Advertisement

Speed Limit: ವಾಹನಗಳ ವೇಗಮಿತಿ ಗೊಂದಲಗಳ ಗೂಡು

12:36 AM Aug 05, 2024 | Team Udayavani |

ಮಂಗಳೂರು/ ಉಡುಪಿ: ವಾಹನಗಳ ವೇಗ ಮಿತಿಯನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯನ್ನು ರಾಜ್ಯದಲ್ಲೂ ಆ.1ರಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

Advertisement

ವಾಹನಗಳ ವೇಗವನ್ನು ಸುಮಾರು 100 ಮೀಟರ್‌ ದೂರದಲ್ಲಿಯೇ ಪತ್ತೆ ಹಚ್ಚಲು ಮೊಬೈಲ್‌ ಸ್ಪೀಡ್‌ ಡಿಟೆಕ್ಷನ್‌ ರಾಡಾರ್‌ ಗನ್‌ಗಳನ್ನು ಪೊಲೀಸರು ಬಳಸಲಿದ್ದಾರೆ. ದ.ಕ ಜಿಲ್ಲಾ ಪೊಲೀಸರಿಗೂ ಎಡಿಜಿಪಿಯವರು ಸೂಚನೆಗಳನ್ನು ನೀಡಿದ್ದು, ಅದರಂತೆ ದ.ಕ. ಜಿಲ್ಲಾ ಪೊಲೀಸರು ಮತ್ತು ಮಂಗಳೂರು ಪೊಲೀಸ್‌ ಕಮಿಷನರೆಟ್‌ನ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ.

ವೇಗದ ಮಿತಿ ಎಷ್ಟು?
ಅಧಿಸೂಚನೆ ಪ್ರಕಾರ, ಪ್ರಯಾಣಿಕರನ್ನು ಕರೆದೊಯ್ಯುವ 9ಕ್ಕಿಂತ ಕಡಿಮೆ ಸೀಟ್‌ ಹೊಂದಿರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಾಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 100 ಕಿ.ಮೀ., ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 70 ಕಿ.ಮೀ., ಇತರ ರಸ್ತೆಗಳಲ್ಲಿ 70 ಕಿ.ಮೀ. ವೇಗ ಮಿತಿ. 9ಕ್ಕಿಂತ ಹೆಚ್ಚು ಸೀಟ್‌ ಹೊಂದಿರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಾಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 90 ಕಿ.ಮೀ., ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 60 ಕಿ.ಮೀ., ಮತ್ತು ಇತರ ರಸ್ತೆಗಳಲ್ಲಿ 60 ಕಿ.ಮೀ. ಎಲ್ಲ ರೀತಿಯ ಗೂಡ್ಸ್‌ ವಾಹನಗಳು ಮತ್ತು ಮೋಟಾರು ಸೈಕಲ್‌ಗ‌ಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 80, ಪಾಲಿಕೆ, ನಗರಸಭೆ, ಪುರಸಭೆಯ ರಸ್ತೆಗಳಲ್ಲಿ 60 ಕಿ.ಮೀ. ಮತ್ತು ಇತರ ರಸ್ತೆಗಳಲ್ಲಿ 60 ಕಿ.ಮೀ., ತ್ರಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ರಸ್ತೆ ವಿಭಾಜಕ ಹೊಂದಿರುವ 4 ಲೇನ್‌ಗಳಿಗಿಂತ ಜಾಸ್ತಿ ಇರುವ ರಸ್ತೆಗಳಲ್ಲಿ 50 ಕಿ.ಮೀ., ನಗರಸಭೆ, ಪುರಸಭೆಯ ರಸ್ತೆಗಳಲ್ಲಿ ಮತ್ತು ಇತರ ರಸ್ತೆಗಳಲ್ಲಿ 50 ಕಿ.ಮೀ. ವೇಗದ ಮಿತಿಯಲ್ಲಿ ಸಂಚರಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಕೆಲವು ಕಡೆಗಳಲ್ಲಿ ಈ ಮಿತಿಗಿಂತಲೂ ಕಡಿಮೆ ವೇಗದ ಮಿತಿಯನ್ನು ನಿಗದಿ ಮಾಡ ಲಾಗಿದ್ದು, ಅಲ್ಲೆಲ್ಲ ಫ‌ಲಕಗಳನ್ನು ಅಳವಡಿಸಲಾಗಿದೆ. ಗರಿಷ್ಠ 100 ಕಿ.ಮೀ. ವೇಗದ ಮಿತಿ ಇರುವ ಹೆದ್ದಾರಿಯ ಕೆಲವು ಭಾಗಗಳಲ್ಲೂ ಈ ಮಿತಿಯನ್ನು ಕಡಿಮೆ ಮಾಡಲಾಗಿದ್ದು, ಆ ಪ್ರದೇಶದಲ್ಲಿ ಫ‌ಲಕ ಅಳವಡಿಸಲಾಗಿದೆ. ಆದ್ದರಿಂದ ಚಾಲಕರು ಅಂಥ ಫ‌ಲಕಗಳನ್ನು ಗಮನಿಸಬೇಕು ಎಂಬುದು ಪೊಲೀಸರ ಸೂಚನೆ.

ದ.ಕ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಹೆದ್ದಾರಿಗಳಲ್ಲಿ ಮಾತ್ರ ಸದ್ಯ ದಂಡ ವಿಧಿಸಲಾಗುತ್ತಿದೆ. ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ ವೇಗಮಿತಿ ಫ‌ಲಕಗಳನ್ನು ಆಧರಿಸಿ ದಂಡ ವಿಧಿಸಲಾಗುತ್ತಿದೆ ಎಂದು ಎಸ್‌ಪಿ ಯತೀಶ್‌ ಎನ್‌. ತಿಳಿಸಿದ್ದಾರೆ.

Advertisement

ಸಿಗದ ಸ್ಪಷ್ಟ ಮಾಹಿತಿ
ಕೆಲವು ಕಡೆ ಅಧಿಸೂಚನೆಯಲ್ಲಿ ಇರುವ ಮಿತಿಗಿಂತ ಕಡಿಮೆ ವೇಗದ ಮಿತಿ ಇರುವ ಬಗ್ಗೆ ಸೂಚನಾ ಫ‌ಲಕಗಳಿಲ್ಲ ಹಾಗೂ ಇರುವಂಥವು ಕೂಡ ಅಸ್ಪಷ್ಟವಾಗಿವೆ. ಕೆಲವು ಹೆದ್ದಾರಿಯಲ್ಲಿ 50 ಕಿ.ಮೀ. ವೇಗದ ವಿತಿಯನ್ನೂ ನಿಗದಿ ಮಾಡಲಾಗಿದ್ದು, ಆದರೆ ಅದರ ಬಗ್ಗೆ ಚಾಲಕರಿಗೆ ಸ್ಪಷ್ಟವಾಗಿ ಕಾಣುವಂತೆ ಫ‌ಲಕ ಅಳವಡಿಸಿಲ್ಲ. ಆದ್ದರಿಂದ ಇಂಥ ಅವ್ಯವಸ್ಥೆ ನಡುವೆ ದಂಡ ವಿಧಿಸುವುದು ಸರಿಯಲ್ಲ ಎಂದು ಬಹುತೇಕ ವಾಹನ ಚಾಲಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

“ಮಂಗಳೂರು ನಗರದೊಳಗಿನ ರಸ್ತೆಗಳಲ್ಲಿ ವೇಗದ ಮಿತಿ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಆದ್ದರಿಂದ ಹೆದ್ದಾರಿಗಳ ಕೆಲವು ಕಡೆ ಬೋರ್ಡ್‌ ಅಳವಡಿಕೆ ಮಾಡಿರುವ ಸ್ಥಳಗಳಲ್ಲಿ ವಾಹನಗಳ ವೇಗ ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತಿದೆ. 100 ಕಿ.ಮೀ. ವೇಗದಲ್ಲಿ ಸಾಗಬಹುದಾದ ಹೆದ್ದಾರಿ ಜಿಲ್ಲಾ ವ್ಯಾಪ್ತಿಯಲ್ಲಿಲ್ಲ. ಅದರಂತೆ ಗರಿಷ್ಠ ವೇಗ ಮಿತಿ 80 ಕಿ.ಮೀ.ಗಳು. ಕೆಲವು ಕಡೆಗಳಲ್ಲಿ 50 ಕಿ.ಮೀ. 30 ಕಿ.ಮೀ. ಇದೆ.”  –ಬಿ.ಪಿ. ದಿನೇಶ್‌ ಕುಮಾರ್‌, ಪೊಲೀಸ್‌ ಉಪ ಆಯುಕ್ತ (ಅಪರಾಧ ಮತ್ತು ಸಂಚಾರ ವಿಭಾಗ)

Advertisement

Udayavani is now on Telegram. Click here to join our channel and stay updated with the latest news.

Next