ಕನಕಪುರ: ನಗರದ ಹಲವು ದೇವಾಲಯಗಳಲ್ಲಿ ಕಡೆಯ ಶ್ರಾವಣ ಶನಿವಾರ ವಿಶೇಷ ಪೂಜೆ ನಡೆಯಿತು.
ಕಡೆಯ ಶ್ರಾವಣ ಶನಿವಾರದ ಅಂಗವಾಗಿ ಚಿಕ್ಕ ತಿರುಪತಿ ಕಲ್ಲಹಳ್ಳಿ ಶ್ರೀವೆಂಕಟರಮಣ ಸ್ವಾಮಿ ದೇವಾಲಯ, ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿ ಕೊಂಡತ್ತಿರುವ ಶನಿ ಮಹಾತ್ಮ ದೇವಾಲಯ, ನಗರದ ಬಾಣಂತಮಾರಮ್ಮ ದೇವಾಲಯ, ಕೋಟೆ ಕಿಲ್ಲೆ ರಂಗನಾಥಸ್ವಾಮಿ ದೇವಾಲಯ, ಕೆಎನ್‌ಎಸ್ ವೃತ್ತದ ಪೇಜಾವರ ಮಠದ ದೇವಾಲಯಗಳಲ್ಲಿ ನೂರಾರು ಭಕ್ತಾದಿಗಳು ಬೆಳಗ್ಗೆಯಿಂದಲೇ ಪೂಜೆ ಸಲ್ಲಿಸಿದರು.
ಕಲ್ಲಹಳ್ಳಿಯ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ಶ್ರೀ ಶ್ರೀನಿವಾಸನಿಗೆ ವಿಶೇಷವಾಗಿ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕ್ಷೀರಾಭಿಷೇಕ, ತಿರುಮಂಜನ, ನಿತ್ಯಾರಾಧನೆ, ಪಂಚಾಮೃತ ಅಭಿಷೇಕಗಳು ನಡೆದವು. ನಂತರ ಪುಷ್ಪಾರ್ಚನೆ 5 ಗಂಟೆಗೆ ಮೊದಲ ಮಹಾಮಂಗಳಾರತಿ ನಡೆಯಿತು.
ದೇಗುಲದಲ್ಲಿ ಜನಜಂಗುಳಿ: ಕಲ್ಲಹಳ್ಳಿ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಜನಜಂಗುಳಿ ತುಂಬಿತ್ತು. ಸಾವಿರಾರು ಭಕ್ತರು ನಾಮುಂದು ತಾಮುಂದು ಎಂದು ಸರತಿ ಸಾಲಿನಲ್ಲಿ ನಿಂತು ಪೂಜೆಸಲ್ಲಿಸಿ, ದರ್ಶನ ಪಡೆದರು. ಶ್ರಾವಣ ಶನಿವಾರದಲ್ಲಿ ಭಕ್ತರು ಹರಕೆ ತೀರಿಸಿದರೆ, ಶ್ರೀನಿವಾಸ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬುದು ಜನರ ನಂಬಿಕೆ. ಭಕ್ತಾದಿಗಳು ಉತ್ಸವ ಮೂರ್ತಿ ಹೊತ್ತು ದೇವಾಲಯ ಪ್ರದಕ್ಷಿಣೆ ಹಾಕಿ ಹರಕೆ ಸಲ್ಲಿಸಿದರು.
ಶ್ರೀನಿವಾಸನಿಗೆ ಶ್ರಾವಣ ಶನಿವಾರ ಶ್ರೇಷ್ಟ: ಈ ಸಂದರ್ಭದಲ್ಲಿ ಅರ್ಚಕ ಯತಿರಾಜು ಸಂಪತ್‌ಕುಮಾರ್ ಮಾತನಾಡಿ, ಶ್ರೀನಿವಾಸನಿಗೆ ಶ್ರಾವಣ ಶನಿವಾರ ಬಹಳ ಶ್ರೇಷ್ಟವಾಗಿದೆ. ಈ ದಿನದಂದು ವೈಷ್ಣವ ದೇವಾಲಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತವೆ. ನಾಲ್ಕನೆ ಶ್ರಾವಣ ಶನಿವಾರ ಭಕ್ತರು ಹೆಚ್ಚು ಸೇರುವುದರಿಂದ ಅಭಿಷೇಕ, ಹೋಮ ಹವನಗಳನ್ನು ನೆರವೇರಿಸಲಾಯಿತು. ಅಲಂಕಾರ ಪ್ರಿಯ ಶ್ರೀನಿವಾಸನಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಹರಕೆ ಒತ್ತ ಭಕ್ತಾದಿಗಳು ಲಡ್ಡು ಪ್ರಸಾದ ವಿನಿಯೋಗ ಮಾಡಿದರು ಎಂದು ತಿಳಿಸಿದರು.