Advertisement
ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ 1962 ಮತ್ತು 1967ರಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಗಳು ಗೆದ್ದರು. ಮತ್ತೆರಡು ಬಾರಿ ಕಾಂಗ್ರೆಸ್‌ಗೆ ಜಯ. 1983ರಲ್ಲಿ ಜನತಾ ಪಕ್ಷದಿಂದ ಕೆ. ಅಮರನಾಥ ಶೆಟ್ಟಿ ಜಯಿಸಿದರು. 1985ರಲ್ಲೂ ಜಯಿಸಿದರು. 1989ರಲ್ಲಿ ಕಾಂಗ್ರೆಸ್. 1994ರಲ್ಲಿ ಮತ್ತೆ ಅಮರನಾಥ ಶೆಟ್ಟಿ ಗೆದ್ದರು – ಈ ಬಾರಿ ಜಾತ್ಯತೀತ ಜನತಾ ದಳದಿಂದ. ಮುಂದೆ 1999, 2004, 2008, 2013ರಲ್ಲಿ- ಅಂದರೆ, ಸತತ 4 ಬಾರಿ ಜಯಿಸಿದವರು ಕಾಂಗ್ರೆಸ್‌ನ ಕೆ. ಅಭಯಚಂದ್ರ ಅವರು. ಇದು ಸತತ ಗೆಲುವಿನಲ್ಲಿ ಜಿಲ್ಲೆಯ ದಾಖಲೆಗಳಲ್ಲೊಂದಾಗಿದೆ. ಕೆ. ಅಮರನಾಥ ಶೆಟ್ಟಿ ಮತ್ತು ಕೆ. ಅಭಯಚಂದ್ರ ಅವರು ಕರ್ನಾಟಕ ಸರಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದವರು. ಹೀಗೆ ಇಬ್ಬರು ಸಚಿವರನ್ನು ನೀಡಿದ ಕ್ಷೇತ್ರವಿದು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಂ. ವೀರಪ್ಪ ಮೊಯಿಲಿ ಅವರು ಮೂಡಬಿದಿರೆಯ ಮಾರ್ಪಾಡಿಯವರು.
ಮೊದಲ ಎರಡು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಈ ಕ್ಷೇತ್ರ ಈ ಹೆಸರಿನಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ. ಮೊದಲ ಚುನಾವಣೆಯಲ್ಲಿ ಇದು ಕಾರ್ಕಳದ ದ್ವಿಸದಸ್ಯ ಕ್ಷೇತ್ರಗಳಲ್ಲೊಂದಾಗಿತ್ತು. ಆಗ ಮದ್ರಾಸ್ ಪ್ರಾಂತ. ಮುಂದೆ ಮೂಲ್ಕಿ ಮೂಡಬಿದಿರೆ ಕ್ಷೇತ್ರಕ್ಕೇ ಎಂಬಂತೆ 1962ರಲ್ಲಿ ಚುನಾವಣೆ ನಡೆಯಿತು. ಆಗ ಸ್ವತಂತ್ರ ಪಕ್ಷದ (ರಾಜಾಜಿ ರೂಪಿತ) ಗೋಪಾಲ್ ಎಸ್. ಅವರು ಗೆದ್ದರು. ಮೊದಲ ಚುನಾವಣೆಯಲ್ಲಿ ಕಾರ್ಕಳದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಮಂಜಪ್ಪ ಉಳ್ಳಾಲ ನಿಕಟ ಸ್ಪರ್ಧಿ. ನಿಕಟ ಸ್ಪರ್ಧೆ ಯಲ್ಲಿ ಅನುಕ್ರಮವಾದ ಮತಗಳು
10,431 ಮತ್ತು 10,173. — ಮನೋಹರ ಪ್ರಸಾದ್