Advertisement
ಸತತ ಮೂರು ಬಾರಿ ಆಡಳಿತ ನಡೆಸಿದ್ದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಭಾರತೀಯ ಜನತಾ ಪಕ್ಷದ ಸರಕಾರ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವಲ್ಲಿ ಬಹುಮತ ಕೊರತೆ ಎದುರಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಗಳಿಸಲು ಸಾಧ್ಯವಾಗಿದ್ದು 100 ಸ್ಥಾನಗಳನ್ನು ಮಾತ್ರ.
Related Articles
Advertisement
ಒಟ್ಟು 230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿತ್ತು, ಪ್ರಮುಖ ಪ್ರತಿಪಕ್ಷ ಬಿಜೆಪಿ 107 ಸ್ಥಾನಗಳನ್ನು, ಬಹುಜನ ಸಮಾಜವಾದಿ ಪಕ್ಷ 2 ಸ್ಥಾನಗಳನ್ನು, ಸಮಾಜವಾದಿ ಪಕ್ಷ 1 ಸ್ಥಾನ ಮತ್ತು ಪಕ್ಷೇತರ ಶಾಸಕರು 4 ಸ್ಥಾನಗಳನ್ನು ಹೊಂದಿದ್ದರು. 2 ಸ್ಥಾನಗಳು ತೆರವಾಗಿವೆ. ಇದೀಗ ಸಿಂಧಿಯಾ ಅವರೊಂದಿಗೆ 19 ಕಾಂಗ್ರೆಸ್ ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್ ಬಲ 95ಕ್ಕೆ ಕುಸಿದಿದ್ದರೆ ಒಟ್ಟಾರೆ ಸದನದ ಸದಸ್ಯ ಬಲ 209ಕ್ಕೆ ಕುಸಿದಂತಾಗಿದೆ (230-19-2 = 209).
ಆವಾಗ ಸದ್ಯದ ಪರಿಸ್ಥಿತಿಯಲ್ಲಿ ಸರಕಾರ ರಚಿಸಲು ಅಗತ್ಯವಿರುವ ಸರಳ ಬಹುಮತ ಭಾರತೀಯ ಜನತಾ ಪಕ್ಷಕ್ಕೆ ಲಭಿಸಲಿದೆ, ಬಿಜೆಪಿ ಈಗಾಗಲೇ 107 ಶಾಸಕರನ್ನು ಹೊಂದಿದೆ. ಇನ್ನು ಒಂದುವೇಳೆ 4 ಜನ ಪಕ್ಷೇತರ ಶಾಸಕರ ಬೆಂಬಲವನ್ನು ಸಂಪಾದಿಸಿದರೆ ಬಿಜೆಪಿಯ ಬಲ 111ಕ್ಕೆ ಏರಲಿದೆ ಮತ್ತು ಈ ಶಾಸಕ ಬಲದ ಮೂಲಕ ಬಿಜೆಪಿ ಸದ್ಯದ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದಲ್ಲಿ ಮರಳಿ ಅಧಿಕಾರಕ್ಕೇರಲು ಸಾಧ್ಯವಾಗಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಬಿಜೆಪಿ ಅನುಸರಿಸಿದ ತಂತ್ರವನ್ನೇ ಮಧ್ಯಪ್ರದೇಶದಲ್ಲೂ ಅನುಸರಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಇದೀಗ ರಾಜೀನಾಮೆ ನೀಡಲಿರುವ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದಲ್ಲಿ ಬಳಿಕ ಉಪಚುನಾವಣೆಗಳ ಮೂಲಕ ಅವರು ಗೆಲ್ಲುವಂತೆ ಮಾಡಿ ಮುಂಬರುವ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರವನ್ನು ಗಟ್ಟಿ ಮಾಡುವುದು ಬಿಜೆಪಿಯ ಸದ್ಯದ ಯೋಜನೆಯಾಗಿದೆ.
ಇನ್ನು ಒಂದುವೇಳೆ ಕಮಲನಾಥ್ ಸರಕಾರ ಪತನಗೊಂಡಲ್ಲಿ ಇಲ್ಲಿ ಸರಕಾರ ರಚನೆಗೆ ಬಿಜೆಪಿ ಹಕ್ಕು ಮಂಡಿಸಬಹುದು ಆ ಸಂದರ್ಭದಲ್ಲಿ ಅದು ಮಾಜೀ ಮುಖ್ಯಮಂತ್ರಿ ಹಾಗೂ ರಾಜ್ಯದ ಜನಪ್ರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರನ್ನೇ ಮುಖ್ಯಮಂತ್ರಿ ಪದಕ್ಕೆ ಆರಿಸುವ ಸಾಧ್ಯತೆಗಳೇ ಹೆಚ್ಚಾಗಿವೆ, ಇನ್ನು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿ ಅವರಿಗೆ ಕೇಂದ್ರದಲ್ಲಿ ಪ್ರಮುಖ ಸ್ಥಾನವನ್ನು ಕೊಡುವ ಸಾಧ್ಯತೆಗಳು ಸದ್ಯದ ಪರಿಸ್ಥಿತಿಯಲ್ಲಿ ದಟ್ಟವಾಗಿ ಗೋಚರಿಸುತ್ತಿವೆ.
ಇನ್ನೊಂದು ಸಾಧ್ಯತೆಗಳಲ್ಲಿ ಒಂದುವೇಳೆ ಕಮಲನಾಥ್ ಸರಕಾರ ಅಲ್ಪಮತಕ್ಕೆ ಕುಸಿದು ಪತನಗೊಂಡಲ್ಲಿ ಮಧ್ಯಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಕೇಂದ್ರ ಸರಕಾರ ನಿರ್ಧರಿಸಬಹುದು.
ಒಟ್ಟಿನಲ್ಲಿ ಮಧ್ಯಪ್ರದೇಶದಲ್ಲಿ ಸದ್ಯಕ್ಕೆ ಉದ್ಭವಿಸಿರುವ ರಾಜಕೀಯ ವಿಪ್ಲವಕ್ಕೆ ಇನ್ನು ಕೆಲ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗುವ ಸಾಧ್ಯತೆಗಳಿವೆ.