ಪಿರಿಯಾಪಟ್ಟಣ: ಚಿತ್ರನಟ ಕ್ರೇಜಿಸ್ಟಾರ್ ಡಾ.ವಿ ರವಿಚಂದ್ರನ್ ಅವರು ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ರವಿ ಬೋಪಣ್ಣ ಚಿತ್ರ ತೆರೆ ಕಂಡ ಹಿನ್ನೆಲೆ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ವತಿಯಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗೆ ಪ್ರಾರ್ಥಿಸಲಾಯಿತು.
ಪಟ್ಟಣದ ಶಕ್ತಿ ದೇವತೆಗಳಾದ ಶ್ರೀಮಸಣೀಕಮ್ಮ ಹಾಗೂ ಶ್ರೀ ಕನ್ನಂಬಾಡಿ ಅಮ್ಮನವರ ದೇವಾಲಯದ ಗರ್ಭ ಗುಡಿಯಲ್ಲಿ ಚಿತ್ರದ ಪೋಸ್ಟರ್ ಇಟ್ಟು ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಯಿತು.
ನಮ್ಮೂರ ಕೋಗಿಲೆ ಕಾರ್ಯಕ್ರಮದ ಆಯೋಜಕಿ ಶಿಕ್ಷಕಿ ಬಿಂದು ಮಂಜುನಾಥ್ ಮಾತನಾಡಿ, ತಮ್ಮದೇ ವಿಶೇಷ ಶೈಲಿಯಲ್ಲಿ ಚಿತ್ರ ನಿರ್ಮಿಸುವಲ್ಲಿ ಕ್ರೇಜಿಸ್ಟಾರ್ ಅವರು ಮೊದಲಿಗರು, ವಿಶೇಷ ಸಂದೇಶವಿರುವ ರವಿ ಬೋಪಣ್ಣ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಈಶ್ವರಿ ಸಿನಿಮಾ ಸಂಸ್ಥೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆ ಕ್ರೇಜಿಸ್ಟಾರ್ ಅವರ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ರವಿ ಬೋಪಣ್ಣ ಚಿತ್ರ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಲಿ ಎಂದು ಸಿನಿ ಪ್ರಿಯರೆಲ್ಲರೂ ಪ್ರಾರ್ಥಿಸಿದ್ದೇವೆ ಎಂದು ಶುಭಕೋರಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್ ಕಾಂತರಾಜು ಮಾತನಾಡಿ, ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಯಾವುದೇ ಚಿತ್ರಗಳನ್ನು ನಿರ್ಮಿಸಿದರು ವಿಶೇಷ ಸಂದೇಶವಿರುತ್ತದೆ ಅಂತೆಯೇ ರವಿ ಬೋಪಣ್ಣ ಚಿತ್ರ ಸಹ ಸಾಮಾಜಿಕ ಸಂದೇಶದಿಂದ ಕೂಡಿದ ಚಿತ್ರವಾಗಿದ್ದು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ವಕೀಲೆ ಮಂಜುಳಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಮಂಜು, ಪದಾಧಿಕಾರಿ ಮಕ್ಸೂದ್, ಶಿಕ್ಷಕ ಉಮೇಶ್, ಮುಖಂಡರಾದ ಅಬ್ದುಲ್ ವಾಜಿದ್, ಮೋಹನ್, ಆಯತನಹಳ್ಳಿ ಮಂಜು, ಪತ್ರಕರ್ತರಾದ ಪಿ.ಎಸ್ ವೀರೇಶ್, ಪಿ.ಎನ್. ದೇವೆಗೌಡ, ರಾಜೇಶ್ ಎಂ ರಾವ್ ಇದ್ದರು.