗೆ ತಲುಪಿಸಲು ರಾಜ್ಯಾದ್ಯಂತ ಚೈತನ್ಯ ಸಮಾವೇಶ ಮಾಡುವ ಮೂಲಕ ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆ ಐಸಿಯುನಲ್ಲಿದೆ.
ಉದ್ಯೋಗ ಸೃಷ್ಟಿ ಕೋಮಾವಸ್ಥೆಯಲ್ಲಿದೆ. ಇರುವ ಉದ್ಯೋಗ ಉಳಿಸಿಕೊಳ್ಳಲು ಆಗ್ತಿಲ್ಲ. ದೇಶ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿರುವ ಹಾಗೆ ಕಾಣಿಸುತ್ತಿದೆ. ಐದೂವರೆ ವರ್ಷದ ಹಿಂದೆ ಮೋದಿ ಪ್ರಧಾನಿ ಆದಾಗ ಜನರಲ್ಲಿ ಸಾಕಷ್ಟು ಆಸೆ ಹುಟ್ಟಿಸಿದ್ದವರು. ಆದರೆ, ಈಗ ತಪ್ಪು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ದೇಶವನ್ನು ಸರ್ವನಾಶದತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ವಾಧಿಕಾರಿ ಪ್ರಧಾನಿ ಮೋದಿ ಯಾರ ಮಾತನ್ನೂ ಕೇಳುತ್ತಿಲ್ಲ. ಪ್ರಜಾಪ್ರಭುತ್ವ ನಾಶ ಪಡಿಸುವ ಮೂಲಕ ದೇಶವನ್ನು ಸರ್ವನಾಶದತ್ತ ಒಯ್ಯುತ್ತಿದ್ದಾರೆ. ನೋಟು ಅಮಾನ್ಯಿಕರಣ ಮೂಲಕ ಇಡೀ ದೇಶಕ್ಕೆ ಸಮಸ್ಯೆ ಉಂಟು ಮಾಡಿದರು. ಜಿಎಸ್‌ಟಿ ಮೂಲಕ ದೇಶದ ಜಿಡಿಪಿ ಕುಸಿತ ಮಾಡಿದರು. ಯಾವುದೇ ಕಾಯ್ದೆ ಜಾರಿ ಮಾಡುವಾಗ ಆಗಲಿ, ಹೊಸ ನಿಯಮ ರೂಪಿಸುವಾಗ ಆಗಲಿ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.ಯಾವುದೇ ವಿಷಯದ ಬಗ್ಗೆ ಚರ್ಚೆಯೂ ನಡೆಸುತ್ತಿಲ್ಲ. ಇದರಿಂದ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಖಂಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದರು.
ಆರ್‌ಸಿಇಪಿ ವಿರುದ್ಧ ಪ್ರತಿಭಟನೆ: ಕೇಂದ್ರ ಸರ್ಕಾರ ಮುಕ್ತ ಆರ್ಥಿಕ ನೀತಿ ಅಡಿಯಲ್ಲಿ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದು, ಈ ಬಗ್ಗೆ ದೇಶದ ಜನರನ್ನು ಕತ್ತಲೆಯಲ್ಲಿ ಇಟ್ಟು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಆರ್‌ಸಿಇಪಿ ಒಪ್ಪಂದದಿಂದ ದೇಶದ ಕೃಷಿ, ಹೈನುಗಾರಿಕೆ, ಬೇರೆ ಉದ್ಯೋಗಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಜೊತೆಗೆ ಚರ್ಚೆ ನಡೆಸಬೇಕಿತ್ತು. ಆದರೆ, ಯಾವುದೇ ಮಾಹಿತಿ ನೀಡದೇ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಸೋಮವಾರ ಕಾಂಗ್ರೆಸ್ ಕಿಸಾನ್ ಘಟಕದಿಂದ ರೈಲು ತಡೆ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಕೇಂದ್ರದ ಅನುದಾನವೂ ಯಾರಪ್ಪಂದೂ ಅಲ್ಲ: ಅನ್ನ ಭಾಗ್ಯ ಯೋಜನೆ ಸಿದ್ದರಾಮಯ್ಯ ಅವರಪ್ಪನ ಮನೆಯಿಂದ ತಂದು ಕೊಟ್ಟಿದ್ದಲ್ಲ ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರ ನೀಡುವ ಹಣವೂ ಯಾರಪ್ಪಂದೂ ಅಲ್ಲ ಎಂದು ಹೇಳಿದ್ದಾರೆ. ಯುಪಿಎ ಸರ್ಕಾರ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಪಡಿತರ ವಿತರಿಸುವ ಯೋಜನೆ ಜಾರಿಗೆ ತಂದಿದೆ.
ರಾಜ್ಯ ಸರ್ಕಾರ 7 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ದೇಶದ ಯಾವ ರಾಜ್ಯವೂ ಉಚಿತವಾಗಿ ಅಕ್ಕಿ ನೀಡುತ್ತಿಲ್ಲ. ಕರ್ನಾಟಕ ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯವಾಗಿದೆ. ಮೊದಲು ಪಡಿತರ ವ್ಯವಸ್ಥೆಗೆ ಕೇವಲ 700 ಕೋಟಿ ರೂ.ನೀಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2500 ಕೋಟಿ ರೂ.ರಾಜ್ಯ ಸರ್ಕಾರವೇ ನೀಡುತ್ತಿದೆ. ಜನರ ತೆರಿಗೆ ಹಣದ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮಾನ್ಯತೆ ನೀಡುವ ಅಗತ್ಯವಿಲ್ಲ. ಅವರಿಗೆ ಅನುಭವದ ಕೊರತೆ ಇದೆ ಎಂದು ಹೇಳಿದರು.
ಮುಂಡಗೋಡದಲ್ಲಿ ಇಂದು ಪ್ರತಿಭಟನೆ: ನವೆಂಬರ್ 4 ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ನ. 5 ರಂದು ಶಿವಮೊಗ್ಗ, 6 ರಂದು ವಿಜಯಪುರ, 9 ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ನ.11 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು.