Advertisement
ಸಂಘಟನೆ ಸ್ಥಾಪನೆ-ಹೋರಾಟವಿಶೇಷ ಶಿಕ್ಷಕರು ವಿಶೇಷ ಮಕ್ಕಳ ಶಿಕ್ಷಣದಲ್ಲಿ ಡಿಪ್ಲೊಮಾ ತರಬೇತಿ ಪಡೆದು ಆರ್.ಸಿ.ಐ. ನೋಂದಣಿ ಹೊಂದಿ ಸೇವೆ ಸಲ್ಲಿಸುತ್ತಿದ್ದಾರೆ. 2001ರಿಂದ ಇದುವರೆಗೂ ಶಿಕ್ಷಕರು ವೇತನ, ಭದ್ರತೆಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದರೂ, ಇಂದಿಗೂ ಫಲ ಸಿಕ್ಕಿಲ್ಲ. 2007ರಲ್ಲಿ ವಿಶೇಷ ಶಿಕ್ಷಕರು ಒಗ್ಗಟ್ಟಾಗಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘಟನೆಯನ್ನು ಸ್ಥಾಪಿಸಿದರು. ಅನಂತರ ರಾಜ್ಯ ಸಂಘಟನೆಯೂ ಆರಂಭವಾಯಿತು. ಇದರ ಪ್ರಭಾವದಿಂದ ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಶಿಕ್ಷಕರ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾಕಷ್ಟು ಬಾರಿ ಮುಷ್ಕರ, ಪ್ರತಿಭಟನೆ ಕೈಗೊಂಡರೂ ಪ್ರಯೋಜನವಾಗಿಲ್ಲ.
ವಿಶೇಷ ಮಕ್ಕಳಿಗೆ ಪ್ರತ್ಯೇಕ ವಿಶೇಷ ಶಾಲೆ ಬೇಡ ಸಾಮಾನ್ಯ ಶಾಲೆಯೊಂದಿಗೆ ವಿಲೀನಗೊಳಿಸಿ ಸಮನ್ವಯ ಶಿಕ್ಷಣ ನೀಡಬೇಕೆನ್ನುವ ಮಾತು ಸರಕಾರದಿಂದ ಕೇಳಿ ಬರುತ್ತಿದೆ. ಆದರೆ ವಿಶೇಷ ಮಕ್ಕಳು ಇರುವವರೆಗೂ ವಿಶೇಷ ಶಿಕ್ಷಣದ ಅವಶ್ಯಕತೆ ಇದೆ. ಅದಕ್ಕೆಂದೇ ವಿಶೇಷ ಶಿಕ್ಷಕರ ತರಬೇತಿ ಕೇಂದ್ರವು ಶಿಕ್ಷಕರಿಗೆ ತರಬೇತಿ ನೀಡುತ್ತಿದೆ. ವಿಶೇಷ ಶಿಕ್ಷಕರ ತರಬೇತಿ ಕೇಂದ್ರವನ್ನು ತೆರೆಯಲೆಂದೇ 2018ರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನೂ ತೆಗೆದಿರಿಸಲಾಗಿದೆ. ಸ್ವಯಂಸೇವಾ ಸಂಸ್ಥೆ ಮುಂದೆ ಬಂದಲ್ಲಿ ಸರಕಾರ ಶಿಕ್ಷಕರ ತರಬೇತಿ ಕೇಂದ್ರವನ್ನು ತೆರೆಯಲು ಅವಕಾಶ ನೀಡಿದೆ. 2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶೇಷ ಮಕ್ಕಳಿಗೆ ಇಲಾಖೆ ಮೂಲಕ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ ಅನಂತರದ ಸರಕಾರಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿಲ್ಲ.
Related Articles
ವಿಶೇಷ ಶಾಲೆಯಲ್ಲಿ ತರಬೇತಿ ಹೊಂದಿದ ಮಕ್ಕಳು ಸಾಕಷ್ಟು ಸಾಧನೆಗೈದಿದ್ದಾರೆ. ಸ್ವಂತ ಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವೆಲ್ಲದರ ಹಿಂದೆ ವಿಶೇಷ ಶಿಕ್ಷಕರ ಶಿಕ್ಷಕೇತರರ ಅವಿರತ ಶ್ರಮವಿದೆ. ಆದರೆ ಕನಿಷ್ಠ ವೇತನ, ಭದ್ರತೆ, ಸೇವಾ ಹಿರಿತನಕ್ಕೂ ಬೆಲೆಯಿಲ್ಲದೆ ಸೇವೆ ನೀಡುತ್ತಿರುವ ವಿಶೇಷ ಶಿಕ್ಷಕರ ಬದುಕು ಮಾತ್ರ ಶೋಚನೀಯ. ಮುಂದಾದರೂ ಒಳ್ಳೆಯ ದಿನ ಬರಬಹುದೆನ್ನುವ ಆಶಾಭವನೆ ಹೊತ್ತು ವಿಶೇಷ ಶಿಕ್ಷಕರು ಶಕ್ತಿ ಮೀರಿ ಹಗಲಿರುಳೆನ್ನದೆ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಪುನರ್ವಸತಿ ಕೇಂದ್ರ ತೆರೆಯಲಿರಾಜ್ಯದಲ್ಲಿರುವ ವಿಶೇಷ ಶಾಲೆಗಳು ಬಲಿಷ್ಠಗೊಳ್ಳಬೇಕಾದರೆ ಸರಕಾರ ಪೂರ್ಣ ಪ್ರಮಾಣದ ಅನುದಾನವನ್ನು ಸಂಸ್ಥೆಗಳಿಗೆ ನೀಡಬೇಕು. ಅದರಲ್ಲಿಯೂ ಬುದ್ಧಿಮಾಂದ್ಯ ಮಕ್ಕಳ ಹೆತ್ತವರಿಗೆ ಇರುವ “ನನ್ನ ಅನಂತರ ಯಾರು’ ಎನ್ನುವ ಪ್ರಶ್ನೆಗೆ ಉತ್ತರವಾಗಿ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಪುನರ್ವಸತಿ ಕೇಂದ್ರ, ವೃತ್ತಿಪರ ತರಬೇತಿ ಕೇಂದ್ರಗಳು ಸ್ಥಾಪನೆಗೊಳ್ಳಬೇಕಾಗಿದೆ. ಈ ಮೂಲಕ ಅದೆಷ್ಟೋ ಮನೆಗಳಲ್ಲಿರುವ ವಿಶೇಷ ಮಕ್ಕಳ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ. ತರಬೇತಿಗೆ ಸೇರಲು ಹಿಂಜರಿಕೆ
ಗೋವಾ, ಕೇರಳ, ಮಹಾರಾಷ್ಟ್ರಗಳಲ್ಲಿ ವಿಶೇಷ ಶಿಕ್ಷಕರಿಗಿರುವ ವೇತನ ಕರ್ನಾಟಕದಲ್ಲಿರುವ ವಿಶೇಷ ಶಿಕ್ಷಕರಿಗಿಲ್ಲ. ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ವಿಶೇಷ ಶಾಲೆಗಳಿವೆ. 32 ವಿಶೇಷ ಶಾಲೆಗಳು 1982ರ ಅನುದಾನ ನೀತಿಯನ್ವಯ ಅನುದಾನ ಪಡೆಯುತ್ತಿದ್ದರೆ, 136 ವಿಶೇಷ ಶಾಲೆಗಳು ಶಿಶು ಕೇಂದ್ರಿತ ಅನುದಾನ ಪಡೆಯುತ್ತಿದೆ. ಉಳಿದವುಗಳು ಖಾಸಗಿಯಾಗಿ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿದೆ. ವಿಶೇಷ ಶಿಕ್ಷಕರಿಗಾಗಿ ಬೆಂಗಳೂರು, ಮಂಗಳೂರು, ದಾವಣಗೆರೆಗಳಲ್ಲಿ ತರಬೇತಿ ಶಾಲೆಗಳಿದ್ದರೂ, ಶಿಕ್ಷಕರ ಬದುಕಿಗೆ ಬೇಕಾಗುವಷ್ಟು ವೇತನ, ಭದ್ರತೆ ಇಲ್ಲದಿರುವುದರಿಂದ ವಿದ್ಯಾವಂತ ಯುವಜನತೆ ಈ ತರಬೇತಿಗೆ ಸೇರುವುದಕ್ಕೆ ಮುಂದೆ ಬರುತ್ತಿಲ್ಲ. ಸರ್ವಶಿಕ್ಷಣ ಅಭಿಯಾನದಡಿ ಸಾಮನ್ಯ ಶಿಕ್ಷಕರಿಗೆ ದೊರೆಯುವ ಗೌರವಧನಕ್ಕೆ ಸಮಾನವಾಗಿ ವಿಶೇಷ ಶಿಕ್ಷಕರಿಗೂ ಗೌರವ ಧನ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಇಲಾಖೆ ಮಾಹಿತಿ ತಿಳಿಸಿದೆ. ವಿಶೇಷ ಮಕ್ಕಳಿಗೆ ಅನ್ಯಾಯ
ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಮಕ್ಕಳಿಗೆ ಅಗತ್ಯವಾದ ವೈಯಕ್ತಿಕ ಶಿಕ್ಷಣದ ಕ್ರಮವಿಲ್ಲ. ಅಲ್ಲದೆ ವಿಶೇಷ ಶಿಕ್ಷಣ ಮತ್ತು ಥೆರಪಿಗೆ ಸಂಬಂಧಿಸಿದಂತೆ ತಜ್ಞರ ಕೊರತೆಯೂ ಎದ್ದು ಕಾಣುತ್ತಿದೆ. ಅಂಗವಿಕಲಸ್ನೇಹಿ ವಾತಾವರಣ ಈ ಸಂಸ್ಥೆಗಳಲ್ಲಿ ಇಲ್ಲದಿರುವುದು ಇನ್ನೊಂದು ಪ್ರಮುಖ ವಿಚಾರ. ಪ್ರತಿಯೊಂದು ಸಂಸ್ಥೆಗಳಲ್ಲಿಯೂ ಸಂಪನ್ಮೂಲ ಕೊಠಡಿಯ ಅವಶ್ಯಕತೆಯಿದೆ. ಈ ಎಲ್ಲ ವ್ಯವಸ್ಥೆ ಗಳಿಲ್ಲದ ಸಾಮಾನ್ಯ ಶಾಲೆಗಳಲ್ಲಿ 9ನೇ ತರಗತಿವರೆಗೆ ಕಲಿತ ವಿಶೇಷ ಮಕ್ಕಳು ಪುನಃ ವಿಶೇಷ ಶಾಲೆಗೆ ಬರುತ್ತಿರುವುದು ವಿಷಾದನೀಯ. ಈ ನೆಲೆಯಲ್ಲಿ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರು, ಶಿಕ್ಷಕೇತರ ಸಿಬಂದಿಗೆ ಇತರೇ ಶಾಲೆಗಳಲ್ಲಿರುವ ಶಿಕ್ಷಕರು, ಶಿಕ್ಷಕೇತರರಿಗೆ ವೇತನ ಶ್ರೇಣಿ, ಸೇವಾ ಸೌಲಭ್ಯ ದೊರಕಬೇಕು.
-ಡಾ| ವಸಂತ ಕುಮಾರ್ ಶೆಟ್ಟಿ,
ಪ್ರ.ಕಾರ್ಯದರ್ಶಿ, ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘ ವೇತನದಲ್ಲಿ ತಾರತಮ್ಯ
ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕ ಶಿಕ್ಷಕೇತರರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ದೊರಕುವುದರೊಂದಿಗೆ ಅವರ ಖಾತೆಗೆ ನೇರವಾಗಿ ಸಂಬಳ ತಲುಪಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಬೇಕು.
-ಡಾ| ಕಾಂತಿ ಹರೀಶ್, ಅಧ್ಯಕ್ಷರು,
ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘ ಎಸ್.ಜಿ. ನಾಯ್ಕ