ಹೊಸದಿಲ್ಲಿ: ಕಡಿಮೆ ವೆಚ್ಚದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ಸ್ಪೈಸ್ ಜೆಟ್ ಮೂರನೇ ತ್ತೈಮಾಸಿಕದಲ್ಲಿ ಭಾರೀ ನಷ್ಟವನ್ನನುಭವಿಸಿದೆ. ಅದು 462.6 ಕೋಟಿ ರೂ. ಕಳೆದುಕೊಂಡಿದೆ ಎಂದು ವರದಿ ಹೇಳಿದೆ.
ಬೋಯಿಂಗ್ 737 ಮ್ಯಾಕ್ಸ್ ಯೋಜನೆ ಖರ್ಚುವೆಚ್ಚಗಳೇ ನಷ್ಟಕ್ಕೆ ಕಾರಣವಾಗಿದ್ದು, ವರ್ಷದ ಹಿಂದೆ ಇದೇ ಅವಧಿಯಲ್ಲಿ ಸಂಸ್ಥೆ 389.4 ಕೋಟಿ ರೂ. ನಷ್ಟ ಅನುಭವಿಸಿತ್ತು ಎಂದು ಕಂಪೆನಿ ಪ್ರಕಟನೆ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ತೈಮಾಸಿಕದಲ್ಲಿ ನಿರ್ವಹಣಾ ಆದಾಯದ ಮಟ್ಟ 2,845.3 ಕೋಟಿ ರೂ. ಗೆ ಏರಿದ್ದು, ಕಳೆದ ವರ್ಷ 1,874.8 ಕೋಟಿ ರೂ. ನಿರ್ವಹಣಾ ಆದಾಯ ದಾಖಲಾಗಿತ್ತು.
ಬೋಯಿಂಗ್ 737 ಮ್ಯಾಕ್ಸ್ ಯೋಜನೆಯಿಂದಾಗಿ ಕಂಪನಿಗೆ ಹಲವು ರೀತಿಯಲ್ಲಿ ನಷ್ಟವಾಗಿದ್ದು, ತಯಾರಕರಿಂದ ಮರುಪಾವತಿ ಮತ್ತು ಹಕ್ಕುಗಳನ್ನು ಹಿಂಪಡೆಯುವುದಾಗಿ ಕಂಪನಿ ಪ್ರಕಟಣೆ ತಿಳಿಸಿದೆ.
ಕಳೆದ ಕೆಲವು ತಿಂಗಳಿನಿಂದ ಉದ್ಯಮದಲ್ಲಿ ಮಂದಗತಿ ತೋರಿ ಬರುತ್ತಿದ್ದು, ಬೆಳವಣಿಗೆಯ ದರವೂ ಕುಸಿಯುತ್ತಿದೆ. ಈ ಹಿನ್ನಲೆಯಲ್ಲಿ ಕಂಪೆನಿ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ನಷ್ಟಕ್ಕೆ ಕಾರಣವಾಗಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.