ಗ್ರೇಟರ್ ನೋಯ್ಡಾ: ಅತೀ ವೇಗದಿಂದ ಬಂದ ಬಿಎಂಡಬ್ಲ್ಯೂ ಸ್ಪೋರ್ಟ್ಸ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಯಮುನಾ ಎಕ್ಸ್ ಪ್ರೆಸ್ ವೇಯಿಂದ ಬಿದ್ದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ.
ಈ ಘಟನೆಯು ಗ್ರೇಟರ್ ನೋಯ್ಡಾದ ಗಲ್ಗೋಟಿಯಾ ಯುನಿವರ್ಸಿಟಿ ಬಳಿ ನಡೆದಿದೆ. ಅತೀ ವೇಗದಲ್ಲಿ ಬಂದ ಬಿಎಂಡಬ್ಲ್ಯೂ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿಯಷ್ಟು ಆಳದ ರಸ್ತೆ ಬದಿ ಕಂದಕಕ್ಕೆ ಬಿದ್ದಿದೆ.
ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ 20 ವರ್ಷದ ಪ್ರಾಯದ ಭರತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಆತನ ಸ್ನೇಹಿತ ಗೌರವ್ ಎಂಬಾತ ಗಾಯಗೊಂಡಿದ್ದಾರೆ. ಗಾಯಗೊಂಡ ಗೌರವ್ ನನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ ವಿರೋಧಿಸಿ ಬಂದ್ ಗೆ ಕರೆ; ಗೋಶಾಮಹಲ್ ನಲ್ಲಿ ಬಿಗಿ ಬಂದೋಬಸ್ತ್
ಇಂದು ಬೆಳಗ್ಗೆ ಸುಮಾರು 8.30ರ ಸುಮಾರಿಗೆ ಭರತ್ ಮತ್ತು ಗೌರವ್ ಬಿಎಂಡಬ್ಲ್ಯೂ ಸ್ಪೋರ್ಟ್ಸ್ ಕಾರಿನಲ್ಲಿ ಯಮುನಾ ಎಕ್ಸ್ ಪ್ರೆಸ್ ವೇ ಮೂಲಕ ಆಗ್ರಾ ಕಡೆಗೆ ಪ್ರಯಾಣಿಸುತ್ತಿದ್ದರು. ಅವರು ಗಲ್ಗೋಟಿಯಾ ಯುನಿವರ್ಸಿಟಿ ಬಳಿ ಬರುವಾಗ ಕಾರು ಪಲ್ಟಿ ಹೊಡೆದಿದೆ.