Advertisement

ಮಸಾಲೆಯಿಲ್ಲದ ಖಾಲಿ ಪುರಿ

05:54 PM Nov 17, 2017 | Team Udayavani |

ಯಾವುದೇ ಸಿನಿಮಾ ಆಗಿರಲಿ, ಅದು ಮನರಂಜನೆ ಕೊಡುವಂತಿರಬೇಕು. ಇಲ್ಲವೇ, ಒಂದಷ್ಟು ಸಂದೇಶ ಸಾರುವಂತಿರಬೇಕು. ಹೋಗಲಿ, ಸುಮ್ಮನೆ ನೋಡಿಸಿಕೊಂಡು ಹೋಗುವಂತಾದರೂ ಇರಬೇಕು. ಈ ಮೂರು ಗುಣಗಳಲ್ಲಿ ಒಂದೇ ಒಂದು ಗುಣವಿದ್ದಿದ್ದರೂ, ಬಹುಶಃ ನೋಡುಗರಿಗೆ “ಪಾನಿಪುರಿ’ ರುಚಿಸುತ್ತಿತ್ತೇನೋ? ಆದರೆ, ನಿರ್ದೇಶಕರು ಇಲ್ಲಿ ಮನರಂಜನೆ ಅನ್ನುವುದನ್ನು ಪಕ್ಕಕ್ಕಿಟ್ಟಿದ್ದಾರೆ.

Advertisement

ಇನ್ನು, ಸಂದೇಶ ವಿಷಯಕ್ಕೆ ಬಂದರೆ, ಈಗಿನ ಯೂತ್ಸ್ ಕಷ್ಟಕ್ಕೆ ಸಿಲುಕಿಕೊಂಡರೆ, “ಹಣ’ ಕದ್ದು ಆ ಮೂಲಕ ಲೈಫ್ಗೊಂದು ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಸಾರಿದ್ದಾರೆ. ಸುಮ್ಮನೆ ನೋಡಿಸಿಕೊಂಡು ಹೋಗುವ ಪ್ರಯತ್ನವನ್ನಾದರೂ ಮಾಡಿದ್ದಾರಾ? ಅದನ್ನೂ ಹೇಳುವುದು ಕಷ್ಟ. ಒಟ್ಟಲ್ಲಿ “ಮಸಾಲೆ’ ಇಲ್ಲದೆ ಪಾನಿಪುರಿ ಮಾಡಿಕೊಟ್ಟಿದ್ದಾರೆ! ಈ ಚಿತ್ರದಲ್ಲಿ ಹೊಸ ವಿಷಯಗಳೇನೂ ಇಲ್ಲ.

ಕಥೆಯಲ್ಲೂ ಹೊಸತನವಿಲ್ಲ. ಈಗಾಗಲೇ ಎಷ್ಟೋ ಚಿತ್ರಗಳಲ್ಲಿರುವ ಅಂಶಗಳನ್ನೇ ಬೆರೆಸಿಕೊಂಡು ಪಾನಿಪುರಿಯನ್ನು ತಿನ್ನಿಸಲು ಪ್ರಯತ್ನಿಸಿದ್ದಾರೆ. ಒಂದೇ ಮಾತಲ್ಲಿ ಹೇಳುವುದಾದರೆ, ನಿರ್ದೇಶಕರು ಮಾಡಿರುವ ಈ ಪಾನಿಪುರಿಯಲ್ಲಿ ಉಪ್ಪು, ಹುಳಿ, ಖಾರ ಎಂಥದ್ದೂ ಇಲ್ಲ ಅಂತ ಮುಲಾಜಿಲ್ಲದೆ ಹೇಳಬಹುದು. ಇಲ್ಲಿ ಸಾಕಷ್ಟು ಎಡವಟ್ಟುಗಳಿವೆ. ಹೆಸರಿಸಲು ಹೊರಟರೆ ಪಟ್ಟಿ ಉದ್ದವಾಗುತ್ತೆ.

ಹಾಗೆ ಹೇಳುವುದಾದರೆ, ಗುರುಕುಲಕ್ಕೆಂದು ಬರುವ ಆ ಹುಡುಗ, ಹುಡುಗಿಯರು ದಟ್ಟ ಕಾಡು ನಡುವೆ ಕಾಲುದಾರಿಯಲ್ಲಿ ಹೋಗಬೇಕು. ದಾರಿಹೋಕನೊಬ್ಬ, “ಸಂಜೆಯಾಗುತ್ತಿದೆ, ಈಗ ಹೊರಟರೆ ಕಾಡಲ್ಲಿ ಹುಲಿ, ಸಿಂಹಗಳ ಹಾವಳಿ’ ಅಂತ ಬೆದರಿಸುತ್ತಾನೆ. ಆದರೆ, ಆ ಮಾತು ಲೆಕ್ಕಿಸದೆ ನಾಲ್ಕು ಹೆಜ್ಜೆ ನಡೆದು ಹೋಗೋ ಅವರು ಬೆಟ್ಟದ ಮೇಲೆ ನಿಂತು ನೋಡಿದರೆ, ಅದು ಮುಂಜಾನೆಯ ದೃಶ್ಯ.

ಡೈಲಾಗ್‌ವೊಂದಿದ್ದರೆ, ದೃಶ್ಯ ಇನ್ನೊಂದು! ಇಂತಹ ಅನೇಕ ತಪ್ಪುಗಳು ಎದುರಾಗುತ್ತಲೇ ನೋಡುಗರ ತಾಳ್ಮೆ ಪರೀಕ್ಷಿಸುವಂತೆ ಮಾಡಿದ್ದಾರೆ ನಿರ್ದೇಶಕರು. ಆರಂಭದಲ್ಲಿ ಚಿತ್ರ ಆಮೆಗತಿಯಲ್ಲೇ ಸಾಗುತ್ತದೆ. ದ್ವಿತಿಯಾರ್ಧಕ್ಕು ಮುನ್ನ ಒಂದಷ್ಟು ತಿರುವು ಪಡೆದುಕೊಳ್ಳುತ್ತದೆ. ಆ ತಿರುವು ಏನು, ಎತ್ತ ಎಂಬ ಕುತೂಹಲವಿದ್ದರೆ, “ಪಾನಿಪುರಿ’ ನೋಡಿ. ಹಾಗಂತ, ಪಾನಿಪುರಿಯಲ್ಲಿ ಹೆಚ್ಚು ಮಸಾಲೆ ನಿರೀಕ್ಷಿಸುವಂತಿಲ್ಲ.

Advertisement

ಇದೊಂದು ಗೆಳೆತನ ಮತ್ತು ಥ್ರಿಲ್ಲರ್‌ ಅಂಶಗಳ ಮೇಲೆ ಮೂಡಿರುವ ಚಿತ್ರ. ಇಲ್ಲಿ ಗೆಳೆತನ ವಿಷಯ ಬಗ್ಗೆ ಮಾತಾಡುವಂತಿಲ್ಲ. ಆದರೆ, ಒಂದು ಹಂತದಲ್ಲಿ ಅವರೆಲ್ಲಾ ಸೇರಿ ಕೆಟ್ಟ ಕೆಲಸಕ್ಕೆ ನಿರ್ಧರಿಸುವುದನ್ನು ಮಾತ್ರ ಒಪ್ಪಿಕೊಳ್ಳಲಾಗುವುದಿಲ್ಲ. ಯಾಕೆಂದರೆ, ಒಂದು ಯೂತ್ಸ್ ಸ್ಟೋರಿಯಲ್ಲಿ ಒಳ್ಳೆಯ ಸಂದೇಶ ಇಟ್ಟಿದ್ದರೆ, ಬಹುಶಃ ನಿರ್ದೇಶಕರ ಹೊಸ ಪ್ರಯತ್ನ ಮೆಚ್ಚಬಹುದಿತ್ತು.

ಆದರೆ, ಕೆಟ್ಟ ಉದ್ದೇಶಕ್ಕೆ ಕೈ ಹಾಕಿ, ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ಸಂದೇಶ ರವಾನಿಸಿದ್ದಾರೆ. ವಿಕ್ಕಿ, ಅಪ್ಪು, ರಾಜ್‌ ಈ ಮೂವರು ಗೆಳೆಯರಿಗೆ ಪೂರ್ವಿ, ತನ್ವಿ, ಸೋನು ಗೆಳತಿಯರು. ಎಲ್ಲರೂ ಒಂದೇ ಕಾಲೇಜ್‌ನಲ್ಲಿ ಓದಿದವರು. ಒಂದು ಹಂತದಲ್ಲಿ ಪೂರ್ವಿ ಮತ್ತು ವಿಕ್ಕಿಗೆ ಒಂದೊಂದು ಸಮಸ್ಯೆ ಎದುರಾಗುತ್ತೆ. ಆ ಪೈಕಿ ವಿಕ್ಕಿಗೆ ಹಣದ ಅವಶ್ಯಕತೆ ಎದುರಾಗುತ್ತೆ.

ಲಕ್ಷಾಂತರ ಹಣ ಹೊಂದಿಸೋಕೆ ಅಸಾಧ್ಯ ಅಂತ ಗೊತ್ತಾದಾಗ, ಅವರೆಲ್ಲರೂ ಸೇರಿ ವಿಗ್ರಹ ಕದಿಯೋ ಬಗ್ಗೆ, ಶ್ರೀಮಂತರನ್ನು ಕಿಡ್ನಾಪ್‌ ಮಾಡಿ ಬ್ಲಾಕ್‌ವೆುಲ್‌ ಮಾಡೋ ಬಗ್ಗೆ ಯೋಚಿಸುತ್ತಾರೆ. ಕೊನೆಗೆ ಅದೆಲ್ಲಾ ಆಗದ ಕೆಲಸ ಅಂತ, ಒಂದು ಬ್ಯಾಂಕ್‌ ರಾಬರಿ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ರಾಬರಿ ಮಾಡೋಕೆ ಹೊರಡುವ ಅವರು, ಏನೆಲ್ಲಾ ಪ್ರಯೋಗ ಮಾಡ್ತಾರೆ ಮತ್ತು ಆ ರಾಬರಿಯಲ್ಲಿ ಯಶಸ್ವಿಯಾಗುತ್ತಾರಾ ಅನ್ನೋದು ಕಥೆ.

ಇಲ್ಲಿ ಒಂದಂಶವನ್ನು ಹೇಳುವುದಾದರೆ, ರಾಬರಿ ಮಾಡುವ ಎಪಿಸೋಡ್‌ ಮಾತ್ರ ತುಂಬಾನೇ ಅಚ್ಚುಕಟ್ಟಾಗಿ ತೆರೆಯ ಮೇಲೆ ಮೂಡಿಸಲಾಗಿದೆ. ಆದರೆ, ರಾಬರಿ ಐಡಿಯಾಗಳೆಲ್ಲವೂ ಅದೆಷ್ಟೋ ಹಾಲಿವುಡ್‌, ಬಾಲಿವುಡ್‌ ಚಿತ್ರಗಳಲ್ಲಿ ಬಂದಾಗಿದೆ. ಅದೇ ಕಾನ್ಸೆಪ್ಟ್ ತಂದು ಇಲ್ಲಿ ರಾಬರಿ ಮಾಡಲಾಗಿದೆಯಷ್ಟೇ. ಆದರೆ, ಇಲ್ಲಿ ಅವರೆಲ್ಲ ರಾಬರಿ ಮಾಡಿ, ಕೊನೆಗೆ ಏನಾಗುತ್ತಾರೆ ಎಂಬುದನ್ನು ಅಷ್ಟೇ ರೋಚಕವಾಗಿ ಮಾಡಿದ್ದಾರೆ.

ಅದು ಹೇಗೆಂಬುದು ಸಸ್ಪೆನ್ಸ್‌. ಅದನ್ನೂ ಹೇಳಿಬಿಟ್ಟರೆ, ಪಾನಿಪುರಿಯಲ್ಲಿರುವ ಒಂದಷ್ಟು ರುಚಿಯೂ ಸಿಗದಂತಾಗುತ್ತೆ. ವೈಭವ್‌ ಹಿಂದಿನ ಚಿತ್ರಕ್ಕೆ ಹೋಲಿಸಿದರೆ ನಟನೆಯಲ್ಲಿ ಪರವಾಗಿಲ್ಲ. ಉಳಿದಂತೆ ಜಗದೀಶ್‌, ಸಂಜಯ್‌ ಕೂಡ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನು, ಅಕ್ಷತಾ, ದರ್ಶಿನಿ ಕಾಡಿನಲ್ಲಿ ಚೆನ್ನಾಗಿ ಓಡಿರುವುದೇ ಸಾಧನೆ! ಪೆಟ್ರೋಲ್‌ ಪ್ರಸನ್ನ ಇಲ್ಲಿ ಮೊದಲ ಸಲ ಮಾತೇ ಇಲ್ಲದೆ ನಟಿಸಿರುವುದೇ ಹೆಚ್ಚುಗಾರಿಕೆ.

ಅದೇ ಇಲ್ಲಿ ಹೈಲೈಟ್‌. ರೋಬೋ ಗಣೇಶ್‌ಗೂ ಅದೇ ಪಾತ್ರ ಸಿಕ್ಕಿದೆ. ಲೂಸ್‌ಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ಆ ಕ್ಷಣದ ಪ್ಲಸ್‌ ಎನ್ನಬಹುದಷ್ಟೇ. ಸಂತೋಷ್‌ ಬಾಗಲಕೋಟೆ ಸಂಗೀತದಲ್ಲಿ ಒಂದು ಹಾಡು ಪರವಾಗಿಲ್ಲ. ಕೆಲವೆಡೆ ಹಿನ್ನೆಲೆ ಸಂಗೀತ ಕಂಪೆನಿ ನಾಟಕವನ್ನು ನೆನಪಿಸುತ್ತದೆ. ಆನಂದ ದಿಂಡವಾರ ಛಾಯಾಗ್ರಹಣ ಚಿತ್ರಕ್ಕೆ ಪೂರಕ.

ಚಿತ್ರ: ಪಾನಿಪುರಿ
ನಿರ್ದೇಶನ: ನವೀನ್‌ ಕುಮಾರ್‌
ನಿರ್ಮಾಣ: ಪುಟ್ಟರಾಜು
ತಾರಾಗಣ: ವೈಭವ್‌, ಜಗದೀಶ್‌, ಸಂಜಯ್‌, ಅಕ್ಷತಾ, ದರ್ಶಿನಿ, ಅನು, ಪೆಟ್ರೋಲ್‌ ಪ್ರಸನ್ನ, ರೋಬೋ ಗಣೇಶ್‌ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next