Advertisement

ಭೌತಿಕ ಸಂಪತ್ತಿನೊಂದಿಗೆ ಆಧ್ಯಾತ್ಮ ಅರಿವು ಅಗತ್ಯ: ರಂಭಾಪುರಿ ಶ್ರೀ

05:09 PM Dec 14, 2018 | |

ಶಿವಮೊಗ್ಗ: ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ನೆಮ್ಮದಿ ಮತ್ತು ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಭೌತಿಕ ಸಿರಿ ಸಂಪದ ಜೊತೆ ಒಂದಿಷ್ಟು ಅಧ್ಯಾತ್ಮ ಅರಿವು ಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. ಗಾಡಿಕೊಪ್ಪದಲ್ಲಿ ಗುರುವಾರ ನಡೆದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
 
ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಗಳಿಸದಿದ್ದರೆ ಜೀವನ ವ್ಯರ್ಥ. ಅರಿವುಳ್ಳ ಮಾನವ ಜೀವನದಲ್ಲಿ ಹಣ ಸಂಪಾದಿಸದಿದ್ದರೂ ಪರವಾ ಇಲ್ಲ. ಗುಣ ಸಂಪನ್ನರಾಗಿ ಬಾಳುವುದು ಆದರ್ಶ ಜೀವನದ ಗುರಿ. ವೀರಶೈವ ಧರ್ಮ ಸಿದ್ಧಾಂತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವಾತ್ಮ ಪರಮಾತ್ಮನಾಗುವ ಜೀವನ ಸಿದ್ಧಾಂತವನ್ನು ಬೋಧಿಸಿರುವರು. ಕಾಯಕ ಮತ್ತು ದಾಸೋಹದ ಮೂಲಕ ಬದುಕಿನಲ್ಲಿ ಶ್ರೇಯಸ್ಸನ್ನು ಕಾಣಬೇಕೆಂದರು.

Advertisement

ತರೀಕೆರೆ ಹಿರೇಮಠದ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ಧರ್ಮ ಸಮಾರಂಭ ಉದ್ಘಾಟಿಸಿದರು. ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಮಳಲಿ ಸಂಸ್ಥಾನ ಮಠದ ಡಾ| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮತ್ತು ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಉಪದೇಶವನ್ನಿತ್ತರು.  ತಾವರೆಕೆರೆ ಶಿಲಾಮಠ, ಹಾರನಹಳ್ಳಿ ರಾಮಲಿಂಗೇಶ್ವರಮಠ, ಚನ್ನಗಿರಿ ಹಿರೇಮಠ, ಶಿರಸಿ ರುದ್ರದೇವರಮಠ ಮತ್ತು ಯಡ್ರಾಮಿ ಶ್ರೀಗಳು ಇದ್ದರು. ನೇತೃತ್ವವನ್ನು ಗಾಡಿಕೊಪ್ಪದ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು ವಹಿಸಿ ಮಾತನಾಡಿದರು.

ಶಿವಮೊಗ್ಗ ಮಹಾಪೌರರಾದ ಲತಾ ಗಣೇಶ, ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್‌.ಜೆ. ರಾಜಶೇಖರ (ಸುಭಾಷ್‌) ಹಾಗೂ ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಚನ್ನಬಸಪ್ಪ (ಚೆನ್ನಿ) ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಉಸ್ತಾದ್‌ ಹುಮಾಯೂನ ಹರ್ಲಾಪುರ ಮತ್ತು ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ವಿದ್ವಾನ್‌ ರೇಣುಕಾರಾಧ್ಯರು ಸ್ವಾಗತಿಸಿದರು. ಶಾಂತಾ ಆನಂದ ನಿರೂಪಿಸಿದರು.

ಮಹಾಪೂಜಾ: ಗಾಡಿಕೊಪ್ಪದ ಸಭಾ ಭವನದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಸಂಭ್ರಮದಿಂದ ಜರುಗಿತು. ಸಾವಿರಾರು ಜನರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next