ಆಡಹೊರಟಾಗಲೇ ಮಾತಿನ ಸಾಧ್ಯತೆಯೂ ಮಿತಿಯೂ ಒಟ್ಟೊಟ್ಟಿಗೆ ಅರಿವಾಗತೊಡಗುತ್ತದೆ. ಆಡಿದಷ್ಟೂ ತೊಳಲಿಕೆ, ಬಳಲಿಕೆಗಳಲ್ಲಿ ಸೋತು ಹೋದ ಹಾಗೆ ಕಾಣುವ ಮಾತು, ತನ್ನ ಸಾಧ್ಯತೆಯನ್ನು ಅರಿಯಲೆಂದೇ ಈ ಅಸಹಾಯ ಸ್ಥಿತಿಗೆ ತನ್ನನ್ನು ಮತ್ತೆ ಮತ್ತೆ ಒಡ್ಡಿಕೊಳ್ಳುತ್ತದೇನೋ! ಪ್ರತಿ ಬಾರಿಯೂ ಬರಹಕ್ಕೆ ತೊಡಗಿದ ಮೇಲೆಯೇ ಮತ್ತೆ ಹೆಚ್ಚು ಆಳವಾಗಿ ಆ ವಿಷಯಕ್ಕೆ ತೆಗೆದುಕೊಳ್ಳುವ ಮನಸ್ಸು, ಬರೆದ ಪ್ರತಿ ಮಾತನ್ನೂ ಮತ್ತೆ ಒರೆಗೆ ಹಚ್ಚುತ್ತ ಇನ್ನೊಂದೇ ಸಾಧ್ಯತೆ ಹೊಳೆಯಿಸುತ್ತ ಹೋದ ಹಾಗೇ ಇದು ಇರಬೇಕಾದ್ದೇ ಹೀಗಲ್ಲವೆ ಅನಿಸುತ್ತ ಎಲ್ಲವೂ ಹಗುರವಾದಂತೆಯೂ ಅನಿಸುತ್ತದೆ.
ಅರಿಯಬೇಕೆನ್ನುವ ಮನುಷ್ಯ ಸಹಜ ಆಸೆ, ಕುತೂಹಲಕ್ಕೆ ಮಾತೂ ಒಂದು ಸಾಧನ. ಆಡಿದಷ್ಟೂ ಆಡದೆ ಉಳಿದ ಇನ್ನೊಂದಿಷ್ಟು ಮಾತುಗಳು ಸುಳಿವೇ ಇರದೆ ಮನಸ್ಸಿಗೆ ಹೊಳೆಯುವುದೊಂದು ವಿಸ್ಮಯ. ಹಾಗೆ ಹೊಳೆದ ಏನೋ ಒಂದನ್ನು, ಅದೇನೆಂದು ಆಡಿಯೇ ಅರಿಯುವ ಬಯಕೆಯನ್ನು ಮತ್ತೆ ಮತ್ತೆ ಮಾತೇ ಮನದಲ್ಲಿ ಹುಟ್ಟಿಸುತ್ತಿರುವಂತಿದೆ.
ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿಭ್ರಮೆಗೆ ಸಂಬಂಧಿಸಿದ ಸೋಜಿಗವೊಂದು ನೆನಪಾಗುತ್ತಿದೆ. ಕೆಂಪು ಬಣ್ಣದ ಚೆಂಡೊಂದನ್ನು ಮೂವತ್ತರಿಂದ ಅರವತ್ತು ಸೆಕೆಂಡುಗಳ ತನಕ ದಿಟ್ಟಿಸಿ ನೋಡಿ ನಂತರ ಥಟ್ಟನೆ ಬಿಳಿಯ ಗೋಡೆಯನ್ನೋ ಕಾಗದವನ್ನೋ ನೋಡಿದರೆ ಅಲ್ಲಿ ಈ ಮೊದಲು ನೋಡಿದ ಚೆಂಡಿನದೇ ಆಕೃತಿಯ ಛಾಯೆ ಕೆಂಪಿಗೆ ವಿರುದ್ಧವಾದ ನೀಲಹಸಿರು ಬಣ್ಣದಲ್ಲಿ ಕೆಲವು ಕ್ಷಣಗಳ ಕಾಲ ಮೂಡುತ್ತದೆ.
ಕಪ್ಪು ಬಿಳಿಯೂ ಬಿಳಿಯು ಕಪ್ಪೂ ಆಗಿ, ಅದು ಅಲ್ಲಿ ಇಲ್ಲದಿರುವಾಗಲೂ ಇರುವಂತೆ ಕಣ್ಣೆದುರು ನೆರಳಾಗಿ ಮೂಡುವ ಈ ವೈಚಿತ್ರಕ್ಕೆ negative after image ಎಂದು ಹೇಳುತ್ತಾರೆ. ಬಣ್ಣ , ನೆರಳು, ಆಕೃತಿ ಇವೆಲ್ಲವೂ ಕಣ್ಣಿಗೆ ಮಣ್ಣೆರಚಿ ಮೂಡಿಸುವ ಇಂಥ ನೂರೆಂಟು ತರಹದ ದೃಷ್ಟಿಭ್ರಮೆಯ ಕುರಿತು ನಮಗೆ ತಿಳಿದಿದೆ. ಆದರೆ, ಅಲ್ಲಿ ಇಲ್ಲದ್ದನ್ನು ಇದೆ ಎಂದು ಕ್ಷಣಕಾಲವಾದರೂ ನಂಬಿಸಲು ಕಣ್ಣೂ ಅದರ ಹಿಂದಿನ ಮಿದುಳೂ ಆಡುವ ಈ ಆಪ್ಟಿಕಲ್ ಇಲ್ಯೂಷನ್ ಆಟದ ಉದ್ದೇಶವಾದರೂ ಏನು ಎನ್ನುವುದು ನಮಗಿನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ದೃಷ್ಟಿಭ್ರಮೆಯನ್ನು ಒಂದಿಷ್ಟು ಮಟ್ಟಿಗೆ ಮೆದುಳಿನ ರಚನೆ ಮತ್ತು ಚಟುವಟಿಕೆಯ ಹಿನ್ನೆಲೆಯಲ್ಲಿ, ಈಗ ಗೊತ್ತಿರುವಷ್ಟು ಮೆದುಳಿನ ಕಾರ್ಯವೈಖರಿಯ ಆಧಾರದ ಮೇಲೆ ವಿಜ್ಞಾನ ಸ್ಥೂಲವಾಗಿ ವಿವರಿಸಬಲ್ಲುದಾದರೂ ಅದು ಪರಿಪೂರ್ಣವಾಗೇನೂ ಇಲ್ಲ. ಹಾಗೆ ನೋಡಿದರೆ, ನಮ್ಮ ಮಿದುಳಿನ ಕಾರ್ಯವೈಖರಿ ಕುರಿತು ಈ ಹೊತ್ತಿನ ಮನುಷ್ಯಲೋಕಕ್ಕೆ ತಿಳಿದಿರುವುದಾದರೂ ಅತ್ಯಲ್ಪ. ಈ ಕ್ಷೇತ್ರದಲ್ಲಿ ನಾವಿನ್ನೂ ಈಗ ಅಂಬೆಗಾಲಿಡಲು ಪ್ರಾರಂಭಿಸಿದ್ದೇವೆಂದು ಅಲ್ಲಿನ ತಜ್ಞರು ಹೇಳುತ್ತಾರೆ. ಮಾತು ಮತ್ತು ಮಾತಿನ ಮೂಲದ ಆಲೋಚನೆಯೂ ಹೀಗೆ ನಮ್ಮ ಮಿದುಳಿನÇÉೇ ಮೂಡುವ ಕಾರಣಕ್ಕೆ, ದೃಷ್ಟಿಭ್ರಮೆಯಂಥದ್ದೇ ಇಲ್ಯೂಷನ್ ಒಂದನ್ನು ಮನುಷ್ಯರ ಮನಸ್ಸು ಮಾತಿನಲ್ಲೂ ಸೃಷ್ಟಿಸುತ್ತಿರಬಹುದೆ ಎನಿಸುತ್ತಿದೆ. ಕೆಲವೊಮ್ಮೆಯಂತೂ ಒಂದೇ ಕಾಲಕ್ಕೆ ಪೂರಕವೂ ವಿರುದ್ಧವೂ ಆದ ವಿಚಾರಗಳು ಅಪ್ರಯತ್ನಕವಾಗಿ ಸಹಜಾತಿಸಹಜವಾಗಿ ಮಾತಿನಲ್ಲಿ ಒಟ್ಟೊಟ್ಟಿಗೇ ಸುಳಿದು ಬರುವಾಗ ಇವೆಲ್ಲ ಒಂದೇ ವಿಚಾರದ ಹಲವು ಮಗ್ಗಲುಗಳೂ ಆಯಾಮಗಳೂ ಆದ ಕಾರಣಕ್ಕೆ ಹೀಗೆ ಒಟ್ಟಿಗಿರಬಹುದೆ ಎಂದೂ ಹೊಳೆಯಿಸುತ್ತಿದೆ. ಇಲ್ಲದ್ದನ್ನು ಇದೆ ಎನಿಸುವಂತೆ ಮಾಡಲೆಂದೆ ಅಥವಾ ಅದನ್ನು ತೋರಲೆಂದೇ “ಇರುವ’ ಬಗೆಯೊಂದನ್ನು ಮಾತು “ಅದು ಹೀಗಿದೆ’ ಎಂದು ಹೇಳುತ್ತಿರಬಹುದೆ?
ಮಾತು ಮತ್ತು ಅದು ಹುಟ್ಟಿಸುವ ಅರ್ಥವಾದರೂ ಎಷ್ಟು ಸೂಕ್ಷ್ಮ ಮತ್ತು ಸಾಪೇಕ್ಷವಾದದ್ದು! ಪ್ರತಿ ಪದಕ್ಕೂ ಒಂದೇ ಅರ್ಥ ಎಂದು (ಸಾಂದರ್ಭಿಕವಾಗಿ) ಇಟ್ಟುಕೊಂಡರೂ ನಾವೆಲ್ಲರೂ ನಮ್ಮ ನಮ್ಮ ಅನುಭವದ ಆಧಾರದ ಮೇಲೆಯೇ ಆ ಪದವನ್ನು ಮತ್ತು ಅದಕ್ಕಂಟಿಕೊಂಡು ಕೂತ ಅರ್ಥವನ್ನು ನಮ್ಮ ಅನುಭವಕ್ಕೆ ಸಿಕ್ಕಂತೆ ಅರ್ಥೈಸುತ್ತಿರುತ್ತೇವೆ. “ದೈವ’, “ಸತ್ಯ’, “ಪ್ರೇಮ’ ಎಂಬೆಲ್ಲ ಸಂಕೀರ್ಣಾರ್ಥದ ಪದಗಳನ್ನು ಬಿಡಿ, “ಮನೆ’ ಎನ್ನುವ ಸರಳ ಶಬ್ದವೂ ನಮ್ಮ ನಮ್ಮ ಮನೆಯೊಂದಿಗಿನ, ಮನೆಯ ಒಳಗಿನ ಸಂಬಂಧಗಳ ಸಂಕೀರ್ಣತೆಯ ಅನುಭವದ ಆಧಾರದ ಮೇಲೆಯೇ ಕೇವಲ ನಮ್ಮದಷ್ಟೇ ಆದ ಅರ್ಥವನ್ನೂ ಪರಿಣಾಮವನ್ನೂ ಹುಟ್ಟಿಸಬಹುದಾಗಿದೆ. ಇದು ಆಯಾ ಪದಗಳಿಗೆ ಲೋಕ ಕೊಟ್ಟ ಅರ್ಥವನ್ನು ಮೀರಿ ಕೇವಲ ಒಬ್ಬ ವ್ಯಕ್ತಿಯ ಅನುಭವ ಆಧಾರದ ಮೇಲೆಯೇ ಅವಲಂಬಿತವಾಗಿ ಇರುವಂಥದ್ದು. ಲೋಕ ಕೊಟ್ಟ ಅರ್ಥವನ್ನೂ ಮೀರಿ ತನ್ನದೇ ಅನುಭವದ ಹಿನ್ನೆಲೆಯಲ್ಲಿ ಶಬ್ದವೊಂದಕ್ಕೆ ಇನ್ನೊಂದೇ ಅರ್ಥವನ್ನು ಹೊಳೆಯಿಸುತ್ತ ಪ್ರತಿಯೊಬ್ಬರೊಳಗೂ ಮಾತು ವಿಧ ವಿಧ ವಿನ್ಯಾಸಗಳಲ್ಲಿ ಬೆಳೆಯಬಹುದು. ಮಾತಿಗೆ ಇಂಥ ಒಂದು ಸಾಧ್ಯತೆಯೂ ನಿರುಮ್ಮಳತೆಯೂ ಇರುವ ಕಾರಣಕ್ಕೇ ಮತ, ಪಂಥ, ವಾದ, ಚಳುವಳಿಗಳ ವಕ್ತಾರರಾದವರ ಮಾತುಗಳು ಕಾಲಕ್ರಮೇಣ ಹುಸಿಯಾಗಿ, ಸವಕಲಾಗಿ ಕಾಣಬಹುದು. ಸಿದ್ಧ, ತಾರ್ಕಿಕ ಎನಿಸುವ ಮಾತುಗಳು ಆಕಳಿಕೆ ತರಬಹುದು. ಯಾವ ವಿಚಾರಧಾರೆಗೆ ಮನಸ್ಸು ಒಲಿದಂತೆ ಕಂಡರೂ ಅದಕ್ಕೆ ಹೊರತಾದ ಅಥವಾ ವಿರುದ್ಧವೂ ಆಗಿರಬಹುದಾದ ಇನ್ನೊಂದೇ ಮಾತು, ಬಿಟ್ಟ ಜಾಗ ತುಂಬಲಿಕ್ಕೆಂಬಂತೆ ಮನಸಲ್ಲಿ ಸುಳಿದು ಲೋಕವನ್ನು ಇಡಿಯಾಗಿಯೇ ನೋಡಲು ಬೇಡುತ್ತಿರಬಹುದು. ಕ್ಷಣ ಕಾಲಕ್ಕಾದರೂ ಮನದಲ್ಲಿ ಮೂಡುವ, ಮಾತಿನ ಈ ನೆಗಟೀವ್ ಆಫ್ಟರ್ ಇಮೇಜ್ ಗುಣವೇ ಶಬ್ದಕ್ಕೂ ತರ್ಕಕ್ಕೂ ಮತ್ತೂಂದಕ್ಕೂ ಅಂಟಿಕೊಂಡು ಆಡಿ ಆಡಿ ದಣಿದವರನ್ನು ತುಸು ಕಾಲವಾದರೂ ತಡೆದು ಕಾಯಬೇಕಿದೆ.
– ಮೀರಾ ಪಿ. ಆರ್., ನ್ಯೂಜೆರ್ಸಿ