ಕೋಲ್ಕತ : ಇಲ್ಲಿನ ಡಂ ಡಂ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಂಗಳವಾರ ರಾತ್ರಿ ಹೈಡ್ರಾಲಿಕ್ ಒತ್ತಡದಿಂದಾಗಿ ಸ್ಪೈಸ್ ಜೆಟ್ ವಿಮಾನದೊಳಗೆ ಸೆಳೆಯಲ್ಪಟ್ಟ ವಿಮಾನ ನಿರ್ವಹಣೆ ತಂತ್ರಜ್ಞ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಎಂದಿನ ಹಾಗೆ ವಿಮಾನ ನಿರ್ವಹಣ ವಿಮಾನ ನಿರ್ವಹಣ ತಂತ್ರಜ್ಞ, ಸ್ಪೈಸ್ ಜೆಟ್ ಎಟಿಆರ್ ವಿಮಾನದ ತಪಾಸಣೆ ನಡೆಸುತ್ತಿದ್ದಾಗ ಆತ ಹೈಡ್ರಾಲಿಕ್ ಒತ್ತಡದಿಂದ ವಿಮಾನದೊಳಗೆ ಸೆಳೆಯಲ್ಪಟ್ಟು ಅಸು ನೀಗಿದ ಎಂದು ವರದಿಗಳು ತಿಳಿಸಿವೆ.
ವಿಮಾನದ ಕೆಳ ಹೊಟ್ಟೆ ಭಾಗದಲ್ಲಿನ ಹೈಡ್ರಾಲಿಕ್ ಫ್ಲಾಪ್ ಯಾವುದೇ ಮುನ್ಸೂಚನೆ ಇಲ್ಲದೆ ತನ್ನಿಂತಾನೇ ತೆರೆದುಕೊಂಡಾಗ ತಂತ್ರಜ್ಞನ ಕೊರಳು ಅದರೊಳಗೆ ಸಿಲುಕಿಕೊಂಡಿತು. ಆರಂಭಿಕ ತನಿಖೆಯ ಪ್ರಕಾರ ತಂತ್ರಜ್ಞನು ಉಸಿರುಗಟ್ಟಿ ಸತ್ತಿರುವುದು ಗೊತ್ತಾಗಿದೆ.
ಘಟನೆ ನಡೆದೊಡನೆಯೇ ಧಾವಿಸಿ ಬಂದ ತುರ್ತು ನಿರ್ವಹಣ ಸಿಬಂದಿಗಳು ಹರಸಾಹಸ ಪಟ್ಟು ಮೃತ ತಂತ್ರಜ್ಞನ ದೇಹವನ್ನು ಹೊರ ತೆಗೆಯುವಲ್ಲಿ ಸಫಲರಾದರು ಎಂದು ವರದಿಗಳು ತಿಳಿಸಿವೆ.
ಹೈಡ್ರಾಲಿಕ್ ಒತ್ತಡ ಹೇಗೆ ಕ್ರಿಯಾಶೀಲವಾಯಿತು; ತಂತ್ರಜ್ಞನು ಹೇಗೆ ವಿಮಾನದೊಳಗೆ ಸೆಳೆಯಲ್ಪಟ್ಟ ಮತ್ತು ಆತನ ಸಾವು ಹೇಗೆ ಸಂಭವಿಸಿತು ಎಂಬುದನ್ನು ತಿಳಿಯಲು ಪೊಲೀಸರೀಗ ತನಿಖೆ ಆರಂಭಿಸಿದ್ದಾರೆ.