Advertisement

ಚಳಿಗಾಲಕ್ಕೆ ಖಾರ ಸ್ಪೆಷಲ್‌

09:16 AM Feb 13, 2020 | mahesh |

ಚಳಿಗಾಲದ ಈ ಸಂಜೆಗಳಲ್ಲಿ ಹಸಿವು, ಬಾಯಿ ಚಪಲ ಜಾಸ್ತಿ. ಟೀ-ಕಾಫಿ ಜೊತೆ ಏನಾದ್ರೂ ಬಿಸಿಬಿಸಿಯಾಗಿ ತಿನ್ನೋಣ ಅನ್ನಿಸುತ್ತದೆ. ಆಗ, ಬೀದಿ ಬದಿಯ ಚಾಟ್ಸ್‌ ಅಂಗಡಿಗೆ ಓಡಿ, ಏನಾದರೂ ತರುವುದು ಬಹಳ ಸುಲಭದ ಕೆಲಸ. ಆದರೆ, ಹೊರಗಿನ ತಿನಿಸುಗಳಿಂದ ಆರೋಗ್ಯ ಕೆಡುವ ಅಪಾಯವಿರುತ್ತದೆ. ಬದಲಿಗೆ, ಹೊರಗೆ ಸಿಗುವ ಪದಾರ್ಥಗಳನ್ನು ಮನೆಯಲ್ಲೇ ತಯಾರಿಸುವುದು ಒಳ್ಳೆಯದು…

Advertisement

1. ಡ್ರೈ ಗೋಬಿ
ಬೇಕಾಗುವ ಸಾಮಗ್ರಿ: ಸ್ವಚ್ಛಪಡಿಸಿ ದೊಡ್ಡದಾಗಿ ಹೆಚ್ಚಿದ ಹೂಕೋಸು – 1/2 ಕೆ.ಜಿ., ಹೆಚ್ಚಿದ ಶುಂಠಿ-2 ದೊಡ್ಡ ಚಮಚ, ಹೆಚ್ಚಿದ ಬೆಳ್ಳುಳ್ಳಿ-2 ದೊಡ್ಡ ಚಮಚ, ಟೊಮೇಟೊ -3, ಉಪ್ಪು-ರುಚಿಗೆ ತಕ್ಕಷ್ಟು, ಕಾರ್ನ್ ಫ್ಲೋರ್‌ (ಜೋಳದ ಹಿಟ್ಟು) -2 ದೊಡ್ಡ ಚಮಚ, ಕಡಲೆಹಿಟ್ಟು- 200 ಗ್ರಾಂ, ಸಣ್ಣಗೆ ಹೆಚ್ಚಿದ ಹಸಿಮೆಣಸು-4, ಈರುಳ್ಳಿ-1, ಖಾರದಪುಡಿ-1 ಚಮಚ, ಅರಿಶಿಣ-ಚಿಟಿಕೆ, ಕರಿಯಲು ಎಣೆ.¡

ಮಾಡುವ ವಿಧಾನ: ಹೂಕೋಸನ್ನು ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಒಂದೆರಡು ನಿಮಿಷ ಬೇಯಿಸಿಕೊಳ್ಳಿ. ನೀರಿನಿಂದ ತೆಗೆದು, ಜರಡಿಯಲ್ಲಿ ಹಾಕಿ ಪೂರ್ತಿ ನೀರು ಬಸಿಯಲು ಬಿಡಿ. ನಂತರ, ಟೊಮೇಟೋ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಹಾಕಿ ನೀರು ಬೆರೆಸದೆ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಉಪ್ಪು, ಖಾರದಪುಡಿ, ಅರಿಶಿಣ ಬೆರೆಸಿ ಚೆನ್ನಾಗಿ ಕಲಸಿ, ಕಾರ್ನ್ ಫ್ಲೋರ್‌ ಹಾಗೂ ಕಡಲೆಹಿಟ್ಟು ಬೆರೆಸಿ, ಚೆನ್ನಾಗಿ ಕಲಸಿ. ಅಗತ್ಯ ಬಿದ್ದರೆ ಸ್ವಲ್ಪ ನೀರು ಬೆರೆಸಿ. ಮಿಶ್ರಣವು ಇಡ್ಲಿ ಹಿಟ್ಟಿನ ಹದದಲ್ಲಿ ಇರಲಿ. ನಂತರ, ಈ ಕಡಲೆಹಿಟ್ಟಿನ ಮಿಶ್ರಣದಲ್ಲಿ ಗೋಬಿಯನ್ನು ಅದ್ದಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಇದು ಆಲೂಗಡ್ಡೆ ಪೋಡಿ/ಬಜ್ಜಿಯಂತೆ ಕಂಡರೂ, ಗೋಬಿಗೆ ಹಾಕುವ ಸಾಮಗ್ರಿಗಳನ್ನು ಬಳಸಿರುವುದರಿಂದ ಗೋಬಿಮಂಚೂರಿಯ ರುಚಿ ಕೊಡುತ್ತದೆ.

2. ಮೂಲಂಗಿ ಪಕೋಡ
ಬೇಕಾಗುವ ಸಾಮಗ್ರಿ: ತುರಿದ ಮೂಲಂಗಿ-1ಬಟ್ಟಲು, ಉದ್ದವಾಗಿ ಹೆಚ್ಚಿದ ಈರಳ್ಳಿ-1ಬಟ್ಟಲು, ಕಡಲೆ ಹಿಟ್ಟು-150 ಗ್ರಾಂ, ಸಣ್ಣಗೆ ಹೆಚ್ಚಿದ ಕರಿಬೇವು-1 ಬಟ್ಟಲು, ಶುಂಠಿ ತುರಿ-1 ಚಮಚ, ಸಣ್ಣಗೆ ಹೆಚ್ಚಿದ ಹಸಿಮೆಣಸು-3 ಚಮಚ, ಉಪ್ಪು-ರುಚಿಗೆ, ಅರಿಶಿಣ-ಚಿಟಿಕೆ, ಅಜವಾನ-1 ಚಮಚ, ಕರಿಯಲು ಎಣ್ಣೆ.

ಮಾಡುವ ವಿಧಾನ: ಒಂದು ಪಾತ್ರೆಗೆ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನೂ ಹಾಕಿ ಚೆನ್ನಾಗಿ ಕಲಸಿ. ಮೂಲಂಗಿಯಲ್ಲಿ ಅಧಿಕ ನೀರಿರುವ ಕಾರಣ ಅಗತ್ಯವಿರುವಷ್ಟೇ ನೀರು ಚಿಮುಕಿಸಿ, ಹುಡಿಹುಡಿಯಾಗಿ ಕಲಸಿ. ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ, ಹೊಂಬಣ್ಣ ಬರುವವರೆಗೆ ಕರಿಯಿರಿ.

Advertisement

3. ಬೇರುಹಲಸಿನಕಾಯಿ (ಜೀಗುಜ್ಜೆ) ಪೋಡಿ
ಬೇಕಾಗುವ ಸಾಮಗ್ರಿ: ಕಡಲೆಹಿಟ್ಟು-2 ಕಪ್‌, ಉಪ್ಪು-ರುಚಿಗೆ ತಕ್ಕಷ್ಟು, ಖಾರದಪುಡಿ-3 ಚಮಚ, ಇಂಗು- ಸ್ವಲ್ಪ, ಅಡುಗೆ ಸೋಡ-ಚಿಟಿಕೆ, ಕರಿಯಲು- ಎಣ್ಣೆ.

ಮಾಡುವ ವಿಧಾನ: ಬೇರು ಹಲಸನ್ನು ಸಿಪ್ಪೆ ತೆಗೆದು ತೆಳ್ಳಗೆ ಹೆಚ್ಚಿಕೊಳ್ಳಿ. ಕಡಲೆಹಿಟ್ಟು ಜರಡಿ ಹಿಡಿದು ಅದಕ್ಕೆ ಉಪ್ಪು, ಖಾರದಪುಡಿ, ಅಡುಗೆ ಸೋಡ, ಸ್ವಲ್ಪ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿ. ಹಿಟ್ಟು, ಇಡ್ಲಿ ಹಿಟ್ಟಿನ ಹದಕ್ಕೆ ಬರಲಿ. ನಂತರ, ಕಲಸಿದ ಹಿಟ್ಟಿನಲ್ಲಿ ಹೆಚ್ಚಿದ ಚೂರುಗಳನ್ನು ಅದ್ದಿ, ಒಂದೊಂದಾಗಿ ಎಣ್ಣೆಯಲ್ಲಿ ಬಿಟ್ಟು ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ.

4. ಆಲೂ ಪೋಡಿ
ಬೇಕಾಗುವ ಸಾಮಗ್ರಿ: ಕಡಲೆಹಿಟ್ಟು-2 ಕಪ್‌, ಆಲೂಗಡ್ಡೆ-2 ದೊಡ್ಡ ಗಾತ್ರದ್ದು, ಉಪ್ಪು-ರುಚಿಗೆ ತಕ್ಕಷ್ಟು, ಅಚ್ಚಖಾರದ ಪುಡಿ-2 ಚಮಚ, ಅಜವಾನ-1 ಚಮಚ, ಚಿಟಿಕೆ ಅರಿಶಿಣ, ಅಡುಗೆಸೋಡಾ- 2 ಚಿಟಿಕೆ, ಎಣ್ಣೆ.

ಮಾಡುವ ವಿಧಾನ: ಕಡಲೆಹಿಟ್ಟು ಗಂಟಾಗದಂತೆ ಜರಡಿ ಹಿಡಿದುಕೊಳ್ಳಿ. ಅದಕ್ಕೆ ಉಪ್ಪು, ಖಾರದಪುಡಿ, ಅರಿಶಿಣ, ಅಡುಗೆ ಸೋಡ ಮತ್ತು ಅಜವಾನ ಹಾಕಿ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿ. ಮಿಶ್ರಣವು, ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಟ್ಟು, ಆಲೂವನ್ನು ತೆಳ್ಳಗೆ ಹೆಚ್ಚಿಕೊಳ್ಳಿ. ನಂತರ, ಆಲೂವನ್ನು ಒಂದೊಂದಾಗಿ ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ.

 -ಗೀತಾ ಎಸ್‌ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next