Advertisement
ಕಳೆದ ವರ್ಷ ಜನವರಿ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಬಂಡೀಪುರ ಅಭಯಾರಣ್ಯದಲ್ಲಿ ಬೆಂಕಿಯ ಜ್ವಾಲೆಗೆ ಅಪಾರ ನಷ್ಟ ಸಂಭವಿಸಿದ್ದು ಇಂತಹ ಅವಘಡಗಳು ಕುದುರೆಮುಖ ವನ್ಯಜೀವಿ ವಿಭಾಗದ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭವಿಸದಂತೆ ಪ್ರತಿ ವರ್ಷ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ.
ಪ್ರತಿ ವರ್ಷ ಜನವರಿಯಿಂದ ಎಪ್ರಿಲ್‌ವರೆಗೆ ಕುದುರೆಮುಖ ವನ್ಯಜೀವಿ ವಿಭಾಗದ ರಾಷ್ಟ್ರೀಯ ಉದ್ಯಾನವನದ ಕೆಲವು ಪ್ರದೇಶಗಳಲ್ಲಿ ಅಲ್ಪ ಪ್ರಮಾಣದ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಇದರ ನಿರ್ಮೂಲನೆಗಾಗಿಯೇ ತಲಾ ನಾಲ್ಕು ಜನರನ್ನು ಒಳಗೊಂಡ ಎಫ್ಪಿಸಿ ಮತ್ತು ಎಪಿಸಿ ಎಂಬ 2 ಕಣ್ಗಾವಲು ಪಡೆಗಳನ್ನು ನೇಮಕ ಮಾಡಲಾಗಿದ್ದು ಈ ತಂಡಗಳು ದಿನದ 24 ಗಂಟೆಯೂ ಸದಾ ಕಾವಲು ಕಾಯುತ್ತವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಒಟ್ಟು 4 ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ 1,300 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಅಪಾರ ಪ್ರಾಣಿ ವರ್ಗ, ವೃಕ್ಷ ಸಂಕುಲಕ್ಕೆ ಆಶ್ರಯವಾಗಿದೆ.
Related Articles
Advertisement
ಮುನ್ನೆಚ್ಚರಿಕೆಈ ಭಾಗದಲ್ಲಿ ನಿರಂತರ ಮಳೆ ಸುರಿಯುವುದು ಒಂದೆಡೆಯಾದರೆ ಹುಲ್ಲುಗಾವಲು ಪ್ರದೇಶ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಕಾಡ್ಗಿಚ್ಚು ಸಂಭವಿಸುವುದು ಅತಿ ಕಡಿಮೆಯಾಗಿದೆ. ಆದರೂ ಸಹ ಅರಣ್ಯದೊಳಗೆ ತೆರಳುವ ಕೆಲವು ಪ್ರವಾಸಿಗರು ಬೆಂಕಿ ಹಾಕುವುದರಿಂದ ಅಗ್ನಿ ಅನಾಹುತಗಳು ಕೆಲವೊಮ್ಮೆ ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ವನ್ಯಜೀವಿ ವಿಭಾಗ ಮುನ್ನೆಚ್ಚರಿಕೆ ವಹಿಸಿದೆ. ಆಧುನಿಕ ತಂತ್ರಜ್ಞಾನ
ರಾ.ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ಬೆಂಕಿ ಅನಾಹುತ ಸಂಭವಿಸುವ ಲಕ್ಷಣವಿದ್ದಲ್ಲಿ ತತ್‌ಕ್ಷಣ ಅಧಿಕಾರಿಗಳ ಮೊಬೈಲ್‌ಗೆ ಸಂದೇಶ ರವಾನೆಯಾಗುವಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಅವಘಡಗಳು ಸಂಭವಿಸಿದ ತತ್‌ಕ್ಷಣವೇ ಅಧಿಕಾರಿಗಳು ಕಾರ್ಯೋನ್ಮುಖರಾಗಲು ಸಹಕಾರಿಯಾಗಿದೆ. ಡ್ರೋನ್ ಕೆಮರಾ ಬಳಸಿಯೂ ಅರಣ್ಯ ಪ್ರದೇಶವನ್ನು ನಿರಂತರವಾಗಿ ವೀಕ್ಷಿಸಲಾಗುತ್ತಿದೆ. ಬೆಂಕಿ ಅವಘಡದ ಪ್ರದೇಶಗಳು
ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಮುಖವಾಗಿ ನೆಮ್ಮಾರ್, ಮಲ್ಲೇಶ್ವರ್, ಶೀರಲ್ ಹಾಗೂ ಕುದುರೆಮುಖ ಅದಿರು ಸಂಗ್ರಹಣ ಪ್ರದೇಶದಲ್ಲಿ ಹೆಚ್ಚಾಗಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಅಲ್ಲದೆ ವಾಲಿಕುಂಜಕ್ಕೆ (ಅಜ್ಜಿಕುಂಜ) ಪ್ರದೇಶದಲ್ಲೂ ಅಗ್ನಿ ಅನಾಹುತ ಸಂಭವಿಸುತ್ತದೆ. 17 ಕಡೆಗಳಲ್ಲಿ ವೀಕ್ಷಣಾ ಸ್ಥಳ
ಉದ್ಯಾನವನದ ಅತೀ ಎತ್ತರದ 17 ಪ್ರದೇಶಗಳನ್ನು ಅರಣ್ಯ ವೀಕ್ಷಣೆಗಾಗಿ ಆಯ್ಕೆ ಮಾಡಲಾಗಿದೆ. ಅರಣ್ಯ ಇಲಾಖೆಯ ಸಿಬಂದಿ ಹಾಗೂ ಎಪಿಸಿ ಕಣ್ಗಾವಲು ಪಡೆಯ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ 17 ಪ್ರದೇಶಗಳಲ್ಲಿ ಇರುವ ಟವರ್ ಮೂಲಕ ಸುತ್ತಲಿನ ಅರಣ್ಯ ಪ್ರದೇಶವನ್ನು ನಿರಂತರವಾಗಿ ವೀಕ್ಷಣೆ ಮಾಡುತ್ತಿರುತ್ತಾರೆ. ಪ್ರವೇಶ ನಿಷೇಧ
ಉದ್ಯಾನವನದೊಳಗೆ ಅಗ್ನಿ ದುರಂತಗಳನ್ನು ತಡೆಯುವ ನಿಟ್ಟಿನಲ್ಲಿ ಬೇಸಗೆ ಸಮಯದಲ್ಲಿ ಜನರು ಅರಣ್ಯ ಪ್ರವೇಶ ಮಾಡುವುದನ್ನು ನಿಷೇಧಿಸಲಾಗುತ್ತದೆ. ಈ ಬಾರಿಯೂ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ಬೆಂಕಿಯ ಕುರುಹು ಕಂಡುಬಂದ ತತ್‌ಕ್ಷಣ ಕಾರ್ಯಾಚರಿಸಲು ಸಿಬಂದಿ ಹಾಗೂ ಹೆಚ್ಚುವರಿ ವಾಹನಗಳನ್ನು ನಿಯೋಜನೆ ಮಾಡಲಾಗಿದ್ದು, ಬೆಂಕಿ ನಂದಿಸಲು ಅಗತ್ಯವಿರುವ ನೀರು ಹಾಗೂ ಅಗತ್ಯ ಉಪಕರಣಗಳು ಮತ್ತು ಅಗ್ನಿಶಾಮಕ ವ್ಯವಸ್ಥೆಗಳನ್ನು ಸಿಬಂದಿಗೆ ನೀಡಲಾಗಿದೆ. ಕಟ್ಟೆಚ್ಚರ
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚಿನಂತಹ ಪ್ರಕರಣಗಳು ತೀರಾ ವಿರಳ. ಆದರೂ ಸಹ ಮುಂಜಾಗ್ರತೆ ಕ್ರಮವಾಗಿ ಹೆಚ್ಚುವರಿ ಸಿಬಂದಿ ನೇಮಿಸಿಕೊಂಡು ವಿಶೇಷ ಕಾರ್ಯಪಡೆ ರಚಿಸಿ ಉದ್ಯಾನವನ ವ್ಯಾಪ್ತಿಯಲ್ಲಿ ಟವರ್‌ಗಳನ್ನು ನಿರ್ಮಿಸಿ ಕಟ್ಟೆಚ್ಚರ ವಹಿಸಲಾಗಿದೆ.
-ರುಥÅನ್,
ವಲಯ ಅರಣ್ಯಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ ಪ್ರತಿಯೋರ್ವರ ಕರ್ತವ್ಯ
ಯಾವುದೇ ರೀತಿಯ ಅನಾಹುತ ನಡೆಯದಂತೆ ನೋಡಿಕೊಳ್ಳವುದು ಪ್ರತಿಯೋರ್ವ ನಾಗರಿಕನ ಕರ್ತವ್ಯ. ಕಣ್ಗಾವಲು ತಂಡದಲ್ಲಿ ಅರಣ್ಯ ಪರಿಸರದ ಸ್ಥಳೀಯರನ್ನು ಸೇರಿಸಿಕೊಂಡಲ್ಲಿ ಕಾಡ್ಗಿಚ್ಚಿನಂತಹ ಅನಾಹುತ ತಡೆಯಲು ಸುಲಭ ಸಾಧ್ಯವಾಗುತ್ತದೆ.
-ಶ್ರೀಧರ್ ಗೌಡ,
ಅಧ್ಯಕ್ಷರು, ಅರಣ್ಯ ಹಕ್ಕು ಸಮಿತಿ ಈದು ಸೀಮಿತವಲ್ಲ
ಅರಣ್ಯ ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆ ಕೇವಲ ಇಲಾಖೆಗೆ ಸೀಮಿತವಲ್ಲ, ಯಾವುದೇ ಕಾರಣಕ್ಕೂ ಅರಣ್ಯದೊಳಗೆ ಬೆಂಕಿ ಸಂಬಂಧಿತ ವಸ್ತುಗಳನ್ನು ಕೊಂಡೊಯ್ಯಬಾರದು.
-ಕೌಶಿಕ್, ವಿದ್ಯಾರ್ಥಿ ಜಗದೀಶ್ ಅಜೆಕಾರು