ಶಾಂತಪುರವೆಂಬ ರಾಜ್ಯ ಸಂಪದ್ಭರಿತವಾಗಿತ್ತು. ರಾಜ್ಯವನ್ನು ಆಳುತ್ತಿದ್ದ ಮಹೇಂದ್ರಸಿಂಹನು ಪ್ರಜೆಗಳನ್ನು ಮಕ್ಕಳಂತೆ ಕಾಣುತ್ತಿದ್ದನು. ಪ್ರಜೆಗಳನ್ನು ಸುಖವಾಗಿ ನೋಡಿಕೊಳ್ಳಬೇಕೆಂಬುದೇ ಅವನ ಮಹತ್ವಾಕಾಂಕ್ಷೆಯಾಗಿತ್ತು. ಅವನಿಗಿದ್ದ ಒಂದೇ ತಲೆನೋವೆಂದರೆ ಶತ್ರುಗಳು! ಅಕ್ಕಪಕ್ಕದ ರಾಜ್ಯದ ರಾಜರಿಗೆ ಮಹೇಂದ್ರ ಸಿಂಹನ ರಾಜ್ಯದ ಮೇಲೆಯೇ ಕಣ್ಣು. ಹೀಗಾಗಿ ಆಗಾಗ್ಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಅವರು ಸಾಕಷ್ಟು ಕಷ್ಟನಷ್ಟ ಉಂಟುಮಾಡುತ್ತಿದ್ದರು. ಹೀಗಾಗಿ ಅವನ ಖಜಾನೆಯ ಅರ್ಧ ಭಾಗ ಸೇನೆಯ ಉಸ್ತುವಾರಿಗೇ ಖರ್ಚಾಗಿಬಿಡುತ್ತಿತ್ತು.
ಒಂದು ಸಲ ನೆರೆಯ ರಾಜರೆಲ್ಲರೂ ಒಗ್ಗಟ್ಟಾಗಿ ಶಾಂತಪುರಕ್ಕೆ ಲಗ್ಗೆಯಿಟ್ಟರು. ಅವರನ್ನು ಹಿಮ್ಮೆಟ್ಟಿಸುವಷ್ಟರಲ್ಲಿ ಮಹೇಂದ್ರಸಿಂಹ ಹೈರಾಣಾಗಿದ್ದ. ರಾಜ್ಯಕ್ಕೆ ಅಪಾರ ಹಾನಿಯಾಗಿತ್ತು. ಈ ಹೊಡೆತದಿಂದ ರಾಜ್ಯ ಚೇತರಿಸಿಕೊಳ್ಳಲಿಲ್ಲ. ಆರ್ಥಿಕ ಪರಿಸ್ಥಿತಿ ದಿನ ದಿನಕ್ಕೂ ಹಳ್ಳ ಹಿಡಿಯತೊಡಗಿತ್ತು. ಪ್ರಜೆಗಳಲ್ಲರೂ ರಾಜನನ್ನು ದೂರತೊಡಗಿದರು. ಶತ್ರುವಿನ ಇರಿತವನ್ನು ಬೇಕಾದರೂ ರಾಜ ಸಹಿಸಿಕೊಳ್ಳುವವನಿದ್ದ, ಆದರೆ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರಜೆಗಳ ಅಸಮಾಧಾನವನ್ನು ಸಹಿಸಿಕೊಳ್ಳದಾದ. ರಾತ್ರೋ ರಾತ್ರಿ ರಾಜ ಪದವಿಯನ್ನು ತ್ಯಜಿಸಿ ತನಗೆ ಅಧಿಕಾರ, ಜನರ ಪ್ರೀತಿ ಏನೂ ಬೇಡವೆಂದು ಕಾಡು ಸೇರಿಕೊಂಡ.
ಒಂದೆರೆಡು ವಾರಗಳ ಕಾಲ ಕಾಡಿನಲ್ಲಿ ತಲೆಮರೆಸಿಕೊಂಡು ಅಲೆದಾಡುತ್ತಾ ಗೆಡ್ಡೆ ಗೆಣೆಸು ಹಣ್ಣುಹಂಪಲುಗಳನ್ನು ತಿಂದು ಕಾಲಕಳೆದನು. ಒಮ್ಮೆ ಬಂಡೆಯೊಂದರ ಮೇಲೆ ಮರದ ನೆರಳಿನಲ್ಲಿ ಮಲಗಿ ವಿಶ್ರಮಿಸುತ್ತಿದ್ದಾಗ ಬಂಡೆಯ ಸಂದಿಯಲ್ಲಿ ನಡೆಯುತ್ತಿದ್ದ ವಿದ್ಯಮಾನವೊಂದು ಮಹೇಂದ್ರಸಿಂಹನ ಗಮನಸೆಳೆಯಿತು. ಅಲ್ಲಿ ಜೇಡರ ಹುಳುವೊಂದು ಬಲೆಯನ್ನು ಹೆಣೆಯುವ ಪ್ರಯತ್ನದಲ್ಲಿತ್ತು. ಪ್ರತೀ ಸಾರಿ ಬಲೆ ನೇಯ್ದಾಗಲೂ ಗಾಳಿ ಜೋರಾಗಿ ಬೀಸಿ ಬಲೆ ಕಿತ್ತುಕೊಂಡು ಹೋಗುತ್ತಿತ್ತು. ಆದರೆ ಜೇಡ ಮಾತ್ರ ಬಲೆ ನೇಯುವುದನ್ನು ನಿಲ್ಲಿಸಲಿಲ್ಲ. ತನ್ನ ಪ್ರಯತ್ನವನ್ನದು ಮಾಡುತ್ತಲೇ ಇತ್ತು. ಸ್ವಲ್ಪ ಹೊತ್ತಿನ ನಂತರ ಜೇಡ ಸದೃಢವಾಗಿ ಬಲೆ ನೇಯ್ದೆàಬಿಟ್ಟಿತು. ಈ ಬಾರಿ ಗಾಳಿ ಎಷ್ಟು ಜೋರಾಗಿ ಬೀಸಿದರೂ ಬಲೆ ಹಾರಿಹೋಗಲಿಲ್ಲ.
ರಾಜನಿಗೆ ಜೇಡವನ್ನು ಕಂಡು ಜ್ಞಾನೋದಯವಾಯಿತು. ತನ್ನ ಬಗ್ಗೆ ತನಗೇ ಬೇಸರ ಹುಟ್ಟಿತು. ಕಣದಷ್ಟು ಗಾತ್ರದ ಕೀಟವೊಂದು ಇಷ್ಟೊಂದು ಪ್ರಯತ್ನದ ನಂತರವೂ ದೃತಿಗೆಡದೆ ತನ್ನಕಾರ್ಯವನ್ನು ಸಾಧಿಸುವುದಾದರೆ ಸಾಕಷ್ಟು ಸಂಪನ್ಮೂಲ, ಜನರ ಪ್ರೀತಿ, ಸೈನ್ಯ ಹಾಗೂ ಅಧಿಕಾರ ಇರುವ ನಾನೇಕೆ ಹೇಡಿಯಂತೆ ಹೆದರಿ ಫಲಾಯನ ಮಾಡಿದೆ ಎಂದು ಪಶ್ಚಾತ್ತಾಪ ಪಟ್ಟನು. ಕೂಡಲೆ ಕಾಡು ಬಿಟ್ಟು ತನ್ನ ರಾಜ್ಯಕ್ಕೆ ವಾಪಸ್ಸಾದನು. ಒಂದು ಕ್ಷಣ ಕರ್ತವ್ಯದಿಂದ ನುಣುಚಿಕೊಳ್ಳಲೆತ್ನಿಸಿದ್ದಕ್ಕೆ ಪ್ರಜೆಗಳ ಮುಂದೆ ಕ್ಷಮೆ ಕೋರಿದನು. ತನ್ನ ಸೈನ್ಯವನ್ನು ಸಂಘಟಿಸಿ, ಸಂಪನ್ಮೂಲಗಳನ್ನೆಲ್ಲಾ ಕ್ರೋಢೀಕರಿಸಿ ಶತ್ರುಗಳ ಮೇಲೆ ದಂಡೆತ್ತಿ ಹೋಗಿ ಅವರನ್ನು ಹೇಳಹೆಸರಿಲ್ಲದಂತೆ ಸೆದೆ ಬಡಿದನು. ಮುಂದೆಂದೂ ನೆರೆಯ ರಾಜ್ಯದವರು ಕಿರುಕುಳ ನೀಡಲಿಲ್ಲ. ಶಾಂತಪುರದ ಪ್ರಜೆಗಳು ರಾಜ ಮಹೇಂದ್ರಸಿಂಹನ ಆಳ್ವಿಕೆಯಲ್ಲಿ ಸುಖವಾಗಿದ್ದರು.
– ಪ.ನಾ.ಹಳ್ಳಿ. ಹರೀಶ್‌ಕುಮಾರ್