Advertisement

ರಾಜ್ಯದ ವಿವಿಧೆಡೆ ಬಿಜೆಪಿ ಪರ ವಿಶೇಷ ಪೂಜೆ

11:36 PM Jul 17, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ರಾಜ್ಯದ ಹಲವೆಡೆ ಬುಧವಾರ ಹೋಮ, ಹವನ, ವಿಶೇಷ ಪೂಜೆಗಳು ನಡೆದವು.

Advertisement

ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಅರ್ಚಕರ ಸಂಘದ ವತಿಯಿಂದ ವಿಶೇಷ ಪೂಜೆ, ಜಯಾದಿ ಹೋಮ-ಹವನ ನಡೆಸಲಾಯಿತು. ಅರ್ಚಕರ ಸಂಘದ ಅಧ್ಯಕ್ಷ ಎಚ್‌.ಜಿ.ನಾಗರಾಜ್‌ ಶಾಸ್ತ್ರಿ ಅವರ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚು ಅರ್ಚಕರು ಪೂಜೆ ಹಾಗೂ ಹವನ ನಡೆಸಿದರು. ಪೂಜೆಯಲ್ಲಿ ಬಿಎಸ್‌ವೈ ಪುತ್ರಿ ಎಸ್‌.ವೈ.ಅರುಣಾದೇವಿ, ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದರು.

ಬಿಎಸ್‌ವೈ ಸೋದರಿ ಪುತ್ರನಿಂದ ಪೂಜೆ: ಯಡಿಯೂರಪ್ಪ ಅವರು, ಮತ್ತೆ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಬಿಎಸ್‌ವೈ ಸಹೋದರಿಯ ಪುತ್ರ ರಾಜೇಶ್‌ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಜರ್‌ಬಾದ್‌ನ ಶ್ರೀಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ರಾಜೇಶ್‌, ರಾಜ್ಯಕ್ಕೆ ಹಿಡಿದಿರುವ ಗ್ರಹಣ ತೊಲಗಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಇದೇ ವೇಳೆ, ಬಿಎಸ್‌ವೈ ಅಭಿಮಾನಿಗಳು ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ವಿಜಯದುರ್ಗ ಹೋಮ ನಡೆಸಿದ ಅಭಿಮಾನಿಗಳು, ಗುರುವಾರ ನಡೆಯುವ ವಿಶ್ವಾಸಮತ ಯಾಚನೆ ಬಿಜೆಪಿಗೆ ವರದಾನವಾಗಲಿ, ರೈತ ನಾಯಕ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿದರು.

ಬೂಕನಕೆರೆ ಗೋಗಲಮ್ಮನಿಗೆ ವಿಶೇಷ ಪೂಜೆ: ಮಂಡ್ಯ ಜಿಲ್ಲೆ ಬೂಕನಕೆರೆಯಲ್ಲಿ ಗ್ರಾಮಸ್ಥರು ಗ್ರಾಮದೇವತೆ ಶ್ರೀ ಗೋಗಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಡಿಯೂರಪ್ಪ ಸಹೋದರಿ ಪ್ರೇಮಮ್ಮ ನೇತೃತ್ವದಲ್ಲಿ ಗ್ರಾಮಸ್ಥರು ಗೋಗಾಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನ ನೆರವೇರಿಸಿದರು.

Advertisement

ಮೈಸೂರು ಮೂಲದ ಶಶಿಧರ್‌ ನೇತೃತ್ವದ ಐವರ ಅರ್ಚಕರ ತಂಡದಿಂದ ಗಣಪತಿ ಹೋಮ, ನವಗ್ರಹ ಹೋಮ, ಶತ್ರುಬಾಧೆ ನಿವಾರಣೆ, ಅಧಿಕಾರ ಪ್ರಾಪ್ತಿಗಾಗಿ ಸುದರ್ಶನ ಹೋಮ, ಯಶಸ್ಸು ಮತ್ತು ಜಯ ಹಾಗೂ ಲೋಕ ಕಲ್ಯಾಣಾಕ್ಕಾಗಿ ದುರ್ಗಾ ಹೋಮ ನೆರವೇರಿಸಲಾಯಿತು.

ಗವಿಠದಲ್ಲೂ ವಿಶೇಷ ಪೂಜೆ: ಯಡಿಯೂರಪ್ಪ ಮನೆ ದೇವರಾದ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಸಹೋದರಿ ಪ್ರೇಮಾ, ಸೋದರಳಿಯ ಸಿಂಧುಘಟ್ಟ ಅಶೋಕ್‌, ಸೊಸೆ ಸಂಧ್ಯಾರಾಣಿ ಹಾಗೂ ಪಕ್ಷದ ಮುಖಂಡರು, ಯಡಿಯೂರಪ್ಪ ಅಭಿಮಾನಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಎಲ್ಲರ ಅಭಿಲಾಷೆಯಂತೆ, ದೈವಬಲದ ಮೂಲಕ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಅಭಿವೃದ್ಧಿಯಲ್ಲಿ ರಾಜ್ಯ ನಂ.1 ಆಗಬೇಕು ಎಂಬುದು ರಾಜ್ಯದ ಜನರ ಇಚ್ಛೆಯಾಗಿದೆ. ಜನತೆಗೆ ಒಳ್ಳೆಯದಾಗಲು ಅವರು ಮತ್ತೂಮ್ಮೆ ಸಿಎಂ ಆಗುವುದು ಖಚಿತ.
-ಎಸ್‌.ವೈ.ಅರುಣಾದೇವಿ, ಬಿಎಸ್‌ವೈ ಪುತ್ರಿ

Advertisement

Udayavani is now on Telegram. Click here to join our channel and stay updated with the latest news.

Next