ಕಾರವಾರ: ಮಾಜಾಳಿ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 30 ಸಾವಿರ ಲೀಟರ್ ಸ್ಪಿರಿಟ್ ವಶವಾಗಿದೆ. ಇದರ ಅಂದಾಜು ಮೊತ್ತ 18 ಲಕ್ಷ ರೂ. ಹಾಗೂ ಟ್ಯಾಂಕರ್ ಬೆಲೆ 35 ಲಕ್ಷದ್ದಾಗಿದ್ದು ವಶಕ್ಕೆ ಪಡೆಯಲಾಗಿದೆ. ಚಾಲಕ ಹಾಗೂ ಕ್ಲೀನರ್ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ರೂಪ.ಎಂ ತಿಳಿಸಿದರು.
ಅಬಕಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕೈಗಾರಿಕಾ ಉದ್ದೇಶದ ಹೆಸರಲ್ಲಿ ಮದ್ಯ ತಯಾರಿಕಾ ಸ್ಪಿರಿಟ್ ಸಾಗಾಟದ ಅಕ್ರಮದ ಬಗ್ಗೆ ವಿವರಿಸಿದರು.
ಬೀದರ್ ನ ರವೀಂದ್ರ ಡಿಸ್ಟಲರಿ ಹೆಸರಲ್ಲಿ ಗೋವಾದ ಗ್ಲೋಬಲ್ ಡಿಸ್ಟಲರಿ ಘಟಕಕ್ಕೆ ಸ್ಪಿರಿಟ್ ಸಾಗಾಟವಾಗುತ್ತಿತ್ತು. ತನಿಖೆಯಲ್ಲಿ ಗ್ಲೋಬಲ್ ಡಿಸ್ಟಲರಿ ಎಂಬ ಘಟಕ ಮುಚ್ಚಿರುವುದು ಬೆಳಕಿಗೆ ಬಂದಿದೆ. ಬೀದರನ ರವೀಂದ್ರ ಡಿಸ್ಟಲರಿ ವ್ಯವಸ್ಥಾಪಕ ನಿರ್ದೇಶಕರನ್ನು ಎಫ್ಐಆರ್ ನಲ್ಲಿ ಸೇರಿಸಲಾಗಿದೆ ಎಂದರು. ವಶಪಡಿಸಿಕೊಂಡ ಟ್ಯಾಂಕರ್ ಮಧ್ಯಪ್ರದೇಶದ್ದು, ಚಾಲಕ ಹಾಗೂ ಕ್ಲೀನರ್ ಸಹ ಮಧ್ಯಪ್ರದೇಶದವರು. ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇರಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ.
ಇದನ್ನೂ ಓದಿ:ICC Player Of The Month Award; ಪಟ್ಟಿಯಲ್ಲಿ ಬುಮ್ರಾ, ಹೊಸ ಪ್ರತಿಭೆ ರಚಿನ್ ರವೀಂದ್ರ
ಅಕ್ರಮ ಸ್ಪಿರಿಟ್ ಬೆಲೆ 18 ಲಕ್ಷ ರೂ. ಟ್ಯಾಂಕರ್ ನಲ್ಲಿ 30,000 ಲೀಟರ್ ಸ್ಪಿರಿಟ್ ಇದೆ. ಇದರಿಂದ 10,000 ಬಾಕ್ಸ್ ಮದ್ಯ ತಯಾರಿಸಬಹುದು. ಅಂದಾಜು 3.66 ಕೋಟಿ ಬೆಲೆಯ ಮದ್ಯ ತಯಾರಿಸಿ ಮಾರುವ ಸಾಧ್ಯತೆ ಇತ್ತು. ಚೆಕ್ ಪೋಸ್ಟ್ ನಲ್ಲಿ ನಮಗೆ ಅಕ್ರಮ ಸ್ಪಿರಿಟ್ ಸಾಗಾಟದ ಮಾಹಿತಿಯಿತ್ತು. ಚಾಲಕ ತೋರಿಸಿದ ಕೈಗಾರಿಕಾ ಉದ್ದೇಶದ ಸ್ಪಿರಿಟ್ ಎಂಬ ಪತ್ರ ನಕಲಿ ಎಂದು ಅನುಮಾನ ಬಂದಾಗ, ಸ್ಪಿರಿಟನ್ನು ಪ್ರಯೋಗಾಲಯಕ್ಕೆ ಕಳಿಸಲಾಯಿತು. ಧಾರವಾಡ, ಹಳಿಯಾಳ ಅಬಕಾರಿ ಪ್ರಯೋಗಾಲಯದಿಂದ ಬಂದ ವರದಿಗಳು ಮದ್ಯಕ್ಕೆ ಬಳಸುವ ಸ್ಪಿರಿಟ್ ಎಂದು ಖಚಿತಪಡಿಸಿವೆ. ಹಾಗಾಗಿ ತಕ್ಷಣ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ರೂಪ ವಿವರಿಸಿದರು.
ಮಾಜಾಳಿ ಮತ್ತು ಅನಮೂಡ ಚೆಕ್ ಪೋಸ್ಟ್ ನಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಅನೇಕ ರೈಡ್ ನಡದಿವೆ ಎಂದರು. ಅಬಕಾರಿ ಸಿಪಿಐ ಸದಾಶಿವ ಕೋರ್ತಿ, ಬಸವರಾಜ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಶಾಸಕರಿಗೆ ತಪ್ಪು ಮಾಹಿತಿಯಿದ್ದ ಕಾರಣ ಸ್ವಲ್ಪ ಮಾತಿನ ವ್ಯತ್ಯಾಸವಾಗಿದೆ. ಇದನ್ನು ಸರಿಪಡಿಸಲಾಗಿದೆ ಎಂದು ಹೇಳಿದರು.
ಅಬಕಾರಿ ಅಕ್ರಮ ತಡೆಗೆ ನೇವಿ ಪೋಲೀಸ್, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಜೊತೆ ಸಭೆ ಮಾಡುವುದಾಗಿ ಹೇಳಿದರು.