Advertisement

ಪುತ್ತೂರಿನ ರಂಗಭೂಮಿ ಕಲಾವಿದನಿಗೆ ಒಲಿದ ಭಾಷಣ ಕಲೆ 

04:47 PM Nov 23, 2017 | |

ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಕಾರ್ತಿಕ್‌ಅವರಿಗೆ ಭಾಷಣ ಕಲೆ ಒಲಿದು ಬಂದಿದೆ. ಇದರ ಜತೆಗೆ ಸಿನಿಮಾದಲ್ಲೂ ಬಣ್ಣ ಹಚ್ಚಿ ಯಶಸ್ವಿಯಾಗಿದ್ದಾರೆ.

Advertisement

ಕಾರ್ತಿಕ್‌ ಎಸ್‌. ಈಗಿನ್ನೂ ದ್ವಿತೀಯ ಬಿ.ಕಾಂ. ಪದವಿ ವಿದ್ಯಾರ್ಥಿ. ನೆಹರೂನಗರ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎಳವೆಯಲ್ಲಿ ಕಂಡಿರುವ ಬಣ್ಣದ ಭೂಮಿಯ ಕನಸನ್ನು ನನಸು ಮಾಡುವಲ್ಲಿ ಯಶಸ್ವಿ ಹೆಜ್ಜೆ ಇಡುತ್ತಿದ್ದಾರೆ.

ಸಭಾ ಕಂಪನ ದೂರಾಯ್ತು
ಶಾಲಾ ದಿನಗಳಲ್ಲಿ ಮೊದಲು ರಂಗ ಕಲಾವಿದನಾಗಿ ಅಭಿನಯಿಸುವ ಮೂಲಕ ಕಾರ್ತಿಕ್‌ ಅವಕಾಶವನ್ನು ಗಿಟ್ಟಿಸಿಕೊಂಡರು. ಇದರಲ್ಲಿ ಪಾತ್ರದ ಮಾತನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಬೇಕಿತ್ತು. ಸಭಾ ಕಂಪನ ನನ್ನೊಳಗೆ ಇತ್ತು. ಆದರೂ ಧೈರ್ಯ ಮಾಡಿ ಎರಡು ನಿಮಿಷ ಮಾತುಗಳನ್ನು ಸಭೆಯ ಮುಂದೆ ಪ್ರಸ್ತುತ ಪಡಿಸಿದೆ. ಮುಂದೆ ಇಂತಹ ಅವಕಾಶ ಮತ್ತೆ ಸಿಕ್ಕಿತು. ಹೀಗೆ ಎರಡು- ಮೂರು ಬಾರಿ ನಾಟಕಗಳಲ್ಲಿ ಅಭಿನಯಿಸುತ್ತಲೇ ಸಭಾ ಕಂಪನ ದೂರವಾಯಿತು. ನಾಟಕದ ಸಾಹಿತ್ಯವನ್ನು ಪ್ರಸ್ತುತ ಪಡಿಸುವ ರೀತಿಯೇ ಮುಂದೆ ಭಾಷಣಕಾರನಾಗಿ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ ಕಾರ್ತಿಕ್‌.

ಸ್ವತಂತ್ರ ಮನೋಭಾವವಿರಲಿ
ವ್ಯಕ್ತಿಯ ಪ್ರತಿಭೆ ಉತ್ತೇಜನಕ್ಕಾಗಿ ಸ್ವತಂತ್ರ ಮನೋಭಾವ ಅಗತ್ಯ. ಆದ್ದರಿಂದ ಆಸಕ್ತಿಯ ವಿಚಾರಗಳನ್ನು ಕೇವಲ ಒಂದು ವಿಷಯಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಬದಲಾಗಿ ಹಲವು ಕ್ಷೇತ್ರಗಳಿಗೆ ಕಾರ್ತಿಕ್‌ ಪ್ರವೇಶಿಸಿದರು. ನಾಟಕ, ಭಾಷಣದ ಜತೆಗೆ ಸೈಕ್ಲಿಂಗ್‌, ಸ್ಕೌಟ್‌, ಸ್ವಿಮ್ಮಿಂಗ್‌, ಭರತನಾಟ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ವಿಚಾರ ತಿಳಿದುಕೊಳ್ಳಲು ಇವೆಲ್ಲಾ ಸಹಾಯಕ ಅನ್ನೋದೂ ಕಾರ್ತಿಕ್‌ ಕಾರ್ತಿಕ ಅಭಿಪ್ರಾಯ.

ಐದು ವರ್ಷ ನಾಟಕದಲ್ಲಿ ಅಭಿನಯಿಸುತ್ತಾ, ಪುಣ್ಯಕೋಟಿ, ಸಂಸಾರ, ಕಪ್ಪುಕಾಗೆಯ ಪಾಡು ಮೊದಲಾದ ನಾಟಕದ ಮುಖ್ಯ ಭೂಮಿಕೆಗೆ ಬಣ್ಣ ಹಚ್ಚಿದರು. ಪುತ್ತೂರು, ಸುಳ್ಯ ಮಾತ್ರವಲ್ಲ ಕುಂದಾಪುರ, ಮೂಡುಬಿದರೆಯಲ್ಲೂ ನಾಟಕ ಪ್ರದರ್ಶನ ನೀಡಿದ್ದಾರೆ.

Advertisement

ನಾಟಕದ ಗೀಳೇ ಪ್ರೇರಣೆ
ನಾಟಕದ ಗೀಳು ಸಿನೆಮಾಕ್ಕೂ ಪ್ರೇರಣೆ ನೀಡಿತು. ಗಾನಸಿರಿ ಕಿರಣ್‌ ಕುಮಾರ್‌ ನಿರ್ಮಾಣದಲ್ಲಿ ಮೂಡಿಬಂದ ಕನಸು ಕಣ್ಣು ತೆರೆದಾಗ ಆಲ್ಬಂ ಸಾಂಗ್‌ನಲ್ಲಿ ಮುಖ್ಯ ಭೂಮಿಕೆಯ ಪಾತ್ರ ನಿರ್ವಹಿಸಿದ್ದಾರೆ. ಇಲ್ಲಿನ ನಟನೆಗೆ ಪ್ರಶಂಸೆಯೂ ವ್ಯಕ್ತವಾಗಿದೆ.

ಕಾರ್ತಿಕ್‌ ಪ್ರತಿಭೆಯನ್ನು ಗುರುತಿಸಿ ಹಲವು ಪುರಸ್ಕಾರಗಳು ಒಲಿದು ಬಂದಿವೆ. ಸ್ಕೌಟ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರ, ಸಾಂಸ್ಕೃತಿಕ ಚಟುವಟಿಕೆ ಗುರುತಿಸಿ ರಾಜ್ಯಮಟ್ಟದ ಜ್ಞಾನಶ್ರೀ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಭಾಷಣ ಮತ್ತು ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವು ಪ್ರಥಮ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಮುಂದೆ ಚಾರ್ಟರ್ಡ್  ಅಕೌಂಟೆಂಟ್‌ ಆಗುವ ಮನದಾಸೆಯನ್ನು ವ್ಯಕ್ತಪಡಿಸುತ್ತಾರೆ ಕಾರ್ತಿಕ್‌. ಇವರು ಕಬಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಲತಾ ಕುಮಾರಿ ಮತ್ತು ಪುತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವಾಹನ ಚಾಲಕ ಸುದರ್ಶನ್‌ ಅವರ ಪುತ್ರ.

ಶ್ರೀಕಾಂತ್‌ ಪೂಜಾರಿ ಬಿರಾವು, ಪುತ್ತೂರು.
ಉದಯವಾಣಿ ವಿದ್ಯಾರ್ಥಿ ಪತ್ರಕರ್ತ
ಯೋಜನೆಯ ಶಿಕ್ಷಣಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next