ಬೆಂಗಳೂರು: ಸರಕಾರಿ ಹುದ್ದೆಗಳ ನೇರ ನೇಮಕಾತಿಗಳಲ್ಲಿ ಅಂಗವಿಕಲರಿಗೆ ಎ ಮತ್ತು ಬಿ ಸಮೂಹದ ಹುದ್ದೆಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ.
ರಾಜ್ಯದ ಸಿವಿಲ್ ಸೇವೆಗಳ ‘ಎ’ ಮತ್ತು ‘ಬಿ’ ಸಮೂಹದ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಗಳಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಹಿಂದೆ ಶೇ. 3ರಷ್ಟು ಇದ್ದ ಮೀಸಲಾತಿಯನ್ನು ಶೇ. 4ಕ್ಕೆ ಹೆಚ್ಚಿಸಲು ರಾಜ್ಯ ಸರಕಾರ ಅಂತಿಮ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಈ ಸಂಬಂಧ ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು-1977 ಮತ್ತು ಅಂಗವಿಕಲರ ಹಕ್ಕುಗಳ ಕಾಯ್ದೆ-2016ರ ಮೀಸಲಾತಿ ಪ್ರಮಾಣ ಮತ್ತು ಅಂಗವೈಕಲ್ಯ ಪ್ರಮಾಣಕ್ಕೆ ಸಂಬಂಧಿಸಿದ ತಿದ್ದುಪಡಿಗಳನ್ನು ಸೇರಿಸಿ ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು-2020 ಅನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ರಾಜ್ಯ ಸರಕಾರಿ ಸೇವೆಗಳಲ್ಲಿ ನೇರ ನೇಮಕಾತಿ ಯಲ್ಲಿ ಮೀಸಲಾತಿ ಪ್ರಮಾಣ ಮತ್ತು ಅದಕ್ಕಾಗಿ ಅನುಸರಿಸಬೇಕಾದ ರೋಸ್ಟರ್ ನಿಗದಿಪಡಿಸಿ 1995ರಲ್ಲಿ ಆದೇಶ ಹೊರಡಿಸಲಾಗಿತ್ತು. ಅದರಂತೆ ಸಿ ಮತ್ತು ಡಿ ಸಮೂಹದ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇ. 5ರಷ್ಟು ಸಮತಲ ಮೀಸಲಾತಿ ಕಲ್ಪಿಸಲಾಯಿತು.
ಬಳಿಕ 2005ರ ಅಧಿಸೂಚನೆಯಲ್ಲಿ ಎ ಮತ್ತು ಬಿ ಸಮೂಹದ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇ. 3ರಷ್ಟು ಮೀಸಲಾತಿ ಕಲ್ಪಿಸಲಾಯಿತು. ಈ ಮೀಸಲಾತಿ ಹೆಚ್ಚಿಸಬೇಕು ಎಂಬ ಕೂಗು ಆಗಿನಿಂದಲೇ ಕೇಳಿಬರುತ್ತಿತ್ತು.