Advertisement

ಕ್ಷಿಪ್ರ ಪತ್ತೆ, ನಿಖರ ಚಿಕಿತ್ಸೆ ಅಗತ್ಯ ಬೆನ್ನೆಲುಬಿನ ಸೋಂಕುಗಳು

04:46 PM Jan 11, 2020 | Sriram |

ಬೆನ್ನೆಲುಬಿನ ಸೋಂಕುಗಳು ಅಸಾಮಾನ್ಯವಾದ ಅಥವಾ ಅಪೂರ್ವವಾದ ಅನಾರೋಗ್ಯ ಸ್ಥಿತಿಯೇನೂ ಅಲ್ಲ. ಇವು ಕಶೇರುಕ ತಟ್ಟೆ ಮತ್ತು ಎಲುಬುಗಳಿಗೆ ಹಾನಿಯನ್ನು ಉಂಟು ಮಾಡಬಹುದಾಗಿದ್ದು, ಇದರಿಂದ ಬೆನ್ನಿನಲ್ಲಿ ತೀವ್ರ ನೋವು, ವೈಕಲ್ಯ, ಕೀವು ಸಂಗ್ರಹ ಮತ್ತು ನರಶಾಸ್ತ್ರೀಯ ಸಮಸ್ಯೆಗಳೂ ತಲೆದೋರಬಹುದು. ದೇಹದಲ್ಲಿ ಒಳಗೆ ಆಳದಲ್ಲಿ ಹುದುಗಿರುವುದರಿಂದ ಮತ್ತು ಸೋಂಕುಗಳ ಲಕ್ಷಣಗಳು ತೀರಾ ವಿಳಂಬವಾಗಿ ಗಮನಕ್ಕೆ ಬರುವುದರಿಂದ ಬೆನ್ನುಹುರಿಯ ಸೋಂಕುಗಳನ್ನು ಪತ್ತೆಹಚ್ಚುವುದು ಕಷ್ಟ. ಇದಕ್ಕೆ ನೀಡುವ ಚಿಕಿತ್ಸೆಯ ಯಶಸ್ಸು ಆದಷ್ಟು ಬೇಗನೆ ಖಚಿತವಾಗಿ ಪತ್ತೆಹಚ್ಚುವುದು, ಸರಿಯಾದ ಆ್ಯಂಟಿಬಯಾಟಿಕ್‌ ಔಷಧಗಳನ್ನು ಆರಂಭಿಸುವುದು ಮತ್ತು ಕೆಲವೊಮ್ಮೆ, ಅಗತ್ಯಬಿದ್ದಾಗ ಶಸ್ತ್ರಚಿಕಿತ್ಸೆ ನಡೆಸುವುದನ್ನು ಅವಲಂಬಿಸಿದೆ. ಇನ್ನಿತರ ಯಾವುದೇ ಎಲುಬು ಮತ್ತು ಸಂಧಿಗಳ ಸೋಂಕುಗಳಂತೆಯೇ ಗುಣವಾಗುವುದಕ್ಕೆ ಬಹಳ ಕಾಲ ತೆಗೆದುಕೊಳ್ಳುತ್ತದೆ. ಬಹುತೇಕ ಪ್ರಕರಣಗಳಲ್ಲಿ ದೀರ್ಘ‌ಕಾಲ ಹಾಸಿಗೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿ ಬರುವುದರಿಂದ ಬೆನ್ನುಹುರಿಯ ಸೋಂಕುಗಳು ಕುಟುಂಬದ ಮೇಲೆ ದೈಹಿಕ ಮತ್ತು ಆರ್ಥಿಕ ದುಷ್ಪರಿಣಾಮವನ್ನೂ ಬೀರುತ್ತವೆ.

Advertisement

ಬೆನ್ನುಹುರಿಯ ಸೋಂಕುಗಳು ಉಂಟಾಗುವುದು ಹೇಗೆ?
ಬಹುತೇಕ ಬಾರಿ ದೇಹದ ಇನ್ನಾವುದೋ ಭಾಗದಲ್ಲಿ (ಶ್ವಾಸಕೋಶ, ಮೂತ್ರಾಂಗ ವ್ಯೂಹ, ಜನನಾಂಗ ವ್ಯೂಹ, ಚರ್ಮ, ದುಗ್ಧರಸ ವ್ಯವಸ್ಥೆ ಇತ್ಯಾದಿ) ಉಂಟಾದ ಸೋಂಕಿನಿಂದ ದ್ವಿತೀಯಕ ಸೋಂಕಾಗಿ ಬೆನ್ನುಹುರಿಯ ಸೋಂಕುಗಳು ಉಂಟಾಗುತ್ತವೆ. ಸೋಂಕುಕಾರಕ ರೋಗಾಣುಗಳು ರಕ್ತನಾಳಗಳ ಮೂಲಕ ಬೆನ್ನುಹುರಿಗೆ ಪಸರಿಸುತ್ತವೆ. ಅಪರೂಪವಾಗಿ ಸುತ್ತಲಿನ ಸಂರಚನೆಗಳ ಮೂಲಕವೂ ಸೋಂಕು ಬೆನ್ನುಹುರಿಗೆ ಪಸರಿಸುತ್ತದೆ. ಅಲ್ಲಿ ರೋಗಾಣಗಳು ದ್ವಿಗುಣಗೊಳ್ಳಲು ಆರಂಭಿಸುತ್ತವೆ, ಉರಿಯೂತಕ್ಕೆ ಕಾರಣವಾಗುತ್ತವೆ ಮತ್ತು ಎಲುಬು/ ಕಶೇರುಕ ಮಣಿ/ ಕಶೇರುಕ ತಟ್ಟೆಗಳನ್ನು ಹಾನಿಗೀಡು ಮಾಡಿ ಬೆನ್ನುಹುರಿಯಲ್ಲಿ ಕೀವು ತುಂಬಲು ಕಾರಣವಾಗುತ್ತವೆ. ಧೂಮಪಾನ, ಬೊಜ್ಜು, ಅಪೌಷ್ಟಿಕತೆ, ರಕ್ತಹೀನತೆ, ಮಧುಮೇಹ, ರೋಗ ನಿರೋಧಕ ಶಕ್ತಿ ನಷ್ಟವಾಗುವುದು (ಎಚ್‌ಐವಿ), ಪುನರಾವರ್ತಿತ ಡಯಾಲಿಸಿಸ್‌ ಅಗತ್ಯವಾಗಿರುವ ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆಗಳು ಮತ್ತು ಅಪಾಯಕಾರಿ ಗಡ್ಡೆಗಳ ಬೆಳವಣಿಗೆ – ಇವು ಬೆನ್ನುಹುರಿಯ ಸೋಂಕು ಉಂಟಾಗುವುದಕ್ಕೆ ಇರುವ ಕೆಲವು ಅಪಾಯಾಂಶಗಳಾಗಿವೆ.

ಸಾಮಾನ್ಯವಾಗಿರುವ ರೋಗಕಾರಕಗಳಾವುವು?
ಎರಡು ವಿಧವಾದ ಸೋಂಕುಗಳು ಉಂಟಾಗುತ್ತವೆ.
-ಪೊಜೆನಿಕ್‌ ಸೋಂಕು ಬಹಳ ಸಾಮಾನ್ಯವಾಗಿ ಸ್ಟಫಿಲೊಕಾಕಸ್‌ ಆರೀಯಸ್‌ನಿಂದ ಉಂಟಾಗುತ್ತದೆ. ಎಶ್ಚೆರಿಶಿಯಾ ಕೋಲಿ, ಸ್ಟಫಿಲೊಕಾಕಸ್‌ ಎಪಿಡರ್ಮಿಡಿಸ್‌ ಸಾಮಾನ್ಯವಾಗಿರುವ ಇತರ ರೋಗಕಾರಕಗಳಾಗಿವೆ.

-ಗ್ರ್ಯಾನ್ಯುಲೋಮಾಟಸ್‌ ಸೋಂಕುಗಳು ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲಾಸಿಸ್‌, ಬ್ರುಸೆಲಾ ಮತ್ತು ಕೆಲವು ಪ್ರಭೇದದ ಶಿಲೀಂಧ್ರಗಳಿಂದ ಉಂಟಾಗುತ್ತವೆ. ಮೈಕೊಬ್ಯಾಕ್ಟೀರಿಯಂ ಟ್ಯುಬರ್‌ಕ್ಯುಲಾಸಿಸ್‌ನಿಂದ ಕಾಣಿಸಿಕೊಳ್ಳುವ ಬೆನ್ನುಹುರಿಯ ಕ್ಷಯ ಭಾರತದಲ್ಲಿ ಅತಿ ಸಾಮಾನ್ಯವಾಗಿರುವ ಬೆನ್ನುಹುರಿಯ ಸೋಂಕಾಗಿದೆ.

ವೈದ್ಯಕೀಯ ಲಕ್ಷಣಗಳೇನು?
ಸಾಮಾನ್ಯವಾಗಿ ಮೊತ್ತಮೊದಲು ಕಾಣಿಸಿಕೊಳ್ಳುವ ಲಕ್ಷಣವೆಂದರೆ ಬೆನ್ನುನೋವು. ಪೊÂàಜೆನಿಕ್‌ ರೋಗಕಾರಕಗಳಿಂದ ಉಂಟಾಗುವ ಹಠಾತ್‌ ಸೋಂಕುಗಳಲ್ಲಿ ಮಧ್ಯಮದಿಂದ ತೀವ್ರ ತರಹದ ನೋವು, ಕಿರು ಅವಧಿಗೆ ಮಾತ್ರ ತೋರಿಬರುವ ಲಕ್ಷಣಗಳು, ಬೆನ್ನು ಪೆಡಸಾಗುವುದು ಮತ್ತು ತೀವ್ರ ಜ್ವರ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ.ಇತ್ತೀಚೆಗೆ ದೇಹದ ಬೇರೆಲ್ಲಾದರೂ ಪೊÂàಜೆನಿಕ್‌ ಸೋಂಕು ಉಂಟಾಗಿರುವ ಇತಿಹಾಸವಿರುತ್ತದೆ.

Advertisement

ಕ್ಷಯದಂತಹ ದೀರ್ಘ‌ಕಾಲಿಕ ಸೋಂಕುಗಳಲ್ಲಿ ನೋವು ಮಧ್ಯಮದಿಂದ ತೀವ್ರ ಪ್ರಮಾಣಕ್ಕೆ ಕ್ರಮೇಣ ನಿಧಾನವಾಗಿ ಹೆಚ್ಚುತ್ತ ಹೋಗುತ್ತದೆ. ವಿಶೇಷವಾಗಿ ಸಂಜೆಯ ಹೊತ್ತಿಗೆ ಲಘು ಜ್ವರ ಕಾಣಿಸಿಕೊಳ್ಳುತ್ತದೆ. ತೂಕ ನಷ್ಟ ಮತ್ತು ಹಸಿವಾಗದೆ ಇರುವಿಕೆ ಇತರ ಲಕ್ಷಣಗಳು. ನೋವು ಪ್ರಧಾನವಾದ ಲಕ್ಷಣವಾಗಿಲ್ಲದೆ ಇರುವುದರಿಂದ ಸಾಮಾನ್ಯವಾಗಿ ಕ್ಷಯ ತಡವಾಗಿ ಪತ್ತೆಯಾಗುತ್ತದೆ. ಬೆನ್ನೆಲುಬಿನ ವೈಕಲ್ಯ, ಭಾರೀ ಕೀವು ತುಂಬಿಕೊಂಡು ಬಾತುಕೊಳ್ಳುವುದು, ಕಾಲುಗಳ ಪಕ್ಷವಾತ ತೀರಾ ಮುಂದುವರಿದ ಹಂತಗಳಲ್ಲಿ ಉಂಟಾಗುತ್ತವೆ. ಕೆಲವೊಮ್ಮೆ ಚಲಿಸಲು ಆಗದಿರುವುದು ಮತ್ತು ಕಾಲುಗಳ ಪಕ್ಷವಾತ ಮಾತ್ರ ವೈದ್ಯಕೀಯ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತವೆ.

ತಪಾಸಣೆ, ರೋಗಪತ್ತೆ
ಬಹಳ ಸುಲಭವಾಗಿ ನಡೆಸಬಹುದಾದ ರೋಗ ಪತ್ತೆ ವಿಧಾನ ಅಥವಾ ಪರೀಕ್ಷೆಯೆಂದರೆ ಬೆನ್ನೆಲುಬಿನ ಎಕ್ಸ್‌ರೇ ಮತ್ತು ಕಂಪ್ಲೀಟ್‌ ಬ್ಲಿಡ್‌ ಕೌಂಟ್‌ (ಸಿಬಿಸಿ). ಎರಿಥ್ರೊಕ್ರೈಟ್‌ ಸೆಡಿಮೆಂಟೇಶನ್‌ ರೇಟ್‌ (ಇಎಸ್‌ಆರ್‌) ಸಿಬಿಸಿಯ ಒಂದು ಅಂಗವಾಗಿದೆ. ಎಲ್ಲ ಬಗೆಯ ಬೆನ್ನೆಲುಬಿನ ಸೋಂಕುಗಳಲ್ಲಿ ಇಎಸ್‌ಆರ್‌ ಏರಿಕೆಯಾಗಿರುತ್ತದೆ. ಹಠಾತ್‌ ಪೊÂàಜೆನಿಕ್‌ ಸೋಂಕುಗಳಲ್ಲಿ ಬಿಳಿ ರಕ್ತಕಣ (ಡಬ್ಲ್ಯುಬಿಸಿ) ಪ್ರಮಾಣ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಎಕ್ಸ್‌ರೇಯ ಮೂಲಕ ಕಶೇರುಕ ತಟ್ಟೆಯ ಸ್ಥಳ, ಕಶೇರುಕ ಸರಪಣಿ ಮತ್ತು ಬೆನ್ನೆಲುಬಿನ ಜೋಡಣೆಗೆ ಹಾನಿ, ವ್ಯತ್ಯಯವಾಗಿರುವುದು ತಿಳಿದುಬರುತ್ತದೆ.

ಸೋಂಕಿನ ಮೊದಲ ಹಂತಗಳಲ್ಲಿ, ಅಂದರೆ ಆರು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಎಕ್ಸ್‌ರೇ ನಡೆಸುವುದು ಸಾಮಾನ್ಯ. ಆದರೆ ಬೆನ್ನೆಲುಬಿನ ಎಂಆರ್‌ಐ ನಡೆಸುವುದರಿಂದ ಇನ್ನೂ ಬೇಗನೆ ಸೋಂಕನ್ನು ಪತ್ತೆಹಚ್ಚಬಹುದು. ಆದ್ದರಿಂದ ಬೆನ್ನೆಲುಬಿನ ಸೋಂಕು ತಗಲಿದೆ ಎಂದು ಶಂಕಿಸಲ್ಪಟ್ಟ ರೋಗಿಗಳಲ್ಲಿ ಎಕ್ಸ್‌ರೇ ಸಾಮಾನ್ಯವಾಗಿದ್ದರೂ ಎಂಆರ್‌ಐ ಸ್ಕ್ಯಾನ್‌ ಮಾಡಿಸುವುದು ನಿಖರ ರೋಗಪತ್ತೆಗೆ ಸಹಕಾರಿ. ಎಂಆರ್‌ಐಯ ಇತರ ಪ್ರಯೋಜನಗಳೆಂದರೆ, ಕೀವು ಎಷ್ಟು ಪ್ರಮಾಣದಲ್ಲಿ ತುಂಬಿಕೊಂಡಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆಯಲ್ಲದೆ, ಬೆನ್ನು ಹುರಿಯ ಮೇಲೆ ಅದರ ಪರಿಣಾಮವನ್ನೂ ತೋರಿಸಿಕೊಡುತ್ತದೆ. ಗಡ್ಡೆ ಬೆಳೆಯುವಿಕೆಯಂತಹ ಬೆನ್ನೆಲುಬಿನ ಇತರ ರೋಗಸ್ಥಿತಿಗಳು ಉಂಟಾಗಿವೆಯೇ ಅಥವಾ ಉಂಟಾಗಿರುವುದು ಬೆನ್ನೆಲುಬಿನ ಸೋಂಕೇ ಎಂಬುದನ್ನು ಪತ್ತೆ ಮಾಡುವುದಕ್ಕೂ ಎಂಆರ್‌ಐ ಸ್ಕ್ಯಾನ್‌ ಸಹಕಾರಿ.

ರೋಗಬಾಧಿತ ಸ್ಥಳದಲ್ಲಿ ಅಥವಾ ರಕ್ತದಲ್ಲಿ ಇರುವ ರೋಗಾಣುವಿನ ಸಂರಚನೆ ಅಥವಾ ಅದರ ವಂಶವಾಹಿಯನ್ನು ಗುರುತಿಸುವ ಮೂಲಕ ಬೆನ್ನೆಲುಬಿನ ಸೋಂಕನ್ನು
ಖಚಿತವಾಗಿ ಪತ್ತೆ ಮಾಡಲಾಗುತ್ತದೆ. ರೋಗಕಾರಕವು ಕಲ್ಚರ್‌ ಮಾಧ್ಯಮದಲ್ಲಿ ಬೆಳೆಯಬಲ್ಲುದಾಗಿದ್ದು ಇದರಿಂದ ಆ್ಯಂಟಿಬಯಾಟಿಕ್‌ ಪ್ರತಿಸ್ಪಂದನೆಯನ್ನೂ ವಿಶ್ಲೇಷಿಸಬಹುದಾಗಿದೆ. ರೋಗಕಾರಕವು ಎಲುಬಿನಲ್ಲಿ ಉತ್ಪಾದಿಸಿರುವ ಹಿಸ್ಟೊ-ಪೆಥಾಲಜಿಕ್‌ ಲಕ್ಷಣಗಳ ವಿಶ್ಲೇಷಣೆಯಿಂದಲೂ ರೋಗಪತ್ತೆಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಕ್ಷಯವು ಗ್ರ್ಯಾನುಲೋಮಾವನ್ನು ಉತ್ಪಾದಿಸಿರುತ್ತದೆ.

-ಡಾ| ರಘುರಾಜ್‌ ಕುಂದಣಗಾರ
ಅಸೋಸಿಯೇಟ್‌ ಪ್ರೊಫೆಸರ್‌ ಮೂಳೆರೋಗಗಳ ಚಿಕಿತ್ಸಾ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next