Advertisement
ಮಕ್ಕಳು ಹಣ್ಣು ತಿನ್ನುತ್ತಿಲ್ಲ, ಅವರಿಗೆ ಕರಿದ ತಿಂಡಿ ಅಚ್ಚುಮೆಚ್ಚು. ಪ್ರವಾಸ ಹೊರಟಾಗಲಂತೂ ವಿವಿಧ ಕಂಪನಿಯ ಚಿಪ್ಸ್ ಮೆಲ್ಲುತ್ತ ಅವರ ಪಯಣ ಸಾಗುತ್ತದೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡ ವ್ಯಾಪಾರಿಗಳು ಕಣ್ಣಿಗೆ ರಾಚುವಂತೆ ಅಂಗಡಿ ಮುಂಭಾಗದಲ್ಲಿ ಇವನ್ನು ಪ್ರದರ್ಶಿಸಿ ಮಾರಾಟಕ್ಕೆ ಪ್ರಯತ್ನಿಸುತ್ತಾರೆ. ಭೇಟಿ ನೀಡುವ ಪ್ರದೇಶದ ಬೆಳೆ ಏನು? ಇಲ್ಲಿನ ತಿಂಡಿ ವಿಶೇಷವೇನು? ತೋಟಗಳಲ್ಲಿನ ಸಸ್ಯಗಳು ಯಾವುವು? ಜನಜೀವನ ಹೇಗಿದೆ? ಈ ಪ್ರಶ್ನೆಗಳು ಯಾರಲ್ಲೂ ಹುಟ್ಟುವುದಿಲ್ಲ. ಕಾಡು ನೋಡದೇ ಜಲಪಾತಕ್ಕೆ ನುಗ್ಗುತ್ತೇವೆ, ಇತಿಹಾಸ ಅರಿಯದೇ ಪುರಾತನ ದೇಗುಲ ನೋಡುತ್ತೇವೆ. ಬೆಳೆ- ಬದುಕಿನ ಪರಿಚಯವಿಲ್ಲದೆ ಬಕಾಸುರರಾಗುತ್ತೇವೆ. ಜೋಗ ಜಲಪಾತ, ಬೇಲೂರು, ಮೈಸೂರು, ಹಂಪಿ, ಬಾದಾಮಿ ಎಲ್ಲಿಗೆ ಹೋದರೂ ಕುರುಕಲು ತಿಂಡಿಯನ್ನೇ ಹುಡುಕಿಕೊಂಡು ತಿನ್ನುತ್ತೇವೆ. ಯಾವ ಮೂಲೆಗೆ ಹೋದರೂ ಮಸಾಲೆ ದೋಸೆ, ಇಡ್ಲಿ, ಪಾನಿಪೂರಿ, ಗೋಬಿ ಮಂಚೂರಿಗಳ ಸಾಮ್ರಾಜ್ಯ ಕಾಣಿಸುತ್ತದೆ. ನಿಧಾನವಾಗಿ ಕಾಲ ಬದಲಾಗುತ್ತಿದೆ.
ಆರೋಗ್ಯ, ಆಹಾರದ ಕುರಿತ ಚರ್ಚೆ ಜೋರಾಗಿವೆ. ನಕಲಿ ತುಪ್ಪ, ಬೆಣ್ಣೆ, ಹಾಲು, ರಾಸಾಯನಿಕ ಸಿಂಪಡಿಸಿದ ಹಣ್ಣು ತರಕಾರಿ ಭಯ ಹುಟ್ಟಿಸಿದೆ. ತಾಜಾ ಹಣ್ಣು ತಿನ್ನುವ ಹಂಬಲ, ತೋಟ ರೂಪಿಸುವ ಕನಸುಗಳು ಶುರುವಾಗಿವೆ. ಪ್ರವಾಸೋದ್ಯಮವನ್ನು ಕೃಷಿಕಪರವಾಗಿಸುವ ಯತ್ನಗಳು ನಡೆದಿವೆ. ಪ್ರವಾಸೋದ್ಯಮ ನಿಸರ್ಗ ತಾಣ, ದೇಗುಲ ವೀಕ್ಷಣೆಗೆ ಸೀಮಿತವಾಗಿಲ್ಲ. ಕೃಷಿ ಪರಿಸರ ಜನರನ್ನು ಸೆಳೆಯುತ್ತಿದೆ. ತೋಟ ವೀಕ್ಷಣೆ, ಭತ್ತದ ಗದ್ದೆಯಲ್ಲಿ ನಡಿಗೆ, ಹಳ್ಳಿ ಊಟ, ಜನಪದ ಆಟ ಹೀಗೆ ಹಲವು ರೀತಿಗಳಲ್ಲಿ ಬೆಳೆಯುತ್ತಿದೆ. ಮಕ್ಕಳು ಮರವೇರಿ ಹಣ್ಣು ಕೊಯ್ದ ಚಿತ್ರಗಳು ಫೇಸ್‌ಬುಕ್, ವಾಟ್ಸಾಪ್‌ಗ್ಳಲ್ಲಿ ಹರಿದಾಡುತ್ತವೆ. ಹಲಸು, ಮಾವು, ಬಾಳೆ, ಚಿಕ್ಕು, ಅನಾನಸ್, ನೇರಳೆ ಮುಂತಾದ ಫಲಗಳ ಮೌಲ್ಯವರ್ಧಿತ ಉತ್ಪನ್ನ ತಿಂದು ಬಲ್ಲವರು, ಮರ ನೋಡಲು ಇಚ್ಛಿಸಿದ್ದಾರೆ. ತೆಂಗಿನ ಮರ ಏರುವುದು, ಮಾವಿನ ಮರದಲ್ಲಿ ಆಡುವುದು, ಪೇರಲೆ ಕೊಯ್ಲುಗಳಲ್ಲಿ ಖುಷಿ ಪಡುತ್ತಿದ್ದಾರೆ. ಸಿನೆಮಾ, ಪಾರ್ಕ್, ಐಸ್‌ಕ್ರೀಂ ಪಾರ್ಲರ್, ಹೋಟೆಲ್ ಸುತ್ತಾಟದ ಏಕತಾನತೆಯಿಂದ ತಪ್ಪಿಸಿಕೊಂಡು ಗೌಜು ಗದ್ದಲವಿಲ್ಲದ ಹಳ್ಳಿಯಲ್ಲಿ ಸಮಯ ಕಳೆಯುವ ಹುಚ್ಚು ಮೊಳೆತಿದೆ. ವಿಷ ಆಹಾರ, ಮಾಲಿನ್ಯದ ಒತ್ತಡದಿಂದ ಆರೋಗ್ಯ ರಕ್ಷಿಸಲು ಹಸಿರಿನ ಹಾದಿ ಹುಡುಕಿಕೊಳ್ಳುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಒಂದೆರಡು ದಿನ ಉತ್ತಮ ವಾತಾವರಣ, ಒಳ್ಳೆಯ ಊಟ, ತೋಟದಲ್ಲಿ ಚಟುವಟಿಕೆಗಳು… ಇವನ್ನೆಲ್ಲಾ ಹಂಬಲಿಸಿದವರಿಗೆ ಕಾಡು, ತೋಟ ಉತ್ತಮ ಸ್ಥಳ. ನೂರಾರು ಹಣ್ಣಿನ ಗಿಡ ಜಾತಿ, ಬಣ್ಣ ಬಣ್ಣದ ಹೂಗಳು, ಔಷಧ ಸಸ್ಯ, ಚಿಟ್ಟೆ, ಪಕ್ಷಿ ಸಂಕುಲ ವೀಕ್ಷಣೆಯಲ್ಲಿ ಖುಷಿ ಪಡುವವರಿಗೆ ಅವಕಾಶಗಳು ತೆರೆದಿವೆ. ಹೊಸ ದಾರಿಯಲ್ಲಿ ಕೃಷಿಯ ಲಾಭ ಕಾಣಿಸಿದೆ.
Related Articles
ನಮ್ಮ ನೆರೆಯ ರಾಜ್ಯ ಗೋವಾದ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ದೇಶ ವಿದೇಶದ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಹೋಟೆಲ್, ಹೋಂ ಸ್ಟೇಗಳಲ್ಲಿ ಉಳಿದು ಬೀಚ್ ಸುತ್ತಾಡುತ್ತ ದಿನ ಕಳೆಯುತ್ತಿದ್ದವರು ಈಗ, ಅಲ್ಲಿನ ಸಸ್ಯ ವೈವಿಧ್ಯದ ತೋಟಗಳಿಗೆ ಮನಸೋಲುತ್ತಿದ್ದಾರೆ. ಅಲ್ಲಿನ ಕೃಷಿಕರು ಕರಾವಳಿ ತೀರಕ್ಕೆ ಬರುವ ಪ್ರವಾಸಿಗರನ್ನು “ಸ್ಪೈಸ್ ಟೂರಿಸಮ್’ ಮೂಲಕ ಒಳನಾಡಿನತ್ತ ಸೆಳೆಯುತ್ತಿದ್ದಾರೆ. ಅಡಕೆ, ತೆಂಗು, ಬಾಳೆ, ಕಾಳುಮೆಣಸು, ಜಾಯಿಕಾಯಿ, ಲವಂಗ, ದಾಲಿcನ್ನಿ, ಹಲಸು, ಕೋಕಂ ಮುಂತಾದ ಸಸ್ಯ ವೀಕ್ಷಣೆಯ ಅವಕಾಶ ಕಲ್ಪಿಸುವ ಪ್ರವಾಸೋದ್ಯಮ ಅಲ್ಲಿ ಪ್ರಾರಂಭವಾಗಿದೆ. ಒಂದೆರಡು ತಾಸಿನ ಸೀಮಿತ ಸಮಯದಲ್ಲಿ ದೇಗುಲ ವೀಕ್ಷಿಸಿದಂತೆ, ತೋಟಗಳಿಗೆ ಭೇಟಿ ನೀಡಿ ಕೃಷಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.
Advertisement
ಗಿಡಮರಗಳನ್ನು ಗೊತ್ತು ಮಾಡಿಸಬೇಕುಒಂದು ತೋಟದ ವೀಕ್ಷಣೆಗೆ ಹೋದಾಗ ಹೆಚ್ಚು ಹೆಚ್ಚು ಸಸ್ಯ ನೋಡಿದ್ದು, ಹಣ್ಣು ತಿಂದಿದ್ದು ಯಾವತ್ತೂ ನೆನಪಾಗಿ ಕಾಡುತ್ತದೆ. ಕಾಡು ತೋಟದ ಪರಿಕಲ್ಪನೆಯಲ್ಲಿ ಹುಲ್ಲು, ಪೊದೆ, ಬಳ್ಳಿ, ಗಿಡ, ಮರಗಳನ್ನು ತೋಟದಲ್ಲಿ ಬೆಳೆಸುವಾಗ ಸಸ್ಯ ವೈವಿಧ್ಯ ಪೋಷಣೆ ಮೊದಲ ಆದ್ಯತೆಯಾಗಿರುವುದರಿಂದ ಪ್ರವಾಸಿಗರನ್ನು ಸೆಳೆಯಲು ಬೇಕಾದುದನ್ನು ಮಾಡುವ ಅನುಕೂಲತೆ ಇರುತ್ತದೆ. ಸಸ್ಯ ಸಂರಕ್ಷಣೆ, ಕೃಷಿ ಮತ್ತಿತರ ವಿಷಯಗಳ ಕುರಿತು ಕೃಷಿಕರ ಜೊತೆ ಮಾಹಿತಿ ಹಂಚಿಕೊಳ್ಳುವ ಆಸಕ್ತಿ ಇದರಿಂದ ಹೆಚ್ಚುತ್ತದೆ. ಹಣ್ಣು ತಿನ್ನುವವರಿಗೆ ಮೂಲ ಮರ, ತಳಿಯ ಪರಿಚಯವಿರುವುದಿಲ್ಲ. ಸದಾ ತೋಟದಲ್ಲಿರುವ ನಾವು ಸಸ್ಯಗಳ ಕುರಿತು ಹೆಚ್ಚು ಹೆಚ್ಚು ಮಾಹಿತಿ ಸಂಗ್ರಹಿಸಿ ವಿವರಿಸಲು ಆರಂಭಿಸಿದರೆ ಜ್ಞಾನ ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ನಿಸರ್ಗ ಚಿಕಿತ್ಸೆ ಮಹತ್ವ ಪಡೆಯುತ್ತಿದೆ. ಚಿಕಿತ್ಸೆಗಳು ಕೃಷಿಕ ಪರವಾಗುತ್ತಿದೆ. ಉತ್ತಮ ಹಣ್ಣು, ಸೊಪ್ಪು ತಿನ್ನಲು ಈ ಚಿಕಿತ್ಸಾಲಯಗಳಲ್ಲಿ ಸೂಚಿಸಲಾಗುತ್ತಿದೆ. ವೈದ್ಯರ ಮಾತುಗಳನ್ನು ಆಲಿಸಿದವರು ಪ್ರವಾಸ ಸಂದರ್ಭದಲ್ಲಿ ಸಸ್ಯ ನೋಡಿ ಸಂಭ್ರಮಿಸುತ್ತಾರೆ. ಪಪ್ಪಾಯ, ಪೇರಲೆ, ಬಟರ್ ಫೂÅಟ್, ಕರಿಬಾಳೆ, ನುಗ್ಗೆ, ನೆಲ್ಲಿ, ನೇರಳೆ, ಬೇಲ, ಎಕನಾಯಕ, ಒಂದೆಲಗ, ಲಕ್ಷ್ಮಣ ಫಲಗಳ ಬಗ್ಗೆ ಜನರ ಕುತೂಹಲ ಅಚ್ಚರಿ ಹುಟ್ಟಿಸುತ್ತಿದೆ. ಕಾಡು ತೋಟದಲ್ಲಿ ಸುತ್ತಲಿನ ಜೀವ ಸಂಕುಲದ ಜೊತೆಗಿನ ಸಹಬಾಳ್ವೆಯ ತತ್ವದಲ್ಲಿ ನಿಂತಿದೆ. ಪ್ರವಾಸೋದ್ಯಮ ಮೂಲಕ ಬೇರೆ ಬೇರೆ ಪ್ರದೇಶದ ಜನರ ಭೇಟಿ ತೋಟದ ಸಂಪರ್ಕಗಳನ್ನು ವಿಸ್ತರಿಸುತ್ತದೆ. ಪ್ರವಾಸಿ ಪರಿಚಯವಾದ ಬಳಿಕ ಸ್ನೇಹ ಸಂಬಂಧಗಳು ಕೃಷಿ, ಮಾರುಕಟ್ಟೆಗೂ ಅನುಕೂಲವಾಗುತ್ತದೆ. ಫಾರ್ಮ್ ವಾಕ್ ಉಪಯೋಗ
ತೋಟದಲ್ಲಿ ಸಸ್ಯ ಪರಿಚಯ, ಔಷಧೀಯ ಸಸ್ಯಗಳ ಮಹತ್ವ, ವಾಣಿಜ್ಯ ವಿಶೇಷತೆಗಳನ್ನು ತಿಳಿದುಕೊಳ್ಳುತ್ತಾ ಕಾಲ್ನಡಿಗೆಯ ಸುತ್ತಾಟ ಸಾಗುತ್ತದೆ. ಕೋಕಂ ಜ್ಯೂಸ್, ಹರ್ಬಲ್ ಟೀ, ಕಬ್ಬಿನ ಹಾಲು, ಜೇನು ಸೇವಿಸುತ್ತ ತೋಟದ ಹಣ್ಣು, ಸಾಂಬಾರ ವಸ್ತುಗಳ ಪರಿಮಳ ಆಸ್ವಾದಿಸುತ್ತ ಪ್ರವಾಸಿಗರು ಸಂತಸಪಡುತ್ತಾರೆ. ವೀಕ್ಷಣೆಗೆ ಒಬ್ಬರಿಗೆ 50-100 ರುಪಾಯಿ ನಿಗದಿ ಪಡಿಸಿದರೂ ಪ್ರವೇಶ ಶುಲ್ಕದಿಂದ ದಿನಕ್ಕೆ ಸಾವಿರಾರು ರೂಪಾಯಿ ಆದಾಯ ಸಂಪಾದಿಸಬಹುದು. ಜೊತೆಗೆ ತೋಟದ ಮೌಲ್ಯವರ್ಧಿತ ಉತ್ಪನ್ನ, ಸಸ್ಯ ಮಾರಾಟಕ್ಕೂ ಪ್ರವಾಸೋದ್ಯಮ ಅವಕಾಶ ನೀಡಿದೆ. ಬೆಲೆ ಕುಸಿತ, ಕೂಲಿ ಬರ, ಕೃಷಿಯ ಹತ್ತು ಹಲವು ಸಮಸ್ಯೆಗಳ ಮಧ್ಯೆ ಪ್ರವಾಸೋದ್ಯಮ ಹೊಸ ಸಾಧ್ಯತೆಗಳನ್ನು ತೆರೆದಿವೆ. ಮೆಣಸಿನಕಾಯಿ ತಿನ್ನಿಸಿದ್ದು!
ನಿತ್ಯ ನೋಡುವ ಸಸ್ಯಗಳಲ್ಲಿ ಹೊಸ ಹೊಸ ವಿಶೇಷಗಳು ಕಾಣಿಸುತ್ತವೆ. ಒಮ್ಮೆ ಕಾಡು ಸುತ್ತುವಾಗ ಮಿತ್ರರೊಬ್ಬರಿಗೆ ಮರದ ಎಲೆಯೊಂದನ್ನು ತಿನ್ನಿಸಿದೆ. ಮನೆಗೆ ಮರಳಿದಾಗ ಹಸಿ ಮೆಣಸಿನ ಕಾಯಿ ನೀಡಿ ತಿನ್ನಲು ಸೂಚಿಸಿದೆ. ಮೆಣಸು ನೋಡಿ ಬೆವತು, ತಿನ್ನಲು ನಿರಾಕರಿಸಿದರು. ಅವರಿಗೆ ಧೈರ್ಯ ಬರಲೆಂದು ನಾನು ತಿಂದು ತೋರಿಸಿದೆ. ನಂತರ ಹೆದರುತ್ತಲೇ ಮೆಣಸು ಬಾಯಿಗಿಟ್ಟವರು ಸೌತೆಕಾಯಿ ತಿಂದಂತೆ ಮೆಣಸು ತಿಂದರು. ಮೊದಲು ತಿನ್ನಿಸಿದ ಕಾಡಿನ ಎಲೆಯಿಂದ ಮೆಣಸಿನ ತೀವ್ರತೆ ಮಾಯವಾಗಿತ್ತು! ಇಂಥ ಅನುಭವಗಳನ್ನು ಪ್ರವಾಸಿಗರು ಯಾವತ್ತೂ ಮರೆಯುವುದಿಲ್ಲ. ಮುಂದಿನ ಭಾಗ
ಕಾಡು ತೋಟ- 25. ಗಿಡಗಳ ಹುಚ್ಚು ಹಾಗೂ ತೋಟದ ಕನಸು – ಶಿವಾನಂದ ಕಳವೆ