ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹತ್ತು ಹಾಸಿಗೆಗಳ ವಿಶೇಷ ಕೊಠಡಿ ಮೀಸಲಿಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ಸಾಂಕ್ರಾಮಿಕ ರೋಗದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕೊರೊನಾ ವೈರಸ್ ಕಂಡು ಬಂದಿಲ್ಲ. ಆದರೂ ದೇಶದ ವಿವಿಧೆಡೆ ಕೊರೊನಾ ಸೋಂಕು ಹರಡುತ್ತಿರುವುದರಿಂದ ಅದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸಿದ್ಧವಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ತಂಡವನ್ನು ರಚಿಸಿದ್ದು ಈ ತಂಡ ಎಂಟು ಗಂಟೆಗಳಂತೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದೆ ಎಂದರು. ಕೊರೊನಾ ಸೋಂಕು ಮಕ್ಕಳಿಗೆ ಹರಡದಂತೆ ಶಾಲಾ ಶಿಕ್ಷಕರು ಮುಂಜಾಗ್ರತೆ ವಹಿಸಬೇಕು. ಶೀತ, ಜ್ವರದಿಂದ ಬಳಲುವ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು ಎಂದರು.
ವಿಶೇಷ ಆ್ಯಂಬುಲೆನ್ಸ್ : ಈ ರೋಗದ ಲಕ್ಷಣಗಳ ಬಗ್ಗೆ ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದರೆ ಅವರನ್ನು ಕರೆತರಲು ಆ್ಯಂಬುಲೆನ್ಸ್ ಸಿದ್ಧವಾಗಿದೆ. ರೋಗದ ಲಕ್ಷಣ ವಿರುವ ವ್ಯಕ್ತಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾದರೆ ಅವರಿಗೆ ಚಿಕಿತ್ಸೆ ನೀಡಿ ರಕ್ಷದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸ ಲಾಗುವುದು ಎಂದರು.
ಜಾಗ್ರತೆ ಅಗತ್ಯ: ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗದಿದ್ದರೂ ನಾವು ಎಚ್ಚರಿಕೆಯಿಂದ ಇರಬೇಕು. ಒಂದು ಪ್ರಕರಣ ದಾಖಲಾದರೂ ಸಹ ಇಡೀ ಜಿಲ್ಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸ ಬೇಕಾಗುತ್ತದೆ. ಆದ್ದರಿಂದ ಆರೋಗ್ಯ ಇಲಾಖೆ , ಶಿಕ್ಷಣ ಇಲಾಖೆ ಮತ್ತು ಪುರಸಭೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಇಲಾಖೆ ಅಧಿಕಾರಿ ಕೆ.ಟಿ.ಸೌಭಾಗ್ಯ ಮಾತನಾಡಿ, ಪಟ್ಟಣದ ಕೆಲವು ಮೆಡಿಕಲ್ ಸ್ಟೋರ್ ಗಳು ದುಪ್ಪಟು ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದೆ ಎಂಬ ದೂರು ಇದೆ. ಆದ್ದರಿಂದ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಮೆಡಿಕಲ್ ನ್ಪೋರ್ ಗಳಿಗೆ ಎಚ್ಚರಿಕೆ ನೀಡಿ ಎಂಆರ್‌ಪಿ ಬೆಲೆಗೆ ಮಾರಾಟ ಮಾಡುವಂತೆ ಎಚ್ಚರಿಕೆ ನೀಡಬೇಕೆಂದರು. ಸಾರ್ವಜನಿಕ ಅಸ್ಪತ್ರೆಯ ವೈದ್ಯಾಧಿಕಾರಿ ಟಿ.ಎಸ್. ಲಕ್ಷ್ಮೀಕಾಂತ್, ಅಕ್ಷರದಾಸೋಹದ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಪ್ರಭು, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಸಿದ್ಲಿಂಗು, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.