Advertisement

ಪ್ರತ್ಯೇಕ ಧರ್ಮ ಸಮಿತಿಗೆ 2 ತಿಂಗಳಲ್ಲಿ 36 ಲಕ್ಷ ಖರ್ಚು

12:55 AM Jan 29, 2019 | |

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ಸಂಬಂಧ ಅಧ್ಯಯನ ನಡೆಸಿ ವರದಿ ನೀಡಲು ರಚಿಸಿದ್ದ ಸಮಿತಿಗೆ ಎರಡು ತಿಂಗಳಿಗೆ ಬರೋಬ್ಬರಿ 36 ಲಕ್ಷ ರೂ. ವೆಚ್ಚ ಮಾಡಲಾಗಿದೆ.

Advertisement

ವೀರಶೈವ ಮತ್ತು ಲಿಂಗಾಯತ ಎರಡೂ ಪ್ರತ್ಯೇಕ ಎಂಬ ಹೋರಾಟ ಆರಂಭಿಸಿದ್ದ ಕೆಲವು ಮಠಾಧೀಶರು ಹಾಗೂ ರಾಜಕೀಯ ನಾಯಕರು ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರ ಮೇಲೆ ಒತ್ತಡ ಹೇರಿದ್ದರು.

ಈ ಹಿನ್ನೆಲೆಯಲ್ಲಿ ಒತ್ತಡಕ್ಕೆ ಮಣಿದಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಮೂಲಕ ನಿವೃತ್ತ ನ್ಯಾ. ನಾಗಮೋಹನ್‌ ದಾಸ್‌ ನೇತೃತ್ವದ ಒಂಭತ್ತು ಜನರ ಸಮಿತಿ ರಚಿಸಿ ವೀರಶೈವ ಲಿಂಗಾಯತರ ನಡುವಿನ ವ್ಯತ್ಯಾಸ ಹಾಗೂ ಲಿಂಗಾಯತ ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ನೀಡುವ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು.

ತಜ್ಞರ ಸಮಿತಿ 2017 ಡಿ. 22ರಿಂದ ಕಾರ್ಯ ಆರಂಭಿಸಿ 2018ರ ಮಾ.1ರ ವರೆಗೂ ಕಾರ್ಯ ನಿರ್ವಹಿಸಿತ್ತು. ಎರಡು ತಿಂಗಳು ಹತ್ತು ದಿನ ಕಾರ್ಯ ನಿರ್ವಹಿಸಿರುವ ತಜ್ಞರ ಸಮಿತಿ ಒಟ್ಟು 36 ಲಕ್ಷ 5,161 ರೂ. ವೆಚ್ಚ ಮಾಡಿದ್ದು ಅಲ್ಪ ಸಂಖ್ಯಾತರ ಆಯೋಗ ಮೂಲಕ ರಾಜ್ಯ ಸರ್ಕಾರ ತಜ್ಞರ ಸಮಿತಿಗೆ ಮಾಡಿರುವ ವೆಚ್ಚದ ಮಾಹಿತಿಯನ್ನು ಅಖೀಲ ಭಾರತ ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಪಡೆದಿದ್ದು ‘ಉದಯವಾಣಿ’ಗೆ ಲಭ್ಯವಾಗಿದೆ.

ತಜ್ಞರ ಸಮಿತಿ ಸಭೆ ಹಾಗೂ ಮಾಹಿತಿ ಸಂಗ್ರಹಕ್ಕೆ ವೆಚ್ಚ ಮಾಡಿರುವುದಕ್ಕಿಂತ ಅವರ ಸಂಭಾವನೆಗೆ ಹೆಚ್ಚಿನ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಸಭೆ, ಜಾಹೀರಾತು, ಸದಸ್ಯರ ವಾಸ್ತವ್ಯದ ವೆಚ್ಚ, ಪ್ರಯಾಣ ಭತ್ಯೆ, ಅನುವಾದ ಸೇರಿ 5.75 ಲಕ್ಷ ವೆಚ್ಚವಾಗಿದ್ದು, ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಂಭಾವನೆ 30.30ಲಕ್ಷ ರೂ. ನೀಡಲಾಗಿದೆ.


ಶಿಫಾರಸು ತಿರಸ್ಕೃತ: ತಜ್ಞರ ಸಮಿತಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿ ಆಯೋಗಕ್ಕೆ ವರದಿ ಸಲ್ಲಿಸಿತ್ತು. ಆಯೋಗದ ವರದಿ ಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

Advertisement

ರಾಜ್ಯ ಸರ್ಕಾರ ಜನರ ದುಡ್ಡಿನಲ್ಲಿ ದುಂದು ವೆಚ್ಚ ಮಾಡಿದ್ದು, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಯತ್ನ ಮಾಡಿದೆ. ಚುನಾವಣೆ ದೃಷ್ಟಿಯಿಂದ ಜನರ ಭಾವನೆಗಳನ್ನು ಧಕ್ಕೆ ಉಂಟುಮಾಡಿದ್ದು, ಸಾರ್ವಜನಿಕರ ಹಣವನ್ನು ಪೋಲು ಮಾಡಿರುವುದು ಖಂಡನೀಯ.
– ಪ್ರಸಾದ್‌ ಸಿರಿಮನೆ,
ಆರ್‌ಟಿಐ ಮೂಲಕ ಮಾಹಿತಿ ಪಡೆದವರು.

ಸರ್ಕಾರ ಧರ್ಮ ಒಡೆಯಲು ಸಮಿತಿ ರಚನೆ ಮಾಡಿದಾಗಲೇ ನಾವು ನ್ಯಾ.ನಾಗಮೋಹನ್‌ ದಾಸ್‌ ಅವರ ಎದುರು ಹಾಜರಾಗಿ ಸಮಿತಿಗೆ ರಾಜೀನಾಮೆ ನೀಡುವಂತೆ ಮನವಿ ಮಾಡಿದ್ದೆವು. ಅವರು ಚುನಾವಣೆ ದೃಷ್ಟಿಯಿಂದ ಎರಡು ತಿಂಗಳಲ್ಲಿ ತರಾತುರಿಯಲ್ಲಿ ವರದಿ ನೀಡಿ, ಹಣ ಪೋಲು ಮಾಡಿದ್ದಾರೆ.
– ವರದಾನಿ ವೀರಭದ್ರಪ್ಪ,
ವೀರಶೈವ ಲಿಂಗಾಯತ ಸಮನ್ವಯ ಸಮಿತಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next