ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ 10 ಜನಪಥ್ ರಸ್ತೆ ನಿವಾಸದ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ವಿಶೇಷ ರಕ್ಷಣಾ ಸಮೂಹದ ಕಮಾಂಡೋ ರಾಕೇಶ್ ಕುಮಾರ್ ನಾಪತ್ತೆಯಾಗಿರುವುದು ಭದ್ರತಾ ದಳಕ್ಕೆ ತಲೆನೋವು ಉಂಟುಮಾಡಿದೆ.
ಜನಸತ್ತಾ ಡಾಟ್ ಕಾಮ್ ಮಾಡಿರುವ ವರದಿಯ ಪ್ರಕಾರ ರಾಕೇಶ್ ಕುಮಾರ್ ಕಳೆದ ಸೆ.3ರಿಂದಲೇ ನಾಪತ್ತೆಯಾಗಿದ್ದಾರೆ. ತುಘಲಕ್ ರೋಡ್ ಪೊಲೀಸರ ತಂಡ ಅವರಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದೆ. ಆದರೆ ಈ ತನಕ ಅವರ ಬಗ್ಗೆ ಯಾವುದೇ ಸುಳಿವು ಲಭಿಸಿಲ್ಲ.
ಎಸ್‌ಪಿಜಿ ಕಮಾಂಡೋ ರಾಕೇಶ್ ಕುಮಾರ್ ನಾಪತ್ತೆಯಾದ ದಿನ ಆತ ಕರ್ತವ್ಯದಲ್ಲಿ ಇರಲಿಲ್ಲ. 31ರ ಹರೆಯದ ರಾಕೇಶ್ ಕುಮಾರ್ ದಿಲ್ಲಿಯ ಸೆಕ್ಟರ್ 8 ದ್ವಾರಕಾ ನಿವಾಸಿಯಾಗಿದ್ದಾರೆ. ಬಾಡಿಗೆ ಮನೆಯೊಂದರಲ್ಲಿ ಅವರು ಕುಟುಂಬದ ಜತೆ ವಾಸವಾಗಿದ್ದಾರೆ.
ಸೆ.1ರಂದು ರಾಕೇಶ್ ಕುಮಾರ್ ಕರ್ತವ್ಯಕ್ಕೆ ಹಾಜರಾಗಿದ್ದರು ಮತ್ತು ಸೋನಿಯಾ ಗಾಂಧಿ ನಿವಾಸದಲ್ಲಿ ಭದ್ರತೆಗೆ ನಿಯುಕ್ತರಾಗಿದ್ದ ತನ್ನ ಸಹೋದ್ಯೋಗಿಗಳನ್ನು ಭೇಟಿಯಾಗಿದ್ದರು. ಅಂದು ಬೆಳಗ್ಗೆ 11 ಗಂಟೆಗೆ ಅಲ್ಲಿಂದ ನಿರ್ಗಮಿಸಿದ ಅವರು ತಮ್ಮೊಂದಿಗೆ ಸೇವಾ ರಿವಾಲ್ವರ್ ಒಯ್ದಿರಲಿಲ್ಲ.
ನಾಪತ್ತೆಯಾಗಿರುವ ರಾಕೇಶ್ ಕುಮಾರ್ ತಮ್ಮ ಮೊಬೈಲ್ ಫೋನನ್ನು ಕೂಡ ತಮ್ಮ ಜತೆಗೆ ಒಯ್ದಿಲ್ಲ; ಹಾಗಾಗಿ ಅವರನ್ನು ಸಂಪರ್ಕಿಸುವುದು ಸಾಧ್ಯವಾಗಿಲ್ಲ.