Advertisement
ಕಾರಹುಣ್ಣಿಮೆ ವೈಭವ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಬ್ರಹ್ಮಲಿಂಗೇಶ್ವರ ಕಾರಹುಣ್ಣಿಮೆ ಮಹೋತ್ಸವವು ಜೂ. 18ರಿಂದ 20ರ ವರೆಗೆ ಮೂರು ದಿನಗಳ ಕಾಲ ವಿಜೃಂಭಣೆ ಹಾಗೂ ಹಲವು ವಿಶಿಷ್ಟ ಸಂಪ್ರದಾಯಗಳ ಪ್ರಕಾರ ನಡೆಯಲಿದೆ.
Related Articles
Advertisement
ದೊಡ್ಡಬಂಡಿ: ಎರಡನೇ ದಿನವಾದ ಜೂ. 18ರಂದು ಬಂಡಿ ಓಟಕ್ಕಾಗಿ ರೈತರು ಬೆಳಗ್ಗೆಯಿಂದಲೇ ಎತ್ತು ಹಾಗೂ ಬಂಡಿಗಳಿಗೆ ಶೃಂಗರಿಸಿ ಸಿದ್ಧತೆ ಮಾಡಿಕೊಂಡಿರುತ್ತಾರೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಬಂಡಿ ಓಟ ರಾತ್ರಿ 8 ಗಂಟೆಯವರೆಗೂ ನಡೆಯುತ್ತದೆ. ವಿಶಿಷ್ಟ ವೇಷಗಳ ಮೂಲಕ ಗಮನಸೆಳೆದ ವೀರಗಾರರು, ಬಂಡಿಗಳನ್ನೇರಿ ಬಂಡಿ ಓಟಕ್ಕೆ ರಂಗು ಮೂಡಿಸುತ್ತಾರೆ.
ಬಂಡಿ ಓಟದ ಮುನ್ನ ಗ್ರಾಮದ ಆರಾಧ್ಯ ಬ್ರಹ್ಮಲಿಂಗೇಶ್ವರ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಸಿಂಗರಿಸಿದ ಎತ್ತುಗಳಿಗೆ ಹೂಡಿದ ಬಂಡಿಗಳನ್ನು ಗ್ರಾಮ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ನಡೆಯುವ ಬಂಡಿಯ ಓಟ ನೆರದ ಜನರನ್ನು ರೋಮಾಂಚಗೊಳಿಸುತ್ತದೆ.
ಗ್ರಾಮದ ವೀರಶೈವ ಸಮುದಾಯಕ್ಕೆ ಸೇರಿದ ಹೊಸಮನಿ ಹಾಗೂ ಕಾಮಣ್ಣನವರ ಕುಟುಂಬದಲ್ಲಿನ ತಲಾ ಏಳು ಜನ ಪುರುಷರು ಬಂಡಿ ಏರುತ್ತಾರೆ. ಹೀಗೆ ಬಂಡಿ ಏರುವ ಪುರುಷರು ವಿವಾಹಿತರಾಗಿರಬೇಕು. ಅಂಗವಿಕಲರಿರಬಾರದು, ವಿಧುರರಿರಬಾರದು ಎಂಬ ನಿಯಮ ಇದೆ. ಹೀಗೆ ಈ ಎರಡು ಕುಟುಂಬದ 14 ಸದಸ್ಯರು ಉಪವಾಸ ವ್ರತಾಚರಣೆ ಮಾಡಿದ ವೀರಗಾರರು ಸಂಪ್ರದಾಯದ ಉಡುಗೆ ತೊಟ್ಟು, ಮೈಗೆ ಗಂಧ ಲೇಪಿಸಿಕೊಂಡು, ಕೇದಿಗೆ ಬಾಸಿಂಗ್ ಕಟ್ಟಿಕೊಂಡು ಗ್ರಾಮದ ಬ್ರಹ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಂಡಿ ಓಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ವೀರಗಾರರ ಕರ್ತವ್ಯ ಮಾತ್ರ ವಂಶ ಪರಂಪರಗತವಾಗಿದೆ.
ಕರಕ್ಕಿ ಬಂಡಿ: ಇದಾದ ನಂತರ ಮೂರನೇ ದಿನ ಜೂ. 20ರಂದು ಕರಕ್ಕಿ ಬಂಡಿ ಹಬ್ಬ ನಡೆಯುತ್ತದೆ. ಈ ಬಂಡಿಗೆ ಬುಧವಾರ ಹುಟ್ಟಿದ ಕರುವನ್ನು ಹೂಡುವುದು ಇಲ್ಲಿನ ವಿಶೇಷ. ಈ ಕಾರ್ಯಕ್ರಮ ಅಂದು ಬೆಳಗ್ಗೆ 10ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆ ವರೆಗೂ ನಡೆಯುತ್ತದೆ. ಒಟ್ಟಾರೆ ಕರ್ಜಗಿ ಗ್ರಾಮದಲ್ಲಿ ನಡೆಯುವ ಕಾರ ಹುಣ್ಣಿಮೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತದೆ.
ಒಟ್ಟಾರೆ ಮೂರು ದಿನಗಳ ಕಾಲ ಕರ್ಜಗಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಮಹೋತ್ಸವನ್ನು ಅದ್ಧೂರಿಯಾಗಿ, ಸಂಪ್ರದಾಯಗಳೊಂದಿಗೆ ಆಚರಿಸುತ್ತಾರೆ. ಜಿಲ್ಲೆಯ ವಿವಿಧೆಡೆಗಳಿಂದ ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
•ಎಚ್.ಕೆ. ನಟರಾಜ