Advertisement

ಚರ್ಮ ಕುಶಲಕರ್ಮಿಗಳಿಗೆ ವಿಶೇಷ ತರಬೇತಿ

04:41 PM Aug 29, 2017 | |

ಶಿವಮೊಗ್ಗ: ಡಾ| ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಇದೇ ಮೊದಲ ಬಾರಿಗೆ ಚರ್ಮೋದ್ಯಮದ ಬೆಳವಣಿಗೆಗಾಗಿ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಓ.ಶಂಕರ್‌ ಹೇಳಿದರು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿಯ ಕುಶಲಕರ್ಮಿಗಳಿಗೆ ಆಯೋಜಿಸಿದ್ದ ಕೌಶಲ್ಯಾಭಿವೃದ್ಧಿ ಮತ್ತು ಆದಾಯ ಗಳಿಕೆ ತರಬೇತಿ ಶಿಬಿರದ ಉದ್ಘಾಟನೆ ಮತ್ತು ತರಬೇತಿ ಪಡೆದ ಕುಶಲಕರ್ಮಿಗಳಿಗೆ ಸವಲತ್ತು ಮತ್ತು ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು. ಕುಶಲಕರ್ಮಿಗಳಿಗೆ ದೇಶದ ಬೆಂಗಳೂರು ಮತ್ತು ಚೆನ್ನೈನಲ್ಲಿ ಹಾಗೂ ಲಂಡನ್‌ನಲ್ಲಿ ತರಬೇತಿ ನೀಡಿ, ನಂತರ ನಿಗಮದಲ್ಲಿ ಉದ್ಯೋಗಿಗಳನ್ನಾಗಿ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ನಿಗಮವು ಪರಿಶಿಷ್ಟ ಜಾತಿಯ ಚರ್ಮೋದ್ಯಮಿಗಳ, ಚರ್ಮ ಕುಶಲಕರ್ಮಿಗಳ ಅಭ್ಯುದಯಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಿಗಮದಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ತರಬೇತಿ ಪಡೆಯಲಿಚ್ಚಿಸುವವರಿಗೆ ತರಬೇತಿ ನೀಡಿ, ಪ್ರಮಾಣಪತ್ರವನ್ನೂ ಸಹ ನೀಡುತ್ತಿದೆ ಎಂದರು. ಈ ರೀತಿ ತರಬೇತಿ ಪಡೆದು ಸ್ವಯಂ ಉದ್ಯೋಗ ಮಾಡಲಿಚ್ಛಿಸುವವರು ಲಿಡ್ಕರ್‌ ನೀಡುವ ಮಾದರಿಯಂತೆ ಚರ್ಮ ಉತ್ಪನ್ನಗಳನ್ನು ತಯಾರಿಸಿ ನೀಡಬಹುದು. ಲಿಡ್ಕರ್‌ ಸಂಸ್ಥೆ ಅಂತಹ ಉತ್ಪನ್ನಗಳನ್ನು ಖರೀದಿಸಿ, ಗ್ರಾಹಕರಿಗೆ ಮಾರಲಿದೆ. ಖರೀದಿಸಿದ ಉತ್ಪನ್ನಗಳಿಗೆ ಕುಶಲಕರ್ಮಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದರು.

ಚರ್ಮೋದ್ಯಮಿಗಳ ಅಗತ್ಯಕ್ಕೆ ತಕ್ಕಂತೆ ನಿಗಮದ ವತಿಯಿಂದ ಚರ್ಮ ಪೂರೈಸಲು ಈಗಾಗಲೇ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪುರುಷ ಮತ್ತು ಮಹಿಳಾ ತರಬೇತಿ ಪಡೆಯುವವರಿಗೆ ಉಚಿತವಾಗಿ ಹೊಲಿಗೆಯಂತ್ರ ಹಾಗೂ  ಕುಟೀರಗಳನ್ನು ನೀಡಲಾಗುತ್ತಿದೆ ಎಂದರು. ಚರ್ಮೋತ್ಪನ್ನಗಳನ್ನು ತಯಾರಿಸುವ ನಿರ್ವಸತಿಗರಿಗೆ ವಸತಿ ಹಾಗೂ ನಿವೇಶನ ನೀಡಲು ನಿಗಮದಿಂದ ಅಗತ್ಯ ಆರ್ಥಿಕ ಸಹಕಾರ ನೀಡಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಈ ಎಲ್ಲಾ ಯೋಜನೆಗಳ ಲಾಭ ಪಡೆಯಬೇಕೆಂದರು. ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಬಿ. ಪ್ರಸನ್ನಕುಮಾರ್‌ ಅವರು ಮಾತನಾಡಿ, ಚರ್ಮೋದ್ಯಮಿಗಳನ್ನು ಹಾಗೂ ಅವರ ಕುಟುಂಬದ ಅವಲಂಬಿತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ನಿಗಮದ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ನಿಗಮದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ-ಸಿಬ್ಬಂದಿ ಅರ್ಹ ಫಲಾನುಭವಿಗಳಿಗೆ ನಿಗಮದ ಯೋಜನೆಗಳ ಮಾಹಿತಿ ನೀಡಿ, ಯೋಜನೆಯ ಲಾಭ ಪಡೆದುಕೊಳ್ಳಲು ಅಗತ್ಯ ಮಾರ್ಗದರ್ಶನ ಹಾಗೂ ಸಕಾಲಿಕ ಸಲಹೆ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷ ಇಸ್ಮಾಯಿಲ್‌ಖಾನ್‌, ಕಾಡಾ ಅಧ್ಯಕ್ಷ ಎಚ್‌. ಎಸ್‌. ಸುಂದರೇಶ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್‌, ನಿಗಮದ ನಿರ್ದೇಶಕ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next