Advertisement

ಮಾತು ಮನಸ್ಸಿನ ಕನ್ನಡಿ

07:00 AM Apr 06, 2018 | |

ಮನುಷ್ಯನನ್ನು ಮಾತಿನಿಂದ ಅಳೆಯುವವರಿದ್ದಾರೆ. ಇನ್ನೂ ಕೆಲವರು ವಿನಯವಂತಿಕೆಯಿಂದಲೂ ಅಳೆಯುವವರಿದ್ದಾರೆ. ಯಾರು ಯಾವುದೇ ಮಾತುಗಳನ್ನಾಡಲಿ, ಅದು ಅವರವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಸಾಮಾನ್ಯ ಮಂದಿ ಮಾತನಾಡುವುದಕ್ಕೂ, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ಮಾತನಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಬಹುಶಃ, ಇದುವರೆಗೆ ಚರ್ಚೆಗೆ ಗ್ರಾಸವಾಗಿರುವುದೆಂದರೆ, ಸಾಮಾನ್ಯ ಮಂದಿಯಂತೂ ಅಲ್ಲ, ಬದಲಾಗಿ, ಅದು ಸೆಲೆಬ್ರಿಟಿಗಳು ಮಾತ್ರ. 

Advertisement

ಒಬ್ಬ ವ್ಯಕ್ತಿ ತನ್ನ ಮಾತಿನಿಂದ ಗುರುತಿಸಿಕೊಳ್ಳುತ್ತಾನೆ. ಅದು ಒಳ್ಳೆಯದಾಗಬಹುದು, ಕೆಟ್ಟದ್ದೂ ಆಗಿರಬಹುದು. ಆದರೆ, ವಿನಯವಂತಿಕೆಯಿಂದ ಗುರುತಿಸಿಕೊಳ್ಳುವುದು ಬಹಳ ಕಷ್ಟ. ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳಂತೂ ಸದಾ ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಲೇಬೇಕು. ಅಪ್ಪಿತಪ್ಪಿ ಇತರರಿಗೆ ನೋವಾಗುವಂತೆ ಮಾತಾಡಿದರಂತೂ, ಅವರು ಅಷ್ಟು ವರ್ಷಗಳ ಕಾಲ ಬೆಳೆಸಿಕೊಂಡು ಬಂದ ವ್ಯಕ್ತಿತ್ವಕ್ಕೊಂದು ಕಪ್ಪು ಚುಕ್ಕೆಯಾಗಿಬಿಡುತ್ತದೆ.

ಉತ್ತುಂಗದಲ್ಲಿರುವ ಉದ್ಯಮಿಯಾಗಲಿ, ರಾಜಕಾರಣಿಯಾಗಲಿ, ಕ್ರೀಡಾ ಸಾಧಕರಾಗಿರಲಿ, ಸಿನಿಮಾ ನಟ, ನಟಿಯರೇ ಆಗಿರಲಿ ಮೊದಲು ಮಾತಿನ ಪೆಟ್ಟಿಗೆ ಸಿಲುಕುವುದು ಇವರೇ. ಒಂದರ್ಥದಲ್ಲಿ ಅದು ಕೋಳಿ ಜಗಳವಾಗಿದ್ದರೂ, ಎಲ್ಲೋ ಒಂದು ಕಡೆ ದೊಡ್ಡ ಸುದ್ದಿಗೆ ಕಾರಣರಾಗುತ್ತಾರೆ. ಮೊದಲಿಗೆ ಸೆಲೆಬ್ರಿಟಿಗಳಲ್ಲಿ ವಿನಯ ಅನ್ನೋದು ಇದೆಯಾ? ಇದು ಎಲ್ಲರಲ್ಲೂ ಕಾಡುವ ಸಹಜ ಪ್ರಶ್ನೆ.

ಅದರಲ್ಲೂ ಸಿನಿಮಾ ಮಂದಿಯ ವಿಷಯಕ್ಕೆ ಬಂದರೆ, ಈಗ ವಿನಯವಂತಿಕೆ ಎಂಬುದಕ್ಕೆ ಅರ್ಥವೇ ಕಳೆದುಹೋಗಿದೆ. ಹಾಗಂತ, ಎಲ್ಲರಲ್ಲೂ ಆ ವಿನಯತೆ ಇಲ್ಲವೆಂದಲ್ಲ. ಕೆಲವರಿಗೆ ಸೆಲೆಬ್ರಿಟಿಗಳು ಎಂಬ ಭ್ರಮೆಯೋ ಏನೋ, ಮನಬಂದಂತೆ ಮಾತನಾಡಿಬಿಟ್ಟರೆ, ಯಾವುದೋ ಒಂದು ಹೇಳಿಕೆಯನ್ನು ಕೊಟ್ಟುಬಿಟ್ಟರೆ, ತಾವು ಇನ್ನೆಲ್ಲಿಗೋ ಹೋಗಿಬಿಡುತ್ತೇವೆ, ನಮ್ಮ ಸೆಲೆಬ್ರಿಟಿ ತನಕ್ಕೊಂದು ಅರ್ಥ ಬಂದುಬಿಡುತ್ತೆ ಎಂಬ ಕಲ್ಪನಾ ಲೋಕದಲ್ಲಿ ತೇಲುತ್ತಿರುವವರೇ ಹೆಚ್ಚು. ಈಗಿನ ಕೆಲ ಯುವ ಸೆಲೆಬ್ರಿಟಿಗಳಲ್ಲಿ ಅದು ಹೆಚ್ಚಾಗಿಯೇ ನರ್ತನ ಮಾಡುತ್ತಿದೆ. ಅದಕ್ಕೆ ಅಹಂ ಎಂಬ ಹೆಸರಿಡಬೇಕೋ, ಭ್ರಮೆ ಎನ್ನಬೇಕೋ ಎಂಬುದು ಪ್ರಶ್ನೆ. ಕನ್ನಡ ಚಿತ್ರರಂಗದಲ್ಲಿ ವಿನಯವಂತಿಕೆ ಎಂಬ ಪದದ ಪ್ರಸ್ತಾಪವಾಗುತ್ತಲೇ ನೆನಪಿಗೆ ಬರುವ ಮೊದಲ ಹೆಸರು ಡಾ. ರಾಜಕುಮಾರ್‌ ಅವರದ್ದು. ದೊಡ್ಡ ನಟರಾದರೂ, ನೂರಾರು ಪ್ರಶಸ್ತಿ ಮತ್ತು ಬಿರುದುಗಳಿಗೆ ಭಾಜನರಾದರೂ ಅವರು ಯಾವತ್ತೂ ವಿನಯವಂತರಾಗಿಯೇ ಇದ್ದರು. ಅವರ ವಿನಯ ವಂತಿಕೆಗೆ, ಸರಳ ವ್ಯಕ್ತಿತ್ವಕ್ಕೆ, ಸಜ್ಜನಿಕೆಗೆ ನೂರಾರು ಉದಾಹರಣೆಗಳಿವೆ. ಅವರು ನಿರ್ಮಾಪಕರನ್ನು “ಅನ್ನದಾತರು’ ಎಂದು ಕರೆದರು. ಇನ್ನು ಅಭಿಮಾನಿಗಳನ್ನು “ಅಭಿಮಾನಿ ದೇವರುಗಳು’ ಎಂದೇ ಸಂಬೋಧಿಸುತ್ತಿದ್ದರು. ಈ ಮಾತಿಗೆ ಎಂದೂ ಚ್ಯುತಿ ಬರದಂತೆ ಅವರು ನಡೆದುಕೊಂಡರು. ಅವರಿಂದ ತೊಂದರೆಯಾಯಿತು ಎಂದು ಯಾವೊಬ್ಬ ನಿರ್ಮಾಪಕರೂ ಹೇಳಲಿಲ್ಲ. ಅವರು ತಮಗೆ ಬೇಸರ ಮಾಡಿದರು ಎಂದು ಯಾವೊಬ್ಬ ಅಭಿಮಾನಿಯೂ ದೂರಲಿಲ್ಲ. ಹಾಗೆ ಬದುಕಿ ತೋರಿಸಿದರು ರಾಜ್‌. ಅವರೊಬ್ಬರೇ ಅಲ್ಲ, ವಿಷ್ಣುವರ್ಧನ್‌, ಶಿವರಾಜಕುಮಾರ್‌, ಅನಂತ್‌ನಾಗ್‌ ಎಲ್ಲರೂ ವಿನಯವಂತಿಕೆಗೆ ಉದಾಹರಣೆಯಾಗಿ ಎಲ್ಲರ ಮನಸ್ಸಿ ನಲ್ಲಿ ಉಳಿದಿದ್ದಾರೆ. ಅಂಬರೀಶ್‌, ರವಿಚಂದ್ರನ್‌ ಮುಂತಾದವರ ಮಾತುಗಳು ಸ್ವಲ್ಪ ಒರಟು ಎಂತೆನಿಸಿದರೂ ಅದು ಅವರ ನೇರನುಡಿಯ ವ್ಯಕ್ತಿತ್ವವನ್ನು ಬಿಂಬಿಸುತ್ತದೆಯೇ ಹೊರತು, ಅಲ್ಲಿ ಅಹಂ ಕಾಣುವುದಿಲ್ಲ.

ಆದರೆ, ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದರೆ, ಸೆಲೆಬ್ರಿಟಿಗಳು ಸಂಯಮವನ್ನಷ್ಟೇ ಅಲ್ಲ, ವಿನಯವಂತಿಕೆಯನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಹೊಚ್ಚ ಹೊಸ ಉದಾಹರಣೆಯೆಂದರೆ ಇತ್ತೀಚೆಗೆ ಬಿಡುಗಡೆಯಾದ “ರಾಜರಥ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಆದ ಘಟನೆ. ಆ ಸಂದರ್ಶನದಲ್ಲಿ, “ನಿಮ್ಮ ಚಿತ್ರವನ್ನು ನೋಡದೇ ಇರುವ ಕನ್ನಡಿಗರಿಗೆ ಏನೆಂದು ಹೇಳುತ್ತೀರಿ’ ಎಂದು ನಿರೂಪಕಿ ಕೇಳುತ್ತಾರೆ. ಇಂಥದ್ದೊಂದು ಸರಳ ಪ್ರಶ್ನೆಗೆ, ಅಷ್ಟೇ ಸರಳವಾಗಿ “ಚಿತ್ರ ನೋಡಿ ಪ್ರೋತ್ಸಾಹಿಸಿ’ ಎಂದು ಹೇಳುತ್ತೇನೆ ಎಂದು ಹೇಳಿಬಿಟ್ಟಿದ್ದರೆ ಆಗಿಹೋಗುತಿತ್ತು ಅಥವಾ ಪ್ರೇಕ್ಷಕರಿಗೆ ಚಿತ್ರ ನೋಡುವಂತೆ ಬೇರೆ ತರಹ ಮನವಿ ಮಾಡಿಕೊಳ್ಳಬಹು ದಾಗಿತ್ತು. ಆದರೆ, ಮನಸ್ಥಿತಿ ಎಷ್ಟು ಬದಲಾಗಿದೆ ಎಂದರೆ ಉತ್ತರ ಕೊಡಬೇಕಾದವರು, ಆಕ್ಷೇಪಾರ್ಹ ಉತ್ತರ ಕೊಟ್ಟು ನಗುತ್ತಾರೆ. ಇದೇ ಪ್ರಶ್ನೆಯನ್ನು ನಾಯಕಿಗೆ ಕೇಳಿದಾಗ, ಅವರಾದರೂ ಬೇರೆ ಹೇಳಬಹುದಿತ್ತು. ಅವರೂ ಅದನ್ನೇ ರಿಪೀಟ್‌ ಮಾಡುತ್ತಾರೆ. ಮತ್ತೂಮ್ಮೆ ಆ ಪ್ರಶ್ನೆಯನ್ನು ನಾಯಕನ ಮುಂದಿಟ್ಟಾಗ, ಅವರು ಇನ್ನೊಂದು ಪದ ಹೆಚ್ಚಿಗೆ ಸೇರಿಸಿ ಅದೇ ಮಾತು ಆಡುತ್ತಾರೆ. ಇಂತಹ ಮಾತನ್ನು ಖಂಡಿಸಬಹುದಾಗಿದ್ದ ನಿರೂಪಕಿ, ಈ ಮಾತಿಗೆ ಚಪ್ಪಾಳೆ ಹೊಡೆಯುವಂತೆ ಪ್ರೋತ್ಸಾಹಿ ಸುತ್ತಾರೆ. ಈ ವಿಷಯ ದೊಡ್ಡದಾಯಿತು. ದೊಡ್ಡದಾದ ನಂತರ, ಇದು ತಮಾಷೆ ಯಾಗಿ ಹೇಳಿದ್ದು ಎಂದು ಬಿಂಬಿಸುವ ಪ್ರಯತ್ನವಾಯಿತು.

Advertisement

ಒಂದು ಚಿತ್ರ ನೋಡಬೇಕೋ, ಬೇಡವೋ ಎಂದು ತೀರ್ಮಾ ನಿಸುವುದು ಪ್ರೇಕ್ಷಕರು. ತಮಗೆ ಇಷ್ಟವಾದರೆ, ಅದನ್ನು ತಲೆ ಮೇಲೆ ಹೊತ್ತು ಮೆರೆಸಿದ್ದೂ ಇದೆ. ನೋಡಬಾರದು ಎಂದೆನಿಸಿದಾಗ ನೋಡದೇ ಬಿಟ್ಟಿದ್ದೂ ಇದೆ. ನೋಡಲಿಲ್ಲ ಅಥವಾ ನೋಡುವುದಿಲ್ಲ ಎಂಬ ಕಾರಣಕ್ಕೆ ಪ್ರೇಕ್ಷಕರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ದೊಡ್ಡ ತಪ್ಪು. ಅಂಥದ್ದೊಂದು ತಪ್ಪು ನಡೆದು ಹೋಗಿದೆ. ಹಾಗಂತ ಇದು ಮೊದಲನೆಯ ಪ್ರಕರಣವೇನಲ್ಲ. 

ಇದಕ್ಕೂ ಮುನ್ನ ನಟ-ನಿರ್ದೇಶಕ-ನಿರ್ಮಾಪಕ ವೆಂಕಟ್‌ ಸಹ ತಮ್ಮ “ಹುಚ್ಚ ವೆಂಕಟ್‌’ ಚಿತ್ರವನ್ನು ನೋಡುವುದಕ್ಕೆ ಪ್ರೇಕ್ಷಕರು ಬರದಿದ್ದಾಗ ಬಾಯಿಗೆ ಬಂದಂತೆ ಬಯ್ದಿದ್ದರು. ಅಲ್ಲಿಂದ ಒಂದಲ್ಲ ಒಂದು ಕಾರಣಕ್ಕೆ ಬಯ್ಯುತ್ತಲೇ ಇದ್ದಾರೆ. ಕನ್ನಡದಲ್ಲಷ್ಟೇ ಅಲ್ಲ, ಈ ತರಹದ ಪ್ರಸಂಗಗಳು ಜಗತ್ತಿನಾದ್ಯಂತ ಆಗಾಗ ನಡೆಯುತ್ತಲೇ ಇರುತ್ತದೆ. ಸೆಲೆಬ್ರಿಟಿಗಳಿಗೆ ತಮಗೆ ತಾವೇ ಏನೋ ಆಗಿಬಿಟ್ಟಿದ್ದೇವೆ ಎಂಬ ಭ್ರಮೆ ತಲೆಯಲ್ಲಿರುವುದ ರಿಂದಲೋ ಏನೋ, ಎಲ್ಲರೂ ಮಾತನ್ನು ಹಿಡಿತದಲ್ಲಿಟ್ಟುಕೊಳ್ಳದೆ ಮನಬಂದಂತೆ ಹರಿದಾಡಲು ಬಿಡುತ್ತಿದ್ದಾರೆ. ಈ ಕಾರಣದಿಂದಾಗಿಯೇ, ಸೆಲೆಬ್ರಿಟಿ ಸ್ಥಾನಕ್ಕೆ ಅರ್ಥವೇ ಇಲ್ಲವಾಗಿದೆ. “ಅವಮಾನ’ ಎಂಬ ಈ ನಾಲ್ಕು ಅಕ್ಷರಗಳಲ್ಲಿ ಲಕ್ಷಾಂತರ ಮಂದಿಯ ಮನಸ್ಸು ಛಿದ್ರಗೊಳಿಸುವ ತಾಕತ್ತಿದೆ ಅನ್ನುವುದಾದರೆ, “ವಿನಯ’ ಎಂಬ ಈ ಮೂರೇ ಅಕ್ಷರಗಳಲ್ಲಿ ಅಂತಹ ಲಕ್ಷಾಂತರ ಜನರ ಮನಸ್ಸನ್ನು ಅರಳಿಸುವ ಶಕ್ತಿಯೂ ಇದೆ.

ಪ್ರೇಕ್ಷಕರು, ತಾವು ಕಷ್ಟಪಟ್ಟು ದುಡಿದ ಹಣದಿಂದ ಟೆಕೆಟ್‌ ಖರೀದಿಸಿ, ಒಂದು ಸಿನಿಮಾವನ್ನು ವೀಕ್ಷಿಸಿ ಆ ಚಿತ್ರದ ಹಣೆಬರಹ ಬರೆಯುತ್ತಾರೆ. ಅಷ್ಟೇ ಅಲ್ಲ, ಯಾರು ಅಂತ ಗೊತ್ತಿಲ್ಲದ ಹೀರೋ ನನ್ನು ಸೂಪರ್‌ಸ್ಟಾರ್‌ ಆಗಿಸುತ್ತಾರೆ, ಹೆಸರೇ ಕೇಳದ ನಿರ್ದೇಶಕನನ್ನು ಸಿಂಹಾಸನದ ಮೇಲೆ ಕೂರಿಸುತ್ತಾರೆ. ಅದು ಆ ನಿರ್ದೇಶಕ, ನಾಯಕ ಮತ್ತಿತರರ ಶ್ರಮದ ಫ‌ಲ. ಆದರೆ, ಎಲ್ಲವೂ ಹಾಗೆಯೇ ಆಗಬೇಕು ಅಂತ ಆಸೆಪಡುವುದು ಎಷ್ಟರಮಟ್ಟಿಗೆ ಸರಿ? ತನಗೆ ಇಷ್ಟವಿಲ್ಲದ್ದನ್ನು ಸಾರಾಸಗಟಾಗಿ ತಿರಸ್ಕರಿಸುವ ಹಕ್ಕು ಪ್ರೇಕ್ಷಕನಿಗಿದೆ. ಆದರೆ, ತಾನು ಕಷ್ಟಪಟ್ಟು, ಕೋಟಿಗಟ್ಟಲೆ ಖರ್ಚು ಮಾಡಿದ ಚಿತ್ರವನ್ನು ನೋಡಲೇಬೇಕೆಂದು ಆದೇಶಿಸುವುದು, ಅದರಲ್ಲೂ, ನೋಡದೇ ಇದ್ದವರನ್ನೂ ಮನಬಂದಂತೆ ನಿಂದಿಸು ವುದು ಎಷ್ಟರ ಮಟ್ಟಿಗೆ ಸರಿ? ಇದೇನಾ ಕನ್ನಡತನಕ್ಕೆ ಕೊಡುವ ಗೌರವ? ಅಷ್ಟಕ್ಕೂ ಪ್ರೇಕ್ಷಕ ಮೊದಲಿನಿಂದಲೂ ಒಳ್ಳೆಯದ್ದನ್ನು ಸ್ವೀಕರಿಸಿ, ಬೆನ್ನುತಟ್ಟಿಕೊಂಡು ಬಂದಿದ್ದಾನೆ. ಕೆಟ್ಟದ್ದನ್ನು ಅಷ್ಟೇ ಸಲೀಸಾಗಿ ಪಕ್ಕಕ್ಕೆ ಸರಿಸಿದ್ದಾನೆ. 

ಯಾವುದು ಬೇಕು ಬೇಡ ಎಂಬುದು ಪ್ರೇಕ್ಷಕನಿಗೆ ಬಿಟ್ಟಿದ್ದು. ಆದರೆ, ತನ್ನ ಚಿತ್ರವನ್ನು ನೋಡದವರು ಅಂತಹವರು, ಇಂತಹವರು ಎಂದು ಹೇಳುವ ಅವರಿಗೆ ಹಕ್ಕು ಕೊಟ್ಟವರ್ಯಾರು? ನಿಮ್ಮ ಚಿತ್ರ ಯಾಕೆ ನೋಡಬೇಕು ಎಂದು ಪ್ರಶ್ನಿಸುವ ಹಕ್ಕು ಪ್ರೇಕ್ಷಕನಿಗೆ ಖಂಡಿತ ಇದೆ. ಆದರೆ, ನಮ್ಮ ಚಿತ್ರ ನೋಡಲೇಬೇಕು ಅನ್ನುವ ಹಕ್ಕು ಅವರಿಗಿದೆಯಾ? ಅಷ್ಟಕ್ಕೂ ಪ್ರೇಕ್ಷಕ ಸಿನಿಮಾ ಮಾಡಿ ಅಂತ ಎಲ್ಲೂ ಹೇಳುವುದಿಲ್ಲ. ಒಳ್ಳೆಯದ್ದನ್ನು ಕೊಟ್ಟ ತಂಡವನ್ನು ಎಂದೂ ಬಿಟ್ಟಿಲ್ಲ. ಸರಿಯಾಗಿ ಇರದ ಚಿತ್ರವನ್ನು ಧಿಕ್ಕರಿಸಿರುವುದೂ ಉಂಟು. ಆದರೆ, ಪ್ರೇಕ್ಷಕನಿಗೇ ಧಿಕ್ಕಾರ ಹಾಕುವ ಸೆಲೆಬ್ರಿಟಿಗಳ ಮನಸ್ಥಿತಿಗೆ ಏನನ್ನಬೇಕು? ಗೆದ್ದಾಗ ಇದ್ದಂತಹ ಜನರ ಮೇಲಿನ ವಿನಯತೆ, ಪ್ರೀತಿ, ಗೌರವ. ಸೋತಾಗ ಹತಾಶೆಯ ಮಾತುಗಳೇಕೆ?

ಒಟ್ಟಿನಲ್ಲಿ ಸಿನಿಮಾರಂಗ ರೀಲ್‌ನಿಂದ ಡಿಜಿಟಲ್‌ಗೆ ಬದಲಾ ದಂತೆ, ಚಿತ್ರರಂಗದ ಅನೇಕರ ಮನಸ್ಥಿತಿಯೂ ಬದಲಾಗಿದೆ. ಆಗಿನವರಂತೆ ಈಗಿನವರಿಲ್ಲ. ಪ್ರೀತಿ, ಸ್ನೇಹ, ವಿನಯವಂತಿಕೆ, ತಾಳ್ಮೆ ಎಲ್ಲವೂ ಕಡಿಮೆಯಾಗುತ್ತಿದೆ. ಇವತ್ತಿನ ಬಹಳಷ್ಟು ಕಲಾವಿದರಿಗೆ ತಾವೇನೋ ಸಾಧನೆ ಮಾಡಿದ್ದೇವೆ ಎಂಬ ಹಠಮಾರಿತನವಿದೆ. ಆ ಹಠಮಾರಿತನ, ತಮ್ಮೊಳಗಿನ ವಿನಯ ವಂತಿಕೆಯನ್ನು ಮಾರಿಕೊಂಡುಬಿಟ್ಟಿದೆ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next