ಬೆಂಗಳೂರು: ರಾಜ್ಯದಲ್ಲಿ ವ್ಯಾಪಾರ- ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ವ್ಯಾಪಾರಿಗಳು, ಉದ್ಯಮಿಗಳು ತಮ್ಮ ಲಾಭದಲ್ಲಿ ಸ್ವಲ್ಪ ಪಾಲನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸಿದಾಗ ಮಾತ್ರ ಸಮಾಜದಲ್ಲಿರುವ ಎಲ್ಲರ ಬೇಡಿಕೆಗಳಿಗೂ ಸ್ಪಂದಿಸಲು ಸಾಧ್ಯ ಎಂದು ರಾಜ್ಯಪಾಲ ವಜುಭಾಯ್ ವಾಲಾ ಹೇಳಿದರು.
ಅಸೋಚಾಮ್ ಕರ್ನಾಟಕ ಘಟಕವು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ಸಹಯೋಗದಲ್ಲಿ ಭಾನುವಾರ ಎಫ್ಕೆಸಿಸಿಐನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ವಿಧಾನಗಳನ್ನು ಅಳವಡಿಸಿಕೊಂಡ ಶಾಲೆಗಳಿಗೆ “ಇನೋವೇಷನ್ ಅವಾರ್ಡ್ಸ್’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರತಿಯೊಂದು ವ್ಯಾಪಾರ- ವ್ಯವಹಾರದಲ್ಲೂ ಲಾಭದ ಉದ್ದೇಶವಿರುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ಗಳಿಸುವ ಲಾಭದಲ್ಲಿ ಒಂದು ಅಂಶವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಜಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಅವಕಾಶವಂಚಿತರು, ಆರ್ಥಿಕವಾಗಿ ದುರ್ಬಲರಾದವರು, ಸೌಲಭ್ಯ ವಂಚಿತರು ಒಂದಿಷ್ಟು ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಕಲಿಕೆಗೆ ಸಂಬಂಧಪಟ್ಟಂತೆ ಅತ್ಯುತ್ತಮ ವಿಧಾನಗಳನ್ನು ಅಳವಡಿಸಿಕೊಂಡ ಶಾಲೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿರುವುದು ಉತ್ತಮವಾಗಿದೆ. ದೇಶದ ಭವಿಷ್ಯವೆನಿಸಿರುವ ಮಕ್ಕಳ ಚಾರಿತ್ರ್ಯ ರೂಪಿಸುವ ಕಾರ್ಯ ರಾಷ್ಟ್ರೀಯ ಕಾರ್ಯಕ್ರಮವೆನಿಸಿದೆ. ಮಹಾತ್ಮ ಗಾಂಧೀಜಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ಆ ಸಂದರ್ಭದಲ್ಲಿ ಉದ್ಯಮಿಗಳಾದ ಟಾಟಾ, ಬಿರ್ಲಾ ಕೂಡ ಇದ್ದರು. ಆದರೆ ದೇಶ ಗಾಂಧೀಜಿ ಅವರನ್ನು ನೆನೆಯುತ್ತದೆ. ಸಮಾಜಕ್ಕೆ ದುಡಿದವರನ್ನು ಮಹಾನ್ ವ್ಯಕ್ತಿಗಳೆಂದು ಗೌರವದಿಂದ ಕಾಣಲಾಗುತ್ತದೆ ಎಂದು ತಿಳಿಸಿದರು. ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲ ಸೌಕರ್ಯ, ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ಬುಕ್, ಶೂ ಇತರೆ ಸಲಕರಣೆಗಳನ್ನು ಒದಗಿಸುವತ್ತ ವ್ಯಾಪಾರ- ವಹಿವಾಟುದಾರರು ಗಮನ ಹರಿಸಬೇಕು.
ವಿದ್ಯಾವಂತರ ಸಂಖ್ಯೆ ಹೆಚ್ಚಾದಂತೆ ಆರ್ಥಿಕ ಬಡತನ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ಉದ್ದಿಮೆದಾರರು ಇಂತಹ ಪ್ರಯತ್ನ ಕೈಗೊಳ್ಳುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಬೇಕು ಎಂದು ಕರೆ ನೀಡಿದರು. ಅಸೋಚಾಮ್ ಕರ್ನಾಟಕ ಘಟಕದ ಅಧ್ಯಕ್ಷ ಆರ್.ಶಿವಕುಮಾರ್, ಸಹ ಅಧ್ಯಕ್ಷ ಎಸ್.ಬಾಬು, ಸಂಚಾಲಕ (ಶಿಕ್ಷಣ ಕ್ಷೇತ್ರ) ಡಾ.ಸಿ.ಮನೋಹರ್, ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಮಹಾ ನಿರ್ದೇಶಕ ಮಹೇಶ್ ಜೋಶಿ, ಕರ್ನಾಟಕ ಸ್ಟಾರ್ಟ್‌ಅಪ್ ಫೋರಂ ಅಧ್ಯಕ್ಷ ಸ್ವರೂಪ್ ಮಾಧವನ್ ಇತರರು ಉಪಸ್ಥಿತರಿದ್ದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಕಾಲದಿಂದಲೂ ಗರೀಬಿ ಹಠಾವೋ ಕಾರ್ಯಕ್ರಮ ಜಾರಿಯಲ್ಲಿದ್ದರೂ ಬಡವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹಸಿದವರಿಗೆ ರೊಟ್ಟಿ ನೀಡುವುದಕ್ಕಿಂತ ರೊಟ್ಟಿಯನ್ನು ಗಳಿಸುವ ಆರ್ಥಿಕ ಸ್ವಾವಲಂಬನೆಯನ್ನು ಕಲ್ಪಿಸಲು ಆದ್ಯತೆ ನೀಡಬೇಕು.
-ವಜುಭಾಯ್ ವಾಲಾ, ರಾಜ್ಯಪಾಲ