Advertisement

ಉಪ್ಪಿಟ್ಟಿಗಿಂತ ರುಚಿ ಬೇರೆ ಇಲ್ಲ!

01:00 PM Apr 18, 2019 | Hari Prasad |

ಇವತ್ತು ಉಪ್ಪಿಟ್ಟು ಅಂತ ಅಮ್ಮ ಘೋಷಿಸಿದಾಗ, “ಅಯ್ಯೋ, ಉಪ್ಪಿಟ್ಟಾ’ ಎಂದು ಮೂಗು ಮುರಿಯುವವರಿಗೆ, ವೈವಿಧ್ಯಮಯವಾಗಿ ತಯಾರಿಸಿದ ಉಪ್ಪಿಟ್ಟಿನ ರುಚಿಯೇ ಸರಿಯಾದ ಉತ್ತರ ನೀಡುತ್ತದೆ. ಮಹಿಳೆಯರ ಆಪತ್ಭಾಂಧವ ಈ ಉಪ್ಪಿಟ್ಟು ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿ, ರಾತ್ರಿ ಅಡುಗೆ ಸ್ವಲ್ಪ ಕಡಿಮೆ ಅನ್ನಿಸಲಿ, ಆಗೆಲ್ಲಾ ಥಟ್ಟನೆ ಕೈ ಹಿಡಿಯುವುದು ಉಪ್ಪಿಟ್ಟೇ. ಕನಿಷ್ಠ ಸಾಮಗ್ರಿಗಳಿಂದ, ಅತಿ ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಉಪ್ಪಿಟ್ಟಿನಲ್ಲಿಯೂ ವೈವಿಧ್ಯಗಳಿವೆ. ಅಂಥ ಕೆಲವು ಉಪ್ಪಿಟ್ಟು ರೆಸಿಪಿ ಇಲ್ಲಿದೆ…

Advertisement

ಬ್ರೆಡ್‌ ಕ್ಯೂಬ್ಸ್ ಉಪ್ಪಿಟ್ಟು


ಬೇಕಾಗುವ ಸಾಮಗ್ರಿ: ಬ್ರೆಡ್‌ ಕ್ಯೂಬ್ಸ್ (ಬ್ರೆಡ್‌ ನ‌ ಕಂದು ಭಾಗ ತೆಗೆದು, ಮಧ್ಯಭಾಗವನ್ನು ಸಣ್ಣ ಸಣ್ಣ ಘನಾಕೃತಿಗಳಾಗಿ ಕತ್ತರಿಸಿದ್ದು)- 1 ಕಪ್‌, ಒಗ್ಗರಣೆಗೆ ತುಪ್ಪ, ಸಾಸಿವೆ, ಉದ್ದಿನಬೇಳೆ, ಒಣಮೆಣಸಿನ ತುಂಡು- 4, ಸಕ್ಕರೆ- 1 ಚಮಚ, ಸ್ವಲ್ಪ ಉಪ್ಪು.

ಮಾಡುವ ವಿಧಾನ: ಒಗ್ಗರಣೆಗೆ ತುಪ್ಪ ಹಾಕಿ, ಅದು ಬಿಸಿಯಾಗುತ್ತಲೆ ಸಾಸಿವೆ ಸಿಡಿಸಿ, ಉದ್ದಿನಬೇಳೆ, ಒಣಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಬ್ರೆಡ್‌ ತುಂಡುಗಳನ್ನು ಹಾಕಿ ಸಕ್ಕರೆ, ಉಪ್ಪು ಬೆರೆಸಿ ಚೆನ್ನಾಗಿ ಬಾಡಿಸಿ. ಬ್ರೆಡ್‌ ತುಂಡುಗಳು ಹೊಂಬಣ್ಣಕ್ಕೆ ಬರುವಾಗ ಉರಿ ನಂದಿಸಿ. ಈ ಉಪ್ಪಿಟ್ಟನ್ನು ಬಿಸಿಯಿದ್ದಾಗ ಸವಿದರೇ ರುಚಿ.

ತರಕಾರಿ ಉಪ್ಪಿಟ್ಟು


ಬೇಕಾಗುವ ಸಾಮಗ್ರಿ: ಉಪ್ಪಿಟ್ಟು (ಮೀಡಿಯಮ…) ರವೆ- ಒಂದು ಕಪ್‌, ಸಣ್ಣಗೆ ಹೆಚ್ಚಿದ ಈರುಳ್ಳಿ- 1, ಟೊಮೇಟೊ,ಆಲೂಗಡ್ಡೆ-ಮುಕ್ಕಾಲು ಕಪ್‌, ಹಸಿ ಮೆಣಸು- 4, ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಇಂಗು, ಕರಿಬೇವಿನ ಎಸಳು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಹಸಿ ವಾಸನೆ ಹೋಗುವವರೆಗೆ ರವೆಯನ್ನು ಹುರಿದು, ತೆಗೆದಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನಬೇಳೆಯನ್ನು ಹೊಂಬಣ್ಣಬರುವವರೆಗೆ ಹುರಿದು, ಹಸಿ ಮೆಣಸು, ಕರಿಬೇವಿನ ಎಸಳು, ಚಿಟಿಕೆ ಇಂಗು ಹಾಕಿ ಒಂದು ನಿಮಿಷ ಬಾಡಿಸಿ. ಹೆಚ್ಚಿಟ್ಟುಕೊಂಡ ತರಕಾರಿಯನ್ನು ಒಗ್ಗರಣೆಗೆ ಹಾಕಿ ಐದು ನಿಮಿಷ ಹುರಿದು, ರವೆಯ ಅಳತೆಗೆ ಎರಡರಷ್ಟು ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಕುದಿಯುವ ಹಂತಕ್ಕೆ ಬಂದಾಗ, ರವೆ ಹಾಕಿ, ಚೆನ್ನಾಗಿ ಬೆರೆಯುವಂತೆ ಕೈಯಾಡಿಸಿ, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಐದಾರು ನಿಮಿಷಗಳ ನಂತರ ಮುಚ್ಚಳ ತೆಗೆದು, ಮೇಲೆ ಊಟದ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಹತ್ತು ನಿಮಿಷ ತಣಿಯಲು ಬಿಡಿ.

Advertisement

ಅವಲಕ್ಕಿ ತರಿ ಡ್ರೈ ಫ್ರೂಟ್ಸ್‌ ಉಪ್ಪಿಟ್ಟು


ಬೇಕಾಗುವ ಸಾಮಗ್ರಿ: ಮೀಡಿಯಂ ಅವಲಕ್ಕಿ ತರಿ -1 ಕಪ್‌, (ಅವಲಕ್ಕಿಯನ್ನು ಮಿಕ್ಸಿಗೆ ಹಾಕಿ ತರಿಯಾಗಿ ಬೀಸಿಕೊಳ್ಳಬಹುದು), ಸಣ್ಣದಾಗಿ ಕತ್ತರಿಸಿದ ಗೋಡಂಬಿ, ದ್ರಾಕ್ಷಿ, ಅಂಜೂರದ ತುಂಡುಗಳು, ಒಣಮೆಣಸು- ಎರಡು, ಸಾಸಿವೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಅವಲಕ್ಕಿ ತರಿಯನ್ನು ನೀರಿನಲ್ಲಿ ತೊಳೆದು, ಬಸಿದು ಇಟ್ಟುಕೊಳ್ಳಿ. ಒಗ್ಗರಣೆಗೆ ಸಾಸಿವೆ ಸಿಡಿಸಿ, ತುಂಡರಿಸಿದ ಒಣ ಹಣ್ಣುಗಳೊಂದಿಗೆ ಮೆಣಸಿನಕಾಯಿ­ಯನ್ನೂ ಹಾಕಿ ಹುರಿದು, ಉರಿ ನಂದಿಸಿ. ಇದಕ್ಕೆ ಈಗಾಗಲೇ ತೊಳೆದು ಸಿದ್ದಪಡಿಸಿದ ಅವಲಕ್ಕಿ ತರಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಸೇವಿಸುವಾಗ ಅಲ್ಲಲ್ಲಿ ಸಿಗುವ ಹುರಿದ ಒಣ ಹಣ್ಣುಗಳು ಉಪ್ಪಿಟ್ಟಿನ ರುಚಿಯನ್ನು ಹೆಚ್ಚಿಸುತ್ತವೆ.

ಅಕ್ಕಿ ತರಿ- ಜೀರಾ ಉಪ್ಪಿಟ್ಟು


ಬೇಕಾಗುವ ಸಾಮಗ್ರಿ: ಅಕ್ಕಿತರಿ- ಒಂದು ಕಪ್‌, ಒಗ್ಗರಣೆಗೆ ಜೀರಿಗೆ, ಓಂ ಕಾಳು, ಸ್ವಲ್ಪ ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಬಾಣಲಿಯಲ್ಲಿ ಒಂದು ಚಮಚೆ ತುಪ್ಪ ಹಾಕಿ, ಅದು ಬಿಸಿಯಾಗುತ್ತಲೇ ಜೀರಿಗೆ, ಓಂಕಾಳು ಹಾಕಿ ಕೆಂಬಣ್ಣ ಬರುವ ತನಕ ಹುರಿದು ನಂತರ ಅಕ್ಕಿ ತರಿ ಹಾಕಿ ಚೆನ್ನಾಗಿ ಹುರಿಯಿರಿ. ತರಿ ಅರಳಿದಂತಾದಾಗ, ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಎರಡು ಕಪ್‌ ನೀರು ಹಾಕಿ, ಬಾಣಲೆ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿ. ಮಿಶ್ರಣ ಬೆಂದ ನಂತರ ಮತ್ತೂಮ್ಮೆ ಕೈಯಾಡಿಸಿ ಉರಿ ಆರಿಸಿ ತಣಿಯಲು ಬಿಡಿ.

ಗೋಧಿ ರವೆ ಉಪ್ಪಿಟ್ಟು


ಬೇಕಾಗುವ ಸಾಮಗ್ರಿ: ಗೋಧಿ ರವೆ- 1 ಕಪ್‌, ಒಣ ಮೆಣಸಿನಕಾಯಿ- ಎರಡು, ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಇಂಗು, ಕರಿಬೇವಿನ ಎಸಳು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಗೋಧಿ ರವೆಯನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ. ನಂತರ ಒಗ್ಗರಣೆಗೆ ಸಾಸಿವೆ ಸಿಡಿಸಿ, ಉದ್ದಿನಬೇಳೆಯನ್ನು ಕೆಂಬಣ್ಣ ಬರುವವರೆಗೆ ಹುರಿದು ಇಂಗು, ಕರಿಬೇವಿನ ಎಸಳು ಸೇರಿಸಿ ಬಾಡಿಸಿ. ರವೆಯ ಅಳತೆಗೆ ಎರಡೂವರೆ ಅಥವಾ ಮೂರು ಅಳತೆ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನೀರು ಕುದಿಯುವಾಗ ಹುರಿದ ಗೋಧಿ ರವೆಯನ್ನು ಹಾಕಿ ಚೆನ್ನಾಗಿ ಬೆರೆಸಿ, ಮುಚ್ಚಳ ಹಾಕಿ, ಹತ್ತು ನಿಮಿಷ ಬೇಯಿಸಿ. ಬೆಂದ ನಂತರ ಮತ್ತೂಮ್ಮೆ ಚೆನ್ನಾಗಿ ಬೆರೆಸಿ, ಒಂದೈದು ನಿಮಿಷ ತಣಿಯಲು ಬಿಡಿ. ಮಧುಮೇಹಿಗಳಿಗೆ ಚಪಾತಿಯ ಬದಲು ಇದನ್ನು ಕೊಡಬಹುದು.

— ಕೆ.ವಿ. ರಾಜಲಕ್ಷ್ಮೀ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next