Advertisement
ವಿಜಯಪುರದಿಂದ ಕಲಬುರ್ಗಿ ಕಡೆಗೆ ಪಯಣಿಸುವಾಗ ಸಿಗುವ ಐನಾಪುರ ಕ್ರಾಸ್‌ನಿಂದ ಐನಾಪುರ ಗ್ರಾಮದೊಳಗೆ ಒಂದು ಕಿ. ಮೀ ಕ್ರಮಿಸಿದರೆ ಆ ರಸ್ತೆ ನಿಮ್ಮನ್ನು ನೇರವಾಗಿ ಸ್ಮಾರಕವೊಂದರ ಎದುರು ಕರೆದೊಯ್ದು ನಿಲ್ಲಿಸುತ್ತದೆ. ಗ್ರಾಮಸ್ಥರಿಂದ ಶಾಹಿಬೇಗಂ ಸ್ಮಾರಕ ಎಂದು ಕರೆಸಿಕೊಳ್ಳುವ ಈ ಸ್ಮಾರಕ ರಾಣಿಯ ಸಮಾಧಿ ಸ್ಥಳ. ಇದು ಹಲವು ರೋಚಕ ಸಂಗತಿಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ವಿಶ್ವ ಪ್ರಸಿದ್ಧ ಗೋಲಗುಮ್ಮಟದ ನಾಲ್ಕು ಮೂಲೆಗಳಲ್ಲಿರುವ ಗೋಪುರಗಳ ಅಸ್ತಿಪಂಜರದಂತಿರುವ ಈ ಸ್ಮಾರಕ, ಮೇಲ್ನೋಟಕ್ಕೆ ನಗರದಲ್ಲೇ ಇರುವ ಮತ್ತೂಂದು ಅಪೂರ್ಣ ಸ್ಮಾರಕ ಬಾರಾಕಮಾನ್‌ನ ಮಾದರಿಯನ್ನು ನೆನಪಿಸುತ್ತದೆ. ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿದ್ದರೂ, ಸ್ಮಾರಕ ಕುರಿತ ಸಮಗ್ರ ಮಾಹಿತಿ ಈ ಇಲಾಖೆಯಲ್ಲಿಲ್ಲ. ಇತಿಹಾಸ ಸಂಶೋಧಕರ ಅನಾದರದಿಂದ ಜಿಲ್ಲೆಯಲ್ಲಿರುವ ಹಲವು ಸ್ಮಾರಕಗಳಂತೆ ಇದೂ ಅನಾಮಧೇಯವಾಗಿಯೇ ಉಳಿದಿದೆ.
Related Articles
Advertisement
ಈಡೇರದ ಮಹದಾಸೆ:
ತನ್ನ ಪತಿ ವಿಶಿಷ್ಟ ವಿನ್ಯಾಸದ ಗೋಲಗುಮ್ಮಟ ನಿರ್ಮಾಣಕ್ಕೆ ಮುಂದಾದಾಗ ಜಹಾನಬೇಗಂ ಸಹ 1650ರ ಸುಮಾರಿಗೆ ಅದೇ ಮಾದರಿಯ ಸ್ಮಾರಕ ನಿರ್ಮಿಸಲು ಮುಂದಾಗಿದ್ದಳು. ಆದರೆ ಅಷ್ಟರಲ್ಲೇ ಆಕೆ ಕಾಲವಾದ ಕಾರಣ ಅದು ಅಪೂರ್ಣವಾಗಿಯೇ ಉಳಿಯಿತು ಎನ್ನಲಾಗುತ್ತದೆ. ಈ ಸ್ಮಾರಕದಲ್ಲೇ ಜಹಾನಬೇಗಂ ಸಮಾಧಿ ಇದೆ. ಅದರ ಜೊತೆಗಿರುವ ಇತರೆ ನಾಲ್ಕು ಸಣ್ಣ ಸಮಾಧಿಗಳು ಆಕೆಯ ಕುಟುಂಬ ಸದಸ್ಯರ ಸಮಾಧಿಗಳು ಎನ್ನಲಾಗಿದೆ. ಸ್ಥಳೀಯ ಕರಿಯ ಹಾಗೂ ಒರಟು ಕಲ್ಲುಗಳನ್ನೇ ಬಳಸಿ ಇಡೀ ಕಟ್ಟಡ ನಿರ್ಮಿಸಲಾಗಿದೆ. ಸದರಿ ಸ್ಮಾರಕದ ಪರಿಸರದಲ್ಲಿಯೇ 3 ಕಮಾನಿನ 4 ಮಿನಾರುಗಳ ಮಸೀದಿಯೂ ಇದೆ.
ಅಪೂರ್ವ ವಾಸ್ತುಶಿಲ್ಪ:
ಜಹಾನಬೇಗಂ ಸ್ಮಾರಕ 3ರ ಗುಣಾಕಾರ, 6ರ ಲೆಕ್ಕಾಚಾರ, 12ರ ವೈಶಿಷ್ಟéತೆಯ ವಾಸ್ತು ವಿನ್ಯಾಸ ಹೊಂದಿದೆ. ಹೀಗಾಗಿಯೇ ಈ ಸ್ಮಾರಕ ಸಂಶೋಧಕರು ಮತ್ತು ಇತಿಹಾಸದ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಹಲವು ಆಕರವನ್ನು ತೆರೆದಿಡಲಿದೆ. ಹೊರನೋಟದಲ್ಲಿ ಚೌಕಾಕಾರದಲ್ಲಿರುವ ಈ ಸ್ಮಾರಕದ ನಾಲ್ಕೂ ದಿಕ್ಕಿನಲ್ಲಿ ಮೇಲೆ ಏರಲು ಸಾಧ್ಯವಿರುವ 4 ಗೋಪುರಗಳಿವೆ. ಗೋಪುರಗಳ ಪ್ರತಿ ಬುನಾದಿಯ ಮೇಲ್ಭಾಗದಲ್ಲಿ 5 ಕಡೆಗಳಲ್ಲಿ 6 ಹೂವಿನ ಚಿತ್ರಗಳನ್ನು ಕೆತ್ತಲಾಗಿದೆ. ಎರಡು ಕಡೆ 7 ಚಿತ್ತಾರಗಳ ಕುಸುರಿ ಕೆಲಸ ಮಾಡಿದ್ದಾರೆ. ಇದರಲ್ಲಿ 7 ಚಿತ್ತಾರಗಳಿರುವ ಭಾಗದಲ್ಲಿ 2-3 ಕಡೆಗಳಲ್ಲಿ ಅಪೂರ್ಣ ಚಿತ್ರಗಳಿವೆ.
ಸ್ಮಾರಕದ ಮೇಲ್ಭಾವಣಿಯಲ್ಲಿ ನೆಲ ಮಾಳಿಗೆಯಲ್ಲಿರುವ ಸಮಾಧಿಗಳಿಗೆ ಬೆಳಕಿನ ವ್ಯವಸ್ಥೆಗಾಗಿ 4 ದಿಕ್ಕಿಗೆ ತಲಾ 3ರಂತೆ 12 ಬೆಳಕಿಂಡಿಗಳ ಕಲ್ಲಿನಲ್ಲಿ ಕೆತ್ತಿನ ಜಾಲರಿ ಮಾಡಲಾಗಿದೆ. ಪ್ರತಿ ಬೆಳಕಿಂಡಿಯ ಜಾಲರಿಯಲ್ಲಿ ಉದ್ದ-ಅಗಲವಾಗಿ ತಲಾ 6 ಕಿಂಡಿಗಳ ಒಟ್ಟು 36 ಜಾಲರಿಯ ಕಲ್ಲಿನಲ್ಲಿ ಕೆತ್ತಿರುವ ಬೆಳಕಿಂಡಿಗಳಿವೆ. ಪ್ರತಿ ದಿಕ್ಕಿನಿಂದಲೂ ವ್ಯವಸ್ಥಿತವಾಗಿ ಗಾಳಿ-ಬೆಳಕು ನೆಲಮಾಳಿಗೆಗೆ ಸುಲಭವಾಗಿ ಬೀಳುವಂತೆ ಮಾಡಿರುವುದು ವಾಸ್ತುಶಿಲ್ಪಿಯ ಚಾಣಾಕ್ಷತೆಗೆ ಸಾಕ್ಷಿ ಹೇಳುತ್ತದೆ.
ನೆಲ ಮಾಳಿಗೆಯಲ್ಲಿ ಹೊರ ಗೋಡೆಯಲ್ಲದೇ ವಿಶಾಲ ಮೇಲ್ಛಾವಣಿಗೆ ಆಸರೆಯಾಗಿ ಒಳ ಭಾಗದಲ್ಲಿ 4 ದಿಕ್ಕುಗಳಲ್ಲಿ ತಲಾ 3ರಂತೆ ಕಮಾನು ಸಹಿತ ಗೋಡೆಗಳನ್ನು ನಿರ್ಮಿಸಲಾಗಿದೆ. ಇಷ್ಟೆಲ್ಲ ವಿಶಿಷ್ಟ ಹಾಗೂ ಅಪರೂಪದ ವಾಸ್ತು ವಿನ್ಯಾಸ ಹೊಂದಿದ್ದರೂ ಪಟ್ಟದರಾಣಿ ಜಹಾನ ಬೇಗಂಳ ಸಮಾಧಿ ಸ್ಥಳವಾಗಿದ್ದರ ಬಗ್ಗೆ ಹೆಚ್ಚಿನ ದಾಖಲೆಗಳು, ಐತಿಹಾಸಿಕ ಸಂಗತಿಗಳು ನಿಖರವಾಗಿ ಲಭ್ಯವಾಗುತ್ತಿಲ್ಲ. ಈ ಸ್ಮಾರಕದ ಕುರಿತು ಇತಿಹಾಸ ತಜ್ಞರು, ಸಂಶೋಧಕರು ಇನ್ನಾದರೂ ಬೆಳಕು ಚೆಲ್ಲಬೇಕಿದೆ.
ಕಮಾನುಗಳ ಲೋಕದಲ್ಲಿ…ಪ್ರತಿ ಗೋಪುರವೂ 4 ಅಂತಸ್ತುಗಳನ್ನು ಹೊಂದಿವೆ. ಪ್ರತಿ ಗೋಪುರದ ಮೇಲ್ಛಾವಣಿಯ ಸುತ್ತಲೂ ಇರುವ 4 ಗೋಪುರಗಳಲ್ಲಿ ಪ್ರತಿ ಸಾಲಿನಲ್ಲಿ ಒಟ್ಟು ಅಡ್ಡಲಾಗಿ 6 ಹಾಗೂ ಎತ್ತರವಾಗಿ 4 ಕಮಾನುಗಳಿವೆ. ಯಾವುದೇ ದಿಕ್ಕಿನಿಂದ ನೋಡಿದರೂ ಅಡ್ಡಲಾಗಿ 3 ಹಾಗೂ ಎತ್ತರವಾಗಿ 4 ಕಮಾನುಗಳಂತೆ 3ರಿಂದ 4ರ ಗುಣಿತದ ಲೆಕ್ಕದಲ್ಲಿ ಒಟ್ಟು 12 ಕಮಾನುಗಳು ಮಾತ್ರ ಗೋಚರಿಸುವಂತೆ ನಿರ್ಮಿಸಿರುವುದು ಈ ಸ್ಮಾರಕದ ವೈಶಿಷ್ಟ್ಯ