ಉಡುಪಿ: ಮಣಿಪಾಲದಲ್ಲಿ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯ ದುರಸ್ತಿಗೆ ಆಗ್ರಹಿಸಿ ಜಿಲ್ಲಾ ನಾಗರಿಕ ಸಮಿತಿ ಪ್ರ. ಕಾರ್ಯದರ್ಶಿ ನಿತ್ಯಾನಂದ ವಳಕಾಡು ಅವರು ರಸ್ತೆಯಲ್ಲೇ ಉರುಳು ಸೇವೆ ನಡೆಸಿ ಶುಕ್ರವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಒಂದು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿದ್ದ ಬೃಹತ್ ಹೊಂಡದಲ್ಲಿ ಈಜಾಡಿ ಸರಕಾರದ ಗಮನ ಸೆಳೆದಿದ್ದ ಅವರು ಇದೀಗ ಮಣಿಪಾಲದ ಟೈಗರ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳು ಸೇವೆ ಮಾಡಿ ಪ್ರತಿಭಟಿಸಿದರು. ಜತೆಗೆ ವ್ಯಕ್ತಿಯೊಬ್ಬರನ್ನು ಸ್ಟ್ರಕ್ಚರ್‌ನಲ್ಲಿ ರೋಗಿಯಂತೆ ವೆಂಟಿಲೇಟರ್ ಇಟ್ಟು ಮಲಗಿಸಿ ಅಣುಕು ಪ್ರದರ್ಶನ ಮಾಡಲಾಯಿತು. ಚಿಟ್ಪಾಡಿಯ ಕಿಶನ್, ಜಗ್ಗು, ಆನಂದ ಇವರು ಸಾವಿನ ಚೆಂಡೆ, ಡೋಲು ಬಡಿದು ಪ್ರತಿಭಟನೆಗೆ ಸಹಕರಿಸಿದರು.
ಬಳಿಕ ಮಾತನಾಡಿದ ನಿತ್ಯಾನಂದ ವಳಕಾಡು, ಈ ಹಿಂದೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಸಂಬಂಧಪಟ್ಟವರು ಒಂದು ಹೊಂಡಕ್ಕೆ ತೇಪೆ ಹಾಕಿ ಸುಮ್ಮನಾಗಿದ್ದಾರೆ. ಸಂಪೂರ್ಣ ಹದಗೆಟ್ಟ ರಸ್ತೆಯಿಂದಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ. ಈ ರಸ್ತೆ ಅವಲಂಬಿಸುವವರಿಗೆ ಕಣ್ಣಿನ ತೊಂದರೆ, ಅಸ್ತಮಾ ಉಂಟಾಗುತ್ತಿದೆ. ಸಂಸದರು, ಶಾಸಕರು, ಅಧಿಕಾರಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ಸರಕಾರ ಕೂಡಲೇ ರಸ್ತೆ ದುರಸ್ತಿ ನಡೆಸದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಮಣಿಪಾಲ ಆಟೋ ಚಾಲಕರ ಸಂಘದ ಅಧ್ಯಕ್ಷ ಮುದ್ದು ಮೂಲ್ಯ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮಣಿಪಾಲದ ರಸ್ತೆಯ ಸ್ಥಿತಿ ಕೇಳುವವರಿಲ್ಲದಾಗಿದೆ. ಪ್ರತಿದಿನ ಸಾವಿರಾರು ಮಂದಿ ಈ ರಸ್ತೆಯಲ್ಲಿ ಓಡಾಡುತ್ತಾರೆ. ರಿಕ್ಷಾ ಚಾಲಕರು ರಸ್ತೆಯಲ್ಲಿ ಪ್ರಯಾಣಿಸಲು ಹರಸಾಹಸ ಪಡಬೇಕಾಗಿದೆ. ಧೂಳಿನಿಂದಾಗಿ ಅನೇಕರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸಂಬಂಧಪಟ್ಟವರು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೊಳಿಸಿ ಎಂದು ಆಗ್ರಹಿಸಿದರು.
ಪರ್ಕಳ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುಧಾಕರ ಪೂಜಾರಿ, ಮಣಿಪಾಲ ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ಜಯಕರ, ರಾಘವೇಂದ್ರ ಕರ್ವಾಲು, ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ, ಹನುಮಂತ ಐಹೊಳೆ, ಜೆಸಿಐನ ಮನೋಜ್ ಕಡಬ, ಶ್ರೀಪಾದ ಭಟ್, ಎಂಪಿಎಂಸಿ ಕಾಲೇಜಿನ ವಿದ್ಯಾರ್ಥಿಗಳು, ಟ್ಯಾಕ್ಸಿ ಚಾಲಕರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.