Advertisement

ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ; ಆರ್‌. ಅಶೋಕ್‌

09:06 PM Jun 01, 2020 | Sriram |

ಬೆಂಗಳೂರು: ನಗರದಲ್ಲಿ ಮಳೆ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಬಿಬಿಎಂಪಿ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ , ಬೆಸ್ಕಾಂ, ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮಳೆ ಅನಾಹುತ ತಪ್ಪಿಸುವ ಉದ್ದೇಶದಿಂದ ಸಿವಿಲ್‌ ಡಿಫೆನ್ಸ್‌ ನಿಂದ 500 ಜನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇವರ ಸಂಪೂರ್ಣ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ ಎಂದರು.

ಕಂದಾಯ ವಿಭಾಗದಲ್ಲಿರುವ ಕರ್ನಾಟಕ ವಿಪತ್ತು ನಿರ್ವಹಣಾ ತಂಡವನ್ನು ಮಳೆ ಅನಾಹುತ ತಡೆಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಎಲ್ಲೆಲ್ಲಿ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ, ಗಾಳಿಯ ವೇಗ ಯಾವ ಪ್ರಮಾಣದಲ್ಲಿ ಬೀಸಲಿದೆ, ಎಷ್ಟು ಪ್ರಮಾಣದಲ್ಲಿ ಮಳೆ ಬೀಳಲಿದೆ, ಯಾವ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು ಹಾಗೂ ಮುಖ್ಯವಾಗಿ ಎಲ್ಲೆಲ್ಲಿ ಎಷ್ಟು ಮಳೆ ಬೀಳಲಿದೆ ಎನ್ನುವ ಮಾಹಿತಿಯನ್ನು ಇನ್ನೊಂದು ವಾರದಲ್ಲಿ ನೀಡಲಾಗುವುದು. ಇದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಿಗೆ ಎಸಿಪಿ ಮಟ್ಟದ ಅಧಿಕಾರಿ ನೇಮಕ ಮಾಡಲಾಗಿದ್ದು, ಇದರಲ್ಲಿ ಬಿಬಿಎಂಪಿ ಜಂಟಿ ಆಯುಕ್ತರು, ಅರಣ್ಯ ವಿಭಾಗದ ಅಧಿಕಾರಿಗಳು, ಬೆಸ್ಕಾಂ, ಜಲಮಂಡಳಿ ಸೇರಿ ಒಂದು ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿದಿನ ಹವಾಮಾನ ವರದಿ ಬಂದ ಕೂಡಲೇ ನಗರದಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ, ಎಲ್ಲಿ ಎಚ್ಚರಿಕೆ ವಹಿಸಬೇಕು ಎನ್ನುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ನೇರ ಮೆಸೇಜ್‌ ಕಳುಹಿಸಲಾಗುವುದು. ಬೆಂಗಳೂರಿನಲ್ಲಿ ಈಗಾಗಲೇ 210 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ. ಇನ್ನು ವಿಪತ್ತು ನಿರ್ವಹಣಾ ತಂಡದಿಂದ 21 ರಾಜಕಾಲುವೆಗಳಲ್ಲಿ ಸೆನ್ಸಾರ್‌ ಅಳವಡಿಕೆ ಮಾಡಲಾಗಿದ್ದು, ಇಲ್ಲಿ ಶೇ.75 ರಷ್ಟು ನೀರು ತುಂಬಿದರೂ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಸೆನ್ಸಾರ್‌ ಸಂದೇಶದ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಈ ರೀತಿಯ ಸೆನ್ಸಾರ್‌ ಅಳವಡಿಕೆಯನ್ನು ಇನ್ನು 200ಕಡೆಗಳಲ್ಲಿ ಅಳವಡಿಸುವ ಚಿಂತನೆ ಇದೆ ಎಂದರು.

ಇನ್ನು ನಗರದಲ್ಲಿ ಮರಗಳು ಬಿದ್ದ ವೇಳೆ ಪೊಲೀಸ್‌ ಸಿಬ್ಬಂದಿ ಕೂಡಲೇ ಬ್ಯಾರಿಕೇಡ್‌ ವ್ಯವಸ್ಥೆ ಮಾಡಬೇಕು. ವಿದ್ಯುತ್‌ ತಂತಿಗಳ ಅನಾಹುತ ಹಾಗೂ ಅವಘಡ ತಪ್ಪಿಸುವ ಉದ್ದೇಶದಿಂದ ಈ ಕ್ರಮಕ್ಕೆ ಸೂಚಿಸಲಾಗಿದೆ. ಅಲ್ಲದೆ, ನಗರದಲ್ಲಿ ತೆರೆದಿರುವ ಎಲ್ಲ ಮ್ಯಾನ್‌ಹೋಲ್‌ಗ‌ಳನ್ನು ಕೂಡಲೇ ಮುಚ್ಚುವಂತೆ ಜಲಮಂಡಳಿಗೆ ನಿರ್ದೇಶನ ನೀಡಲಾಗಿದೆ. ರಾತ್ರಿ ವೇಳೆ ಮರ ಕಡಿಯಲು ಪ್ಲೆಡ್‌ ಲೈಟ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Advertisement

ರಾಜ್ಯ ಗ್ರೂಪ್‌ : ರಾಜ್ಯದಲ್ಲಿ ಮಳೆ ಅನಾಹುತ ತಪ್ಪಿಸಲು ವಿಪತ್ತು ನಿರ್ವಹಣಾ ತಂಡದ ಅಡಿಯಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಲು ಸೂಚಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಅನಾಹುತ ತಪ್ಪಿಸಲು ಈ ತಂಡ ಕ್ರಮ ವಹಿಸಲಿದೆ. ಇದೇ ಮಾದರಿಯಲ್ಲಿ ನಗರದಲ್ಲೂ ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಲು ಸೂಚಿಸಲಾಗಿದೆ. ರಾಜ್ಯದಲ್ಲಿ ಮಳೆಯಿಂದ ಸೃಷ್ಟಿಯಾಗಬಹುದಾದ ಪ್ರವಾಹ ತಪ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ತಂಡಕ್ಕೆ 310ಕೋಟಿ ರೂ.ಮೀಸಲಿಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಯಾದರೆ ಕಲ್ಯಾಣ ಮಂಟಪ ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಇಲ್ಲಿ ಸೂಕ್ತ ಮೂಲಸೌಕರ್ಯ ಇರುವುದಿಲ್ಲ. ಹೀಗಾಗಿ, ಪ್ರವಾಹ ಭೀತಿ ಇರುವ ಜಿಲ್ಲೆಗಳಲ್ಲಿ ಶಾಶ್ವತ ಕೇಂದ್ರ ತೆರೆಯಲಿದ್ದೇವೆ. ಉದಾ ಕೊಡಗು,ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಶಾಶ್ವತ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಈ ಕೇಂದ್ರಗಳಲ್ಲಿ ಆಸ್ಪತ್ರೆ, ಅಡುಗೆ ಕೊಠಡಿ, ಶೌಚಾಲಯ, ಹಾಸಿಗೆ ವ್ಯವಸ್ಥೆ ಎಲ್ಲವೂ ಇರಲಿದೆ ಇದಕ್ಕೆ ಅಂದಾಜು 10ರಿಂದ 15 ಕೋಟಿ ರೂ. ಆಗುವ ಸಾಧ್ಯತೆ ಇದೆ ಎಂದರು.

ಈ ವೇಳೆ ಮೇಯರ್‌ ಎಂ.ಗೌತಮ್‌ಕುಮಾರ್‌, ಉಪಮೇಯರ್‌ ರಾಮಮೋಹನರಾಜ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ವಿಶೇಷ ಆಯುಕ್ತ (ಆಡಳಿತ) ಅನುºಕುಮಾರ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್‌, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ. ಶ್ರೀನಿವಾಸ್‌ ರೆಡ್ಡಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಗೌಡ, ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೆ ಗೌಡ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next