ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿ ರಾಜ್ ಇಲಾಖೆ ಇದೀಗ ಶಿಕ್ಷಣ ಇಲಾಖೆ ಜತೆ ಕೈಜೋಡಿಸಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವುದು ಹಾಗೂ “ವಿದ್ಯಾಗಮ ಯೋಜನೆ’ ಯಶಸ್ವಿ ಸೇರಿದಂತೆ ಇನ್ನಿತರ ಶಿಕ್ಷಣ ಕಾರ್ಯಗಳ ಯಶಸ್ವಿ ಸಂಬಂಧ ಗ್ರಾಪಂ ಮಟ್ಟದಲ್ಲಿ “ಗ್ರಾಮ ಪಂಚಾಯ್ತಿ ಶಿಕ್ಷಣ ಪಡೆ ರಚನೆ’ಗೆ ಮುಂದಾಗಿದೆ.
ಆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಪಂನ ಸುಮಾರು 93 ಗ್ರಾಪಂಗಳಲ್ಲಿ ಶೀಘ್ರದಲ್ಲೇ ಗ್ರಾಪಂ ಶಿಕ್ಷಣ ಪಡೆ ರಚನೆ ಆಗಿ ಕಾರ್ಯರೂಪಕ್ಕೆ ಬರಲಿದೆ. ಗ್ರಾಪಂನ ಆಡಳಿತಾಧಿಕಾರಿ ಅಥವಾ ಅಧ್ಯಕ್ಷರು ಈ ಪಡೆಗೆ ಅಧ್ಯಕ್ಷರಾಗಿರುತ್ತಾರೆ. ಹಾಗೆಯೇ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿಸಮಿತಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಇದರಜತೆಗೆ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು,ಶಿಕ್ಷಣ ಸಂಯೋಜಕರು, ಸಮೂಹ ಸಂಪನ್ಮೂಲಕೇಂದ್ರದ ಸಂಪನ್ಮೂಲ ವ್ಯಕ್ತಿಗಳು, ಅಂಗನವಾಡಿಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ನಿವೃತ್ತ ಶಿಕ್ಷಕರು, ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳೂ ಈ ಪಡೆಯ ಸದಸ್ಯರಾಗಿರುತ್ತಾರೆ. ಅಲ್ಲದೆಗ್ರಾಪಂ ಪಿಡಿಒಗಳು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.
3 ತಿಂಗಳಿಗೊಮ್ಮೆ ಸಭೆ ಸೇರಬೇಕು: ಹೀಗೆ ರಚನೆಯಾದ ಗ್ರಾಪಂ ಶಿಕ್ಷಣ ಪಡೆಗೆ ಕೆಲವೊಂದು ಕಾರ್ಯ ಯೋಜನೆ ನೀಡಲಾಗಿದೆ. 2012ರ ಶಿಕ್ಷಣ ನಿಯಮದಂತೆ ಗ್ರಾಪಂಗಳು ಗ್ರಾಮ ಶಿಕ್ಷಣ ರಿಜಿಸ್ಟರ್ ನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ತೆರೆಯಲು ಆಗದೇ ಇರುವುದರಿಂದ ಶಿಕ್ಷಣ ಇಲಾಖೆ ಮಕ್ಕಳ ಅನುಕೂಲಕ್ಕಾಗಿ ಈಗಾಗಲೇ “ವಿದ್ಯಾಗಮ’ ಯೋಜನೆ ಜಾರಿಗೆ ತಂದಿದ್ದು ಅದರ ಯಶಸ್ವಿಗೆಶ್ರಮಿಸುವುದು. ಜತೆಗೆ ಮಕ್ಕಳ ಕಲಿಕೆಗೆ ತೊಂದರೆ ಆಗದ ರೀತಿಯಲ್ಲಿ ಸೂಕ್ತ ಕಲಿಕಾ ಕೇಂದ್ರ ತೆರೆಯುವುದು. ಗ್ರಾಮಗಳಲ್ಲಿ ವಾಸವಿದ್ದು ಶಾಲೆಗೆ ಗೈರು ಹಾಜರಾಗುತ್ತಿರುವ ಮಕ್ಕಳನ್ನು ಶಾಲೆಯಲ್ಲಿ ಉಳಿಯುವಂತೆ ಮಾಡುವುದು ಗ್ರಾಪಂ ಶಿಕ್ಷಣ ಪಡೆಯ ಕಾರ್ಯವಾಗಿದೆ.
ಅಲ್ಲದೆ ಬಯಲು ಶೌಚ ಮುಕ್ತ ಗ್ರಾಮ ಮಾದರಿಯಲ್ಲಿ ಪ್ರತಿ ಗ್ರಾಮವು ಶೇ.100 ದಾಖಲಾತಿ ಮತ್ತು ಹಾಜರಾತಿ ಹೊಂದಿರುವ ಗ್ರಾಮ ಘೋಷಣೆ ಮಾಡುವುದು. ಮಕ್ಕಳ ಶಾಲಾ ಪ್ರವೇಶ ಖಾತರಿ ಪಡಿಸುವುದು ಸೇರಿದಂತೆ ಸುಮಾರು ಹದಿನೈದು ಜವಾಬ್ದಾರಿಗಳನ್ನು ನೀಡಲಾಗಿದೆ. ಜತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರಿ ಪ್ರಗತಿ ಪರಿಶೀಲಿಸಲೂ ಸೂಚಿಸಲಾಗಿದೆ.
ರಾಜ್ಯ ಉಚ್ಚ ನ್ಯಾಯಾಲಯದ ಈ ಹಿಂದಿನ ಆದೇಶದಂತೆ ಗ್ರಾಪಂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಮಾಡಬೇಕಾಗಿದೆ. ಆ ಹಿನ್ನೆಲೆಯಲ್ಲಿ ಈ ಪಡೆ ರಚನೆಗೆ ಶಿಕ್ಷಣ ಇಲಾಖೆ ಜತೆಗೂಡಿ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ಮುಂದಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆ ಮಡಸೂರು ಗ್ರಾಪಂ ಪಿಡಿಒ ಶಶಿಕಿರಣ್ ಹೇಳಿದ್ದಾರೆ.
ಕ್ರಮಗಳ ಬಗ್ಗೆ ಪರಿಶೀಲನೆ : ಹೈಕೋರ್ಟ್ ಆದೇಶದಂತೆ ಗ್ರಾಪಂನ ಶಾಲೆ ಯಿಂದಹೊರಗುಳಿದ ಮಕ್ಕಳ ಸಮೀಕ್ಷೆ ಮಾಡ ಬೇಕಾಗಿದೆ. ಆ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರ ಗುಳಿದ ಮಕ್ಕಳ ಸಮೀಕ್ಷೆ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ಮಾಡಲು ಗ್ರಾಪಂ ಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಶಿಕ್ಷಣ ಪಡೆ ರಚಿಸಲಾಗುವುದು ಎಂದು ಬೆಂಗಳೂರು ನಗರ ಜಿಪಂ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಪಂ ಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಶಿಕ್ಷಣ ಪಡೆ ರಚನೆ ಆಗುವುದರಿಂದ ಮಕ್ಕಳ ಕಲಿಕೆಗೆ ಮತ್ತಷ್ಟು ಅನುಕೂಲವಾಗಲಿದೆ. ಅಲ್ಲದೆ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆಯನ್ನು ಶೂನ್ಯಗೊಳಿಸಲು ಕ್ರಮ ಕೈಗೊಳ್ಳಬಹುದಾಗಿದೆ.
–ರಾಜೇಶ್ ಪಿಡಿಒ, ರಾಜಾನುಕುಂಟೆ
–ದೇವೇಶ ಸೂರಗುಪ್ಪ