ಲೆಕ್ಕವಿಲ್ಲದಷ್ಟು ಕಂಡ ಕನಸಿಗೆ ರೆಕ್ಕೆ ನೀಡುವ ದಿನ ಬರಬಹುದೆಂಬ ಹೆಬ್ಬಯಕೆ. ನಿನ್ನ ಮುಗುಳುನಗು, ಗುಳಿಕೆನ್ನೆಯ ಮುಖ ನೋಡಲು ಸದಾಕಾಯುತ್ತಿರುವೆ ಹುಡುಗಾ…ಬರುವೆಯಾ ಮರೆಯದೇ?
ನಿನ್ನ ಕರೆಗಾಗಿ ಕಾದ ರಾತ್ರಿಗಳಿಗೆ ಲೆಕ್ಕವೇ ಇಲ್ಲ, ನಿನ್ನ ನೆನಪಿಗೆ ಪೂರ್ಣವಿರಾಮವಿಟ್ಟು ಬಿಡೋಣ ಎಂದರೆ ಅದಕ್ಕೂ ಮನಸ್ಸು ಒಪ್ಪುತ್ತಿಲ್ಲ. ನಿನ್ನ ಪಾಲಿಗೆ ನಾನು ಮುಗಿದ ಅಧ್ಯಾಯವಷ್ಟೇ. ಆದರೆ, ನನಗಿನ್ನೂ ನೀನು ವಸಂತ ಮಾಸದ ಚಿಗುರಿನಂತೆ ಸದಾಕಾಲ ಹಸಿರಾಗಿ, ನವಿರು ಗೊಳಿಸುವ ಸುಂದರ ಕನಸೇ ಆಗಿದ್ದೀಯ. ಅಂದು ನೀನಾಡಿದ ಮಾತುಗಳು ಇಂದು ಜೀವ ಕಳೆದು ಕೊಂಡಿವೆ. ನೀನೇ ಪ್ರಪಂಚವೆಂಬ ಮಾತು ನಶ್ವರಗೊಂಡು ಕೇವಲ ಪ್ರಶ್ನೆಯಾಗಿ ಉಳಿದಿದೆ.
ಪರೀಕ್ಷೆಯ ಗಡಿಬಿಡಿಯಲ್ಲಿದ್ದ ನನಗೆ, ಸೋಶಿಯಲ್ ಮೀಡಿಯಾದೆಡೆಗೆ ಗಮನವಿರಲಿಲ್ಲ. ಒಂದು ತಿಂಗಳ ನಂತರ ತೆಗೆದು ನೋಡಿದಾಗ ನಿನ್ನ ಸಂದೇಶವಿತ್ತು. ಅಪರಿಚಿತರೊಂದಿಗೆ ಮಾತು ಅನುಚಿತವಲ್ಲವೆಂದು, ಅದರಲ್ಲೂ ಸೋಶಿಯಲ್ ಮೀಡಿಯಾಗಳ ಬಗ್ಗೆ ಕೊಂಚ ಆತಂಕವಿದ್ದ ನನಗೆ, ನಿನ್ನ ಸಂದೇಶಕ್ಕೆ ಮರು ಉತ್ತರಿಸಬೇಕೆನಿಸಲಿಲ್ಲ.
ಎರಡು ದಿನಗಳ ನಂತರ ಮತ್ತೆ ಬಂದ ನಿನ್ನ ಸಂದೇಶ,ಯಾರಿರಬಹುದು ಎಂಬ ಆ ಕುತೂಹಲವೇ ಎಡೆಮಾಡಿಕೊಟ್ಟಿತು. ಕುತೂಹಲ ಸಂದೇಶವಾಗಿ ರವಾನೆಯಾಯಿತು ಪರಿಚಯವಾದ ಹೊಸತರಲ್ಲಿ ನಿನ್ನೆಡೆಗೆ ಅಷ್ಟು ಗಮನಹರಿಸದ ನಾನು, ದಿನಕಳೆದಂತೆ ನಿನಗೆ ಮನಸೋತಿದ್ದ. ನಿನ್ನ ನಡುವಳಿಕೆ, ನಾನಂದುಕೊಂಡ ಕನಸಿನ ಹುಡಗನನ್ನು ಹೋಲುವಂತಿತ್ತು. ಅದೇ ಕಾರಣವಿರಬಹುದು: ಪರಿಚಯ ಸ್ನೇಹವಾಗಲು, ಸ್ನೇಹ ಪ್ರೀತಿಯಾಗಲು ಹೆಚ್ಚು ಸಮಯ ಹಿಡಿಯಲಿಲ್ಲ.
ಪ್ರತಿದಿನ ಒಂದೆರಡು ಸಂದೇಶಗಳಲ್ಲಿ ಮುಗಿಯುತ್ತಿದ್ದ ಮಾತು ಆ ನಂತರ ಬೆಳೆಯುತ್ತಾ ಹೋಯಿತು. ಕಾಲಕ್ರಮೇಣ ದಿನವಿಡೀ ಸಂದೇಶಗಳೇ ಹರಿದಾಡುವಂತಾಯಿತು. “ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತೇ ಕುರುಡು’ಎನ್ನುವ ಮಾತಿಗೆ ನಾವೇನೂ ಹೊರತಾಗಿರಲಿಲ್ಲ. ಅದೆಷ್ಟೋ ಸನ್ನಿವೇಷಗಳಲ್ಲಿ ನೀನು ನನ್ನ ಪರವಾಗಿ ನಿಂತು ಸಮಾಧಾನಗೊಳಿಸುವಾಗ ನಾನೆಂದುಕೊಂಡಿದ್ದೆ “ನನ್ನಷ್ಟು ಪುಣ್ಯವಂತೆ ಇಲ್ಲ ‘.ನಿನಗೂ ಜೀವನದಲ್ಲಿ ಏನಾದರು ಸಾಧಿಸಬೇಕೇಂಬ ಹಂಬಲ. ಅದಕ್ಕೆ ನನ್ನದೇನೂ ಅಡ್ಡಿ ಇರಲಿಲ್ಲ. ಅದೇ ಉದ್ದೇಶದಿಂದ ನೀನು ಬೆಂಗಳೂರಿಗೆ ಹೋದೆ. ಬಹುಶಃ ಅದೇ ನನ್ನ ನಿನ್ನ ಕೊನೆಯ ಭೇಟಿ!
ಹಾಗೆಯೇ, ಅದೇ ನನ್ನ ಮೊದಲ ತಪ್ಪೆಂದು ಹೇಳಬಹುದು.ಮಾಯಾನಗರಿ ಬೆಂಗಳೂರಿಗೆ ಹೋದ ನೀನು, ಎಲ್ಲಿ ಕಳೆದುಹೊದೆಯೆಂದು ಹುಡುಕಲು ನನ್ನಿಂದ ಸಾಧ್ಯವಾಗಲೇ ಇಲ್ಲ. ನನ್ನವನಾಗಿದ್ದ ನೀನು ಕೇವಲ ಒಂದೇ ತಿಂಗಳಿನಲ್ಲಿ ಅಪರಿಚಿತನಾದೆ. ಎಂದಾದರೂ ಒಂದು ದಿನ ಮರಳಿ ಬರುವೆಯೆಂಬ ಹಂಬಲ ನನ್ನದು. ನಾವು ನಡೆದ ಹೆಜ್ಜೆ ಗುರುತುಗಳು ಮತೊಮ್ಮೆ ಸಾಕ್ಷಿಕೇಳುತ್ತಿವೆ. ಸಾಬೀತುಪಡಿಸಲು ನೀನಿಲ್ಲವಲ್ಲ ಎಂಬುದೇ ಕೊರಗು. ಕೂತಜಾಗ, ಆಡಿದ ಮಾತುಗಳು, ಕಂಡ ಕನಸುಗಳು ಎಲ್ಲವೂ ನನ್ನನ್ನು ಅಣಕಿಸಿದಂತೆ ಭಾಸವಾಗುತ್ತಿದೆ. ನಿನಗಾಗಿ ಒಂದು ಜೀವಕಾಯುತ್ತಿದೆ ಎಂದು ನೆನಪಾಗಿ ಎಂದಾದರೊಂದು ದಿನ ಮರಳುವೆಯೆಂಬ ಚಿಕ್ಕ ಭರವಸೆಯಲ್ಲಿ ದಿನದೂಡುತ್ತಿರುವೆ. ನಿನ್ನ ಮುಗುಳುನಗು, ಗುಳಿಕೆನ್ನೆಯ ಮುಖ ನೋಡಲು ಸದಾಕಾಯುತ್ತಿರುವೆ ಕಣೋ…ಬರುವೆಯಾ ಮರೆಯದೇ?
ವಿಶ್ವಾಸಗಳೊಂದಿಗೆ,
ಪವಿತ್ರಾ ಭಟ್